ಬಂಟ್ವಾಳ/ ಹೊಸದಿಲ್ಲಿ: ನಂದಾವರದ ಕೆಲವು ಮನೆಗಳಿಗೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಮೂವರು ಆರೋಪಿಗಳನ್ನು ಬಂಧಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಬಿಹಾರದ ಪಟ್ನಾಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಂದಾವರ ನಿವಾಸಿಗಳಾದ ಮಹಮ್ಮದ್ ಸಿನಾನ್, ಸರ್ಫರಾಜ್ ನವಾಜ್ ಹಾಗೂ ಇಕ್ಬಾಲ್ ಎಂಬವರನ್ನು ಬಂಧಿಸಿದ್ದು, ಓರ್ವನನ್ನು ಬಂಧಿಸಿಲ್ಲ. ಮಾ. 5ರಂದು ನಂದಾವರಕ್ಕೆ ದಾಳಿ ನಡೆಸಿದ ಎನ್‌ಐಎ ತಂಡ ಒಟ್ಟು ನಾಲ್ವರು ಆರೋಪಿಗಳನ್ನು ವಿಚಾರಣೆ ನಡೆಸಿತ್ತು.
ಸಾಕಷ್ಟು ಸಮಯ ತೀವ್ರ ವಿಚಾರಣೆ ನಡೆಸಿದ ಬಳಿಕ ಮೂವರು ಆರೋಪಿಗಳ ಬಂಧನ ಪ್ರಕ್ರಿಯೆ ನಡೆಸಿ, ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಆರೋಪಿಗಳನ್ನು ತನ್ನ ಕಸ್ಟಡಿಗೆ ಪಡೆದ ಎನ್‌ಐಎ ತಂಡ ಹೆಚ್ಚಿನ ವಿಚಾರಣೆಯ ದೃಷ್ಟಿಯಿಂದ ಪಟ್ನಾಕ್ಕೆ ಕರೆದುಕೊಂಡು ಹೋಗಿರುವುದಾಗಿ ಮೂಲಗಳು ತಿಳಿಸಿದೆ.
ಬಂಧಿತ ಆರೋಪಿಗಳ ಬ್ಯಾಂಕ್ ಖಾತೆಯ ಹಣಕಾಸಿನ ವ್ಯವಹಾರದ ಕುರಿತು ತನಿಖೆ ನಡೆಸಿದ ಸಂದರ್ಭದಲ್ಲಿ ನಂದಾವರದ ವ್ಯಕ್ತಿಯೊಬ್ಬನ ಖಾತೆಯಿಂದ ಈ ಆರೋಪಿಗಳ ಖಾತೆಗೆ ಹಣ ಜಮೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಆತನ ಬ್ಯಾಂಕ್ ಖಾತೆಯ ಕುರಿತು ಕಣ್ಣಿಟ್ಟು ಸಾಕಷ್ಟು ಮಾಹಿತಿ ಕಲೆ ಹಾಕಿಕೊಂಡು ನಂದಾವರದಲ್ಲಿ ಆತನ ಮನೆ ಮೇಲೆ ದಾಳಿ ನಡೆಸಿದೆ. ನಂದಾವರದ ದಾಳಿಯ ಪ್ರಕರಣದಲ್ಲಿ ಪ್ರಧಾನ ಆರೋಪಿ ಯಾರು ಎಂಬುದು ತಿಳಿದು ಬಂದಿಲ್ಲ. ಉಳಿದಂತೆ ಆತನಿಗೆ ನೆರವು ನೀಡಿರುವುದಕ್ಕೆ ಸಂಬಂಧಿಸಿ ಎನ್‌ಐಎ ಬಂಧನ ನಡೆಸಿದೆ ಎನ್ನಲಾಗಿದೆ.
ಇದೇವೇಳೆ, ಪಿಎಫ್ಐಗೆ ನಿಷೇಧ ಹೇರಲಾಗಿದ್ದರೂ ಅದಕ್ಕೆ ಹವಾಲಾ ಮೂಲಕ ವಿತ್ತೀಯ ನೆರವು ನೀಡುವ ಜಾಲ ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಜತೆಗೆ ಐವರನ್ನು ಬಂಧಿಸಲಾಗಿದೆ. ಕೇರಳದ ಕಾಸರಗೋಡು, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೇಂದ್ರ ತನಿಖಾ ಸಂಸ್ಥೆ ದಾಳಿ ನಡೆಸಿ ಐವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜಾಲ ಬಯಲಾಗಿದೆ ಎಂದು ಹೊಸದಿಲ್ಲಿಯಲ್ಲಿ ಎನ್‌ಐಎ ಸಂಸ್ಥೆ ತಿಳಿಸಿದೆ.
ಹೊಸದಿಲ್ಲಿಯಲ್ಲಿ ದಾಳಿಯ ಬಗ್ಗೆ ಮಾಹಿತಿ ನೀಡಿದ ಎನ್‌ಐಎ ವಕ್ತಾರರು, ರವಿವಾರದಿಂದ ಕೇರಳದ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳ ಎಂಟು ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹಲವಾರು ಡಿಜಿಟಲ್ ವಸ್ತುಗಳನ್ನು, ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅವುಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಕೋಟ್ಯಂತರ ರೂ. ಮೌಲ್ಯದ ಹಣಕಾಸು ವರ್ಗಾವಣೆಯಾದದ್ದು ದೃಢಪಟ್ಟಿದೆ ಎಂದಿದ್ದಾರೆ.
ಸಕ್ರಿಯರಾಗಿದ್ದರು
ಕೇರಳ ಮತ್ತು ಕರ್ನಾಟಕದಲ್ಲಿ ಬಂಧಿಸಲಾಗಿರುವರನ್ನು ತನಿಖೆಗೆ ಒಳಪಡಿಸಿದಾಗ ಅವರೆಲ್ಲರೂ ನಿಷೇಧಿತ ಸಂಘಟನೆ ಜತೆಗೆ ನಂಟು ಇರಿಸಿಕೊಂಡು ಕಾನೂನು ಬಾಹಿರವಾಗಿ ದೇಶದ ಹೊರಗಿನಿಂದ ನಿಧಿ ಸಂಗ್ರಹಣೆ, ಕುಕೃತ್ಯಗಳನ್ನು ನಡೆಸಲು ಮುಂದಾಗಿದ್ದರು. ಮೊಹಮ್ಮದ್ ಸಿನಾನ್, ಸಫìರಾಜ್ ನವಾಜ್ ಬ್ಯಾಂಕ್‌ಗಳಲ್ಲಿ ಸಂಘಟನೆಯ ಹೆಸರಲ್ಲಿ ದುಬಾೖ ಮತ್ತು ಅಬುಧಾಬಿಯಿಂದ ಸಂಗ್ರಹಿಸಿದ್ದ ಮೊತ್ತವನ್ನು ಠೇವಣಿ ಇರಿಸಿದ್ದ ಅಂಶ ಬೆಳಕಿಗೆ ಬಂದಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.