ನವದೆಹಲಿ: ಪಿಎಫ್‌ಐನ ಫುಲ್ವಾರಿ ಶರೀಫ್ ಘಟಕದ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಬಿಹಾರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಎನ್‌ಐಎ ಭಾನುವಾರ ತಿಳಿಸಿದೆ.
ಆರೋಪಿ ಎಂಡಿ ಇರ್ಷಾದ್ ಆಲಂ ಪೂರ್ವ ಚಂಪಾರಣ್ ಜಿಲ್ಲೆಯ ನಿವಾಸಿಯಾಗಿದ್ದು, ಬಿಹಾರ ಪೊಲೀಸರ ನೆರವಿನೊಂದಿಗೆ ಶನಿವಾರ ಪಾಟ್ನಾದ ಫುಲ್ವಾರಿ ಶರೀಫ್‌ನಿಂದ ಬಂಧಿಸಲಾಗಿದೆ ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಹೇಳಿಕೆಯಲ್ಲಿ ತಿಳಿಸಿದೆ.
“ತನಿಖಾ ಮಾರ್ಗದರ್ಶನಗಳನ್ನು ಅನುಸರಿಸಿ, ಕಳೆದ ವರ್ಷ ಸೆಪ್ಟೆಂಬರ್ 27 ರಂದು ಪಿಎಫ್‌ಐ ಮೇಲೆ ನಿಷೇಧ ಹೇರಿದ ಹೊರತಾಗಿಯೂ, ಅದರ ನಾಯಕರು, ಕಾರ್ಯಕರ್ತರು ಹಿಂಸಾತ್ಮಕ ಉಗ್ರವಾದದ ಸಿದ್ಧಾಂತವನ್ನು ಪ್ರಚಾರ ಮಾಡುವುದನ್ನು ಮುಂದುವರೆಸಿದ್ದಾರೆ. ಅಪರಾಧಗಳನ್ನು ಮಾಡಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಹ ವ್ಯವಸ್ಥೆಗೊಳಿಸುತ್ತಿದ್ದಾರೆ ಎಂದು ಎನ್‌ಐಎ ಕಂಡುಹಿಡಿದಿದೆ” ಎಂದು ಹೇಳಿಕೆ ತಿಳಿಸಿದೆ.
2022 ರ ಜುಲೈ ನಲ್ಲಿ ನಾಲ್ವರು ಆರೋಪಿಗಳನ್ನು ಫುಲ್ವಾರಿಶರೀಫ್ ಪ್ರದೇಶದಿಂದ ಬಂಧಿಸಲಾಗಿತ್ತು. ಅವರು ತರಬೇತಿಗಾಗಿ ಮತ್ತು ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ನಡೆಸಲು ಒಟ್ಟುಗೂಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು.ಈ ವರ್ಷ ಫೆಬ್ರವರಿಯಲ್ಲಿ ಇನ್ನೂ ಮೂವರನ್ನು ಬಂಧಿಸಲಾಗಿತ್ತು.