ಹೊಸದಿಲ್ಲಿ: ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ (ಪಿಎಲ್‌ಎಫ್ಐ) ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಝಾರ್ಖಂಡ್‌ನ ವಿವಿಧ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಎನ್‌ಐಎ ದಾಳಿ ನಡೆಸಿದೆ. ಈ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು-ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ. ಪಿಎಲ್‌ಎಫ್ಐ ಪ್ರಮುಖ ನಾಯಕ ದಿನೇಶ್ ಗೋಪ್‌ನನ್ನು ಮೇ 21ರಂದು ಬಂಧಿಸಿದ್ದು, ಪ್ರಸ್ತುತ ಎನ್‌ಐಎ ವಶದಲ್ಲಿದ್ದಾನೆ. ಆತ ನೀಡಿದ ಮಾಹಿತಿ ಆಧರಿಸಿ ಝಾರ್ಖಂಡ್ ಪೊಲೀಸರ ಸಹಾಯದಿಂದ ಖುಂಟಿ, ಗುಮ್ಲಾ ಮತ್ತು ಸಿಮೆxಗಾ ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಎನ್‌ಐಎ ದಾಳಿ ನಡೆಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದ ದಾಳಿಯಲ್ಲಿ 62.3 ಕೆಜಿ ಜಿಲೆಟಿನ್, ಒಂದು ಬಂದೂಕು ಮತ್ತು 1,046 ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಯಿತು. ಮಂಗಳವಾರ ನಡೆದ ದಾಳಿಯಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ವಶಪಡಿಸಿಕೊಳ್ಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.