ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಜೀವ ಬಾಂಬ್ ಪತ್ತೆಯಾದ ಪ್ರಕರಣದ ತನಿಖೆ ಚುರುಕು ಪಡೆದಿದ್ದು, ಎನ್‌ಐಎ ತಂಡವು ಏರ್‌ಪೋರ್ಟ್ ಮತ್ತು ಬಾಂಬ್‌ನ ನಿಯಂತ್ರಿತ ಸ್ಫೋಟ ನಡೆದ ಕೆಂಜಾರು ಮೈದಾನಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
ಎನ್‌ಐಎಯ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಅಧಿಕಾರಿಗಳು ಏರ್‌ಪೋರ್ಟ್‌ನಲ್ಲಿ ಬಾಂಬ್ ಇರಿಸಲಾಗಿದ್ದ ಸ್ಥಳಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಕೆಂಜಾರು ಮೈದಾನಕ್ಕೆ ತೆರಳಿ ಅಲ್ಲಿ ಪರಿಶೀಲಿಸಿದರು. ಸ್ಥಳದಲ್ಲಿದ್ದ ಕೆಲವು ಸ್ಫೋಟಕ ಅವಶೇಷಗಳನ್ನು ಸಂಗ್ರಹಿಸಿ ತನಿಖೆಗಾಗಿ ಕೊಂಡೊಯ್ದಿದ್ದಾರೆ. ಶಂಕಿತ ವ್ಯಕ್ತಿ ಇನ್ನೊಂದು ಬ್ಯಾಗ್ ಇರಿಸಿದ್ದ ಎನ್ನಲಾದ ಸೆಲೂನು ಇರುವ ಕಟ್ಟಡಕ್ಕೆ ಆ ಬಳಿಕ ಭೇಟಿ ನೀಡಿದ ಅಧಿಕಾರಿಗಳು, ನಂತರ ಬಜಪೆ ಠಾಣೆಗೆ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದರು.
ರಿಕ್ಷಾ ಚಾಲಕ, ಸೆಲೂನ್ ಮಾಲೀಕನ ವಿಚಾರಣೆ: ಬಾಂಬ್ ಇರಿಸಿದ ವ್ಯಕ್ತಿ ಸಂಚರಿಸಿದ್ದ ಆಟೋರಿಕ್ಷಾ ಮತ್ತು ಖಾಸಗಿ ಬಸ್‌ಗಳ ಚಾಲಕ, ನಿರ್ವಾಹಕನನ್ನು ಪೊಲೀಸ್ ತನಿಖಾ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ಆದರೆ, ರಿಕ್ಷಾ ಚಾಲಕ ಕೆಂಜಾರು ರಿಕ್ಷಾ ಪಾರ್ಕಿಂಗ್‌ನಲ್ಲಿದ್ದ ರಿಕ್ಷಾದವನಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಂಜಾರು ವ್ಯಾಪ್ತಿಯಲ್ಲಿ ಗ್ರಾಮಾಂತರ ರಿಕ್ಷಾದ ವರು ಮಾತ್ರ ಸಂಚರಿಸುತ್ತಿದ್ದು, ಶಂಕಿತ ವ್ಯಕ್ತಿ ಸಂಚರಿಸಿದ್ದು ವಲಯ ಒಂದು ವ್ಯಾಪ್ತಿಯ ರಿಕ್ಷಾ ಆಗಿದೆ.
ಹೀಗಾಗಿ, ಈ ಬಗ್ಗೆ ನಮಗೇನೂ ಗೊತ್ತಿಲ್ಲ ಅನ್ನುತ್ತಾರೆ ಅಲ್ಲಿಯ ಹಿರಿಯ ರಿಕ್ಷಾ ಚಾಲಕರು. ಶಂಕಿತ ವ್ಯಕ್ತಿ ವಿಮಾನ ನಿಲ್ದಾಣಕ್ಕೆ ಸೋಮವಾರ ಹೋಗುವ ಮುನ್ನ ಕೆಂಜಾರಿನ ಸೆಲೂನ್‌ವೊಂದಕ್ಕೆ ತೆರಳಿರುವ ಮಾಹಿತಿಯಿದ್ದು, ತನಿಖಾ ತಂಡ ಈ ಸಂಬಂಧ ಸೆಲೂನ್ ಮಾಲಿಕನ ವಿಚಾರಣೆ ನಡೆಸಿದೆ. ಕಟ್ಟಡದ ಸಿಸಿಟಿವಿಯ ಎಲ್ಲ ದಾಖಲೆಗಳನ್ನು ಸಂಗ್ರಹಿಸಿರುವ ಪೊಲೀಸರು ಶಂಕಿತ ವ್ಯಕ್ತಿಯ ಚಲನವಲನಗಳ ದೃಶ್ಯಗಳನ್ನು ಕಲೆ ಹಾಕಿದ್ದಾರೆ.
ಎಫ್ಎಸ್‌ಎಲ್ ವರದಿಯ ಬಳಿಕ ನಿಖರ ಮಾಹಿತಿ: ಬಾಂಬ್‌ನ ಅವಶೇಷಗಳನ್ನು ಈಗಾಗಲೇ ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿಕೊಡಲಾಗಿದೆ. ಅದರ ವರದಿ ಬಂದ ಬಳಿಕ ಬಾಂಬ್ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದು ಬರಲಿದೆ. ಬ್ಯಾಗ್‌ನಲ್ಲಿ ಇರಿಸಿದ್ದ ಸ್ಫೋಟಕಗಳ ಪ್ರಮಾಣ, ತೀವ್ರತೆ ಮತ್ತು ಮಾದರಿ ಬಗ್ಗೆ ಸಂಪೂರ್ಣ ವಿವರ ಲಭ್ಯವಾಗಲಿದೆ. ವರದಿ ಅಂತಿಮವಾಗಲು ಸ್ವಲ್ಪ ಸಮಯ ಅಗತ್ಯ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದು ಬ್ಯಾಗ್ ಎಲ್ಲಿ?: ಶಂಕಿತ ವ್ಯಕ್ತಿಯು ಎರಡು ಬ್ಯಾಗ್‌ಗಳೊಂದಿಗೆ ಕೆಂಜಾರ್ ಸೆಲೂನ್‌ಗೆ ಭೇಟಿ ನೀಡಿದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದು, ಏರ್‌ಪೋರ್ಟ್‌ನಲ್ಲಿ ಒಂದು ಬ್ಯಾಗ್ ಮಾತ್ರ ಲಭಿಸಿದೆ. ಆದರೆ, ಸೆಲೂನ್‌ನಲ್ಲಿ ಇಡಲು ಯತ್ನಿಸಿದ್ದ ಇನ್ನೊಂದು ಬ್ಯಾಗನ್ನು ಸ್ವಲ್ಪ ಸಮಯದ ಬಳಿಕ ಶಂಕಿತ ವ್ಯಕ್ತಿಯೇ ವಾಪಸ್ ಕೊಡೊಯ್ದಿರುವ ಹಿನ್ನೆಲೆಯಲ್ಲಿ ಅದು ಈಗ ಎಲ್ಲಿದೆ ಎಂಬುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.