Advertisement
ನಿಷೇಧಿತ ಸಂಘಟನೆಯ ಹಣಕಾಸು ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ, ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿದ್ದ ಪಿಎಫ್ಐನ 37 ಬ್ಯಾಂಕ್ ಖಾತೆಗಳು ಹಾಗೂ ಅದರ 19 ನಾಯಕರಿಗೆ ಸೇರಿರುವ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ಎನ್‌ಐಎ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದೆ.
ಪಿಎಫ್ಐನ 12 ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಒಟ್ಟು 19 ಮಂದಿಯ ವಿರುದ್ಧ ಆರೋಪ ಹೊರಿಸಲಾಗಿದೆ. ಕೋಮು ಲೆಕ್ಕಾಚಾರದಲ್ಲಿ ದೇಶವನ್ನು ಇಬ್ಭಾಗಿಸುವುದೇ ಪಿಎಫ್ಐ ಉದ್ದೇಶವಾಗಿತ್ತು ಎಂದು ಎನ್‌ಐಎ ತಿಳಿಸಿದೆ. ದೇಶದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಆಡಳಿತ ಮಾದರಿಯನ್ನು ಕಿತ್ತುಹಾಕಿ, ಶರಿಯಾ ಕಾನೂನಿನೊಂದಿಗೆ ಇಸ್ಲಾಮಿಕ್ ಕ್ಯಾಲಿಫೇಟ್ ಸ್ಥಾಪಿಸುವುದೇ ಇವರ ಕಟ್ಟಕಡೆಯ ಗುರಿಯಾಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ವೇತನ ರೂಪದಲ್ಲಿ ಹಣ:
ನಿಷೇಧಿತ ಸಂಘಟನೆಯು ದೇಶಾದ್ಯಂತ ಇರುವ ತನ್ನ ಉಗ್ರ ಸದಸ್ಯರಿಗೆ ಮತ್ತು ಶಸ್ತ್ರಾಸ್ತ್ರ ತರಬೇತಿ ನೀಡುವವರಿಗೆ “ವೇತನದ ರೂಪ’ದಲ್ಲಿ ಹಣಕಾಸು ಸಂದಾಯ ಮಾಡುತ್ತಿತ್ತು. ಪಿಎಫ್ಐ ಸದಸ್ಯತ್ವ ಪಡೆದವರಿಗೆ ಗೌಪ್ಯ ಮತ್ತು ವಿಧೇಯತೆಯ ಪ್ರಮಾಣ ಮಾಡಿಸಿಕೊಂಡು, ಅವರನ್ನು ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಅಣಿಗೊಳಿಸುವ ವ್ಯವಸ್ಥಿತ ಕಾರ್ಯತಂತ್ರವನ್ನು ಸಂಘಟನೆ ರೂಪಿಸಿತ್ತು. ಅತ್ಯುತ್ತಮ ತರಬೇತಿ ಪಡೆದ ಪಿಎಫ್ಐ ಆರ್ಮಿ ರೂಪಿಸುವ ಉದ್ದೇಶದಿಂದ ದೇಶದಾದ್ಯಂತ ಅತಿ ಹೆಚ್ಚು ಪ್ರಭಾವಕ್ಕೊಳಗಾದ ಯುವಕರಿಗೆ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತಿತ್ತು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದೂ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
Related Articles
ಬೆಂಗಳೂರು, ಚೆನ್ನೈ, ಕಲ್ಲಿಕೋಟೆ, ಹೈದರಾಬಾದ್ ಸೇರಿದಂತೆ 10 ರಾಜ್ಯಗಳಲ್ಲಿ ಪಿಎಫ್ಐ ಹೊಂದಿದ್ದ 37 ಬ್ಯಾಂಕ್ ಖಾತೆಗಳು ಮತ್ತು ಅದರ 19 ಸದಸ್ಯರು ಹೊಂದಿದ್ದ 40 ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸಲಾಗಿದೆ. ಈ ಮೂಲಕ ಪಿಎಫ್ಐನ ಹಣಕಾಸು ವಹಿವಾಟಿಗೆ ಮೂಗುದಾರ ಹಾಕಲಾಗಿದೆ ಎಂದೂ ಎನ್‌ಐಎ ಹೇಳಿದೆ.
Advertisement