Advertisement

6 ರಾಜ್ಯಗಳ 13 ಕಡೆ ದಾಳಿ: ಎನ್‌ಐಎ ಬೃಹತ್‌ ಕಾರ್ಯಾಚರಣೆ; ರಾಜ್ಯದಲ್ಲಿ ಮೂವರ ವಿಚಾರಣೆ

12:51 AM Aug 01, 2022 | Team Udayavani |

ತುಮಕೂರು / ಭಟ್ಕಳ / ಹೊಸದಿಲ್ಲಿ: ನಿಷೇಧಿತ ಐಸಿಸ್‌ ಉಗ್ರ ಸಂಘಟನೆಯ “ಡಿಜಿಟಲ್‌ ಕಾರ್ಯಕರ್ತ’ರಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದ ಮೇಲೆ ಕರ್ನಾಟಕ ಸೇರಿದಂತೆ ಒಟ್ಟು 7 ರಾಜ್ಯಗಳಲ್ಲಿ ರವಿವಾರ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬೃಹತ್‌ ಕಾರ್ಯಾಚರಣೆ ಕೈಗೊಂಡಿದೆ.

Advertisement

ಐಸಿಸ್‌ ಜತೆ ಆನ್‌ಲೈನ್‌ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ತುಮಕೂರಿನ ಎರಡು ಕಡೆ ಎನ್‌ಐಎ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದು, ಮೂವರು ಶಂಕಿತರನ್ನು ವಿಚಾರಣೆ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ಕೊಟ್ಟು ಕಳುಹಿಸಿದ್ದಾರೆ.

ಮೆಡಿಕಲ್‌ ಕಾಲೇಜು ವಿದ್ಯಾರ್ಥಿ ವಿಚಾರಣೆ
ತುಮಕೂರಿನ ಎಚ್‌ಎಂಎಸ್‌ ಯುನಾನಿ ಕಾಲೇಜಿನಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಸಾಜಿದ್‌ ಮಕ್ರಾನಿ ಎಂಬಾತನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತುಮಕೂರಿನ ಬಾಡಿಗೆ ಮನೆಯ ಮೇಲೆ ಮುಂಜಾನೆ 4ರ ಸುಮಾರಿಗೆ 20 ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಈತ ಐಸಿಸ್‌ ಸದಸ್ಯರ ಜತೆ ಸಂಪರ್ಕ ಹೊಂದಿದ್ದು, ಸಂಘಟನೆ ಬಲಗೊಳ್ಳಲು ಸಹಾಯ ಮಾಡುತ್ತಿದ್ದ ಎಂಬ ಆರೋಪ ಇತ್ತು. ಈತನ ಮನೆಯಲ್ಲಿದ್ದ ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಕೆಲವು ದಾಖಲೆ ಗಳನ್ನು ಜಪ್ತಿ ಮಾಡಲಾಗಿದೆ.

ಸತತ 6 ತಾಸುಗಳ ಕಾಲ ತಪಾಸಣೆ ನಡೆಸಿ, ಅನಂತರ ಸಾಜಿದ್‌ನನ್ನು ಬೆಂಗಳೂರಿನ ಎನ್‌ಐಎ ಕಚೇರಿಗೆ ಕರೆತರಲಾಯಿತು. ರಾತ್ರಿ 9ರ ವರೆಗೆ ವಿಚಾರಣೆ ನಡೆಸಿ, ದಿಲ್ಲಿಯ ಎನ್‌ಐಎ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್‌ ಕೊಟ್ಟು ಕಳುಹಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಸಾಜಿದ್‌ ಮಕ್ರಾನಿ ಸೇರಿ ಒಟ್ಟು ನಾಲ್ಕು ಮಂದಿ ಬಾಡಿಗೆ ಪಡೆದಿದ್ದರು ಎಂದು ಮನೆ ಮಾಲಕ ರಂಗಸ್ವಾಮಿ ತಿಳಿಸಿದ್ದಾರೆ.

Advertisement

ಇಬ್ಬರು ಸಹೋದರರ ವಿಚಾರಣೆ, ಬಿಡುಗಡೆ
ಭಟ್ಕಳದಲ್ಲಿ ಇಬ್ಬರು ಸಹೋದರರನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿ ದಿಲ್ಲಿಗೆ ಬರುವಂತೆ ನೋಟಿಸ್‌ ನೀಡಿದ್ದಾರೆ. ಭಟ್ಕಳ ನಗರದ ಮುಖ್ಯ ರಸ್ತೆ ನಿವಾಸಿ ಅಬ್ದುಲ್‌ ಮುಕ್ತದಿರ್‌ ಮತ್ತು ಆತನ ಸಹೋದರನನ್ನು ಎನ್‌ಐಎ ಮುಂಜಾನೆ 5ರ ಸುಮಾರಿಗೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದೆ.

ಮನೆ ಶೋಧ
ಎನ್‌ಐಎ ಅಧಿಕಾರಿಗಳು ಸಹೋದರರಿಬ್ಬರನ್ನು ವಶಕ್ಕೆ ಪಡೆದಿದ್ದರು. ಅಲ್ಲಿಂದ ಅವರನ್ನು ವಿಚಾರಣೆಗಾಗಿ ಮಂಕಿಗೆ ಕರೆದೊಯ್ದು ಪ್ರಶ್ನಿಸಿದ್ದಾರೆ. ಅಬ್ದುಲ್‌ ಮುಕ್ತದಿರ್‌ ಪ್ರಿಂಟಿಂಗ್‌ ಕೆಲಸ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಐಸಿಸ್‌ ಬಗ್ಗೆ ಮೃದು ಧೋರಣೆ ಹೊಂದಿದ್ದಲ್ಲದೆ ಕಮೆಂಟ್‌ಗಳನ್ನು ಕೂಡ ಮಾಡುತ್ತಿದ್ದ ಎನ್ನಲಾಗಿದೆ. ಐಸಿಸ್‌ ಬರಹಗಳನ್ನು ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದ ಎಂಬ ಸಂಶಯದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಈಗ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕ ಮೂಲದ ವಿದ್ಯಾರ್ಥಿ ಬಂಧನ
ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶ, ಗುಜರಾತ್‌, ತೆಲಂಗಾಣ, ಝಾರ್ಖಂಡ್‌, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಲ, ರಾಜಸ್ಥಾನದಲ್ಲೂ ಎನ್‌ಐಎ ರವಿವಾರ ದಾಳಿ ನಡೆಸಿದೆ. ಉ. ಪ್ರದೇಶದ ದಿಯೋಬಂದ್‌ನಲ್ಲಿ ಕಲಿಯುತ್ತಿದ್ದ ಕರ್ನಾಟಕದ ಮೂಲದ ಮದರಸಾ ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಹಲವು ಭಾಷೆಗಳಲ್ಲಿ ಪರಿಣತನಾಗಿರುವ ಫಾರೂಕ್‌, ಸೋಷಿಯಲ್‌ ಮೀಡಿಯಾ ಆ್ಯಪ್‌ ಮೂಲಕ ಪಾಕ್‌ ಐಎಸ್‌ಐ ಜತೆ ಸಂಪರ್ಕ ಸಾಧಿಸಿದ್ದ ಎಂದು ಮೂಲಗಳು ತಿಳಿಸಿವೆ. ರವಿವಾರದ ದಾಳಿಯಲ್ಲಿ ಐಸಿಸ್‌ ಪರ ಮೃದು ಧೋರಣೆ ಹೊಂದಿರುವ ಒಟ್ಟು 25 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ಪೈಕಿ ತಮಿಳುನಾಡಿನಲ್ಲಿ ಬಂಧಿಸಲ್ಪಟ್ಟ ಆಸಿಫ್ ಮುಸ್ತೀನ್‌ ಮತ್ತು ಆತನ ಸಹಚರ ಯಾಸಿರ್‌ ನವಾಬ್‌ ಜಾನ್‌ನ ಮನೆಯಲ್ಲಿ ಚಾಕು, ಕಪ್ಪು ಐಸಿಸ್‌ ಧ್ವಜ, ಪ್ರಚೋದನಕಾರಿ ಸಾಹಿತ್ಯ ಹಾಗೂ ಡಿಜಿಟಲ್‌ ಮೀಡಿಯಾ ಸಾಧನಗಳು ಸಿಕ್ಕಿವೆ.

ಐಸಿಸ್‌ ಲೇಖನ ಭಾಷಾಂತರ ಮಾಡುತ್ತಿದ್ದ  ಶಂಕಿತರು
ಬೆಂಗಳೂರು: ನಿಷೇಧಿತ ಐಸಿಸ್‌ ಸಂಘಟನೆ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಎನ್‌ಐಎಯಿಂದ ಪ್ರಾಥಮಿಕ ವಿಚಾರಣೆಗೆ ಒಳಪಟ್ಟ ಮೂವರು ಶಂಕಿತರು ಐಸಿಸ್‌ ಸಂಘಟನೆಯ ಸಾಹಿತ್ಯಗಳನ್ನು ಅರೇಬಿಕ್‌ನಿಂದ ಕನ್ನಡ ಸೇರಿ ಸ್ಥಳೀಯ ಭಾಷೆಗೆ ಭಾಷಾಂತರ ಮಾಡುತ್ತಿದ್ದರು. ಅಲ್ಲದೆ ಎಂಟಿಒ ಆ್ಯಪ್‌ ಮೂಲಕ ಐಸಿಸ್‌ ಜತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ಐಸಿಸ್‌ ಸಂಘಟನೆಯ ಸಾಹಿತ್ಯಗಳು ಹಾಗೂ ಅರೆಬಿಕ್‌ ಭಾಷೆಯಲ್ಲಿರುವ ಕೆಲವು ಪ್ರಚೋದನಕಾರಿ ಸಾಹಿತ್ಯಗಳು ಮತ್ತು ಬರಹಗಳನ್ನು ಶಂಕಿತರು ಕನ್ನಡ, ಮರಾಠಿ, ಉರ್ದು ಹಾಗೂ ಇತರ ಭಾಷೆಗಳಿಗೆ ಭಾಷಾಂತರ ಮಾಡುತ್ತಿದ್ದರು. ಅನಂತರ ಆನ್‌ಲೈನ್‌ ಮೂಲಕವೇ ಕಳುಹಿಸುತ್ತಿದ್ದರು. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಅದಕ್ಕೆ ಹಣ ಪಡೆಯುತ್ತಿದ್ದರೇ ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next