Advertisement
ಮೂರ್‍ನಾಲ್ಕು ತಿಂಗಳಲ್ಲಿ ಸುಮಾರು 6ಕ್ಕೂ ಹೆಚ್ಚು ಮಂದಿ ಈ ಎರಡು ಸೇತುವೆಗಳಿಂದ ನದಿಗೆ ಹಾರಿ ಆತ್ಮಹತೆ ಮಾಡಿಕೊಂಡಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸೆ. 28ರಂದು ಪಾಣೆ ಮಂಗಳೂರಿನ ಸೇತುವೆಯಿಂದ ಒಂದೇ ಕುಟುಂಬದ ಮೂವರು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಹೊರ ಜಿಲ್ಲೆಗಳಿಂದಲೂ ಆತ್ಮಹತ್ಯೆಗಾಗಿ ಇಲ್ಲಿಗೆ ಬರುತ್ತಿರುವುದು ಆತಂಕದ ಸಂಗತಿಯಾಗಿದೆ. ಇಂಥ ದುರಂತಗಳನ್ನು ತಡೆಯಲು ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯ ಹೆಚ್ಚಾಗಿದೆ.
ಉಳ್ಳಾಲ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ, ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಸೇತು ವೆಯ ಎರಡೂ ತುದಿಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಸೇತುವೆಯುದ್ದಕ್ಕೂ ಕಬ್ಬಿಣದ ತಂತಿ (ತಡೆ) ಬೇಲಿಯನ್ನು ನಿರ್ಮಿ ಸುವ ಬಗ್ಗೆ ಮಂಗಳೂರಿನ ಪೊಲೀಸ್ ಕಮಿಷನರೆಟ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ.
Related Articles
ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಅವರು ಜು. 29ರಂದು ಉಳ್ಳಾಲ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿ ಕೊಂಡ ಬಳಿಕ ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ಬಂದು ಸಾವಿಗೆ ಶರಣಾಗುವುದು ಹೆಚ್ಚಾಗಿದೆ. ಸಿದ್ಧಾರ್ಥ್ ಪ್ರಕರಣ ಸಹಿತ 3 ತಿಂಗಳ ಅವಧಿಯಲ್ಲಿ ಇಲ್ಲಿ ಓರ್ವ ಯುವತಿ ಸಹಿತ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಮತ್ತಿಬ್ಬರನ್ನು ರಕ್ಷಿಸಲಾಗಿದೆ. ಸೇತುವೆ ಬಳಿ ದ್ವಿಚಕ್ರ ವಾಹನ ನಿಲ್ಲಿಸಿ ನಾಪತ್ತೆಯಾದ ಓರ್ವರು ಇನ್ನೂ ಪತ್ತೆಯಾಗಿಲ್ಲ.
Advertisement
ಪಾಣೆ ಮಂಗಳೂರು ಸೇತುವೆಯಿಂದ ಹಾರಿ ಒಂದೇ ಕುಟುಂಬದ ಮೂವರು ನದಿಗೆ ಹಾರಿದ್ದಾರೆ. ಇವೆಲ್ಲವೂ ಈ ಎರಡು ಸೇತುವೆಗಳು ಈಗ ಆತ್ಮಹತ್ಯೆ ಸ್ಪಾಟ್ ಆಗುತ್ತಿದೆ ಎಂಬ ಮಾತನ್ನು ಪುಷ್ಟೀಕರಿಸುತ್ತಿದೆ.
ತಡೆ ಬೇಲಿ ಪ್ರಸ್ತಾವನೆ ತಾಂತ್ರಿಕ ತಜ್ಞರಿಗೆ ಸಲ್ಲಿಕೆಮಂಗಳೂರು ತಲಪಾಡಿ ಮಧ್ಯೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಇರುವುದರಿಂದ ಜಪ್ಪಿನಮೊಗರು ಸಮೀಪ ನೇತ್ರಾವತಿ ನದಿಗೆ ಎರಡು ಸೇತುವೆಗಳಿವೆ. ಇವು ತಲಾ 840 ಮೀ. ಉದ್ದ ಇದೆ. ಇವುಗಳ ಎರಡೂ ಬದಿಗಳಿಗೆ ತಂತಿ ಬೇಲಿ ನಿರ್ಮಿಸಬೇಕಾಗಿದೆ. ಪೊಲೀಸ್ ಕಮಿಷನರೆಟ್ ವತಿಯಿಂದ ಎನ್‌ಎಚ್‌ಎಐಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಎರಡೂ (ಉಳ್ಳಾಲ) ಸೇತುವೆಗಳಿಗೆ ಎರಡೂ ಬದಿ 10 ಅಡಿ ಎತ್ತರಕ್ಕೆ ಪೂರ್ತಿಯಾಗಿ ಕಬ್ಬಿಣದ ವೈರ್ ಹಾಕಿ ತಡೆ ಬೇಲಿ ನಿರ್ಮಿಸಬೇಕು ಎಂದು ನಮೂದಿಸಲಾಗಿದೆ. ಪ್ರಸ್ತಾವನೆ ತಾಂತ್ರಿಕ ತಜ್ಞರಿಗೆ ಸಲ್ಲಿಕೆ: ಎನ್‌ಎಚ್‌ಎಐ
ಬೇಲಿ ಮಾಡುವ ಪ್ರಸ್ತಾವ ಸೇತುವೆ ನಿರ್ಮಿಸುವಾಗ ತಯಾರಿಸಿದ ಮೂಲ ಯೋಜನೆಯಲ್ಲಿ ಇರಲಿಲ್ಲ. ಹಾಗಾಗಿ ಅದಕ್ಕೆ ತಗಲುವ ವೆಚ್ಚವನ್ನು ಹೆಚ್ಚುವರಿ ಎಂದು ಪರಿಗಣಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಫೆನ್ಸಿಂಗ್ ಕುರಿತಂತೆ ಅಂದಾಜು ಪತ್ರ (ಎಸ್ಟಿಮೇಟ್) ತಯಾರಿಸುವ ಬಗ್ಗೆ ಹಾಗೂ ಸೇತುವೆಗಳ ಉದ್ದಕ್ಕೂ ಎರಡೂ ಬದಿ ತಡೆಬೇಲಿ ನಿರ್ಮಾಣದ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಕನ್ಸಲ್ಟೆಂಟ್ ಎಂಜಿನಿಯರ್‌ಗೆ (ತಾಂತ್ರಿಕ ಸಲಹೆಗಾರರಿಗೆ) ಸಲ್ಲಿಸಲಾಗಿದೆ. ಅವರ ವರದಿಯನ್ನು ಆಧರಿಸಿ ಮುಂದಿನ ತೀರ್ಮಾನವನ್ನು ಎನ್‌ಎಚ್‌ಎಐ ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ಎನ್‌ಎಚ್‌ಎಐ ಕಚೇರಿ ಮೂಲಗಳು ತಿಳಿಸಿವೆ. ಸಾಕಷ್ಟು ಬಾರಿ ಪತ್ರ ವ್ಯವಹಾರ
ಸಿದ್ಧಾರ್ಥ್ ಪ್ರಕರಣದ ಬಳಿಕ ಉಳ್ಳಾಲದ ಸೇತುವೆಗಳಿಗೆ ಬೇಲಿ ನಿರ್ಮಿ ಸು ವ ಬಗ್ಗೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈ ಸೇತುವೆ ಬಳಿ ಪದೇಪದೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆನ್ಸಿಂಗ್ ಕುರಿತಂತೆ ಸಾಕಷ್ಟು ಬಾರಿ ಪತ್ರ ವ್ಯವಹಾರ ನಡೆಸಲಾಗಿದೆ.
– ಡಾ| ಹರ್ಷ ಪಿ.ಎಸ್., ಪೊಲೀಸ್ ಆಯುಕ್ತರು. ಆತ್ಮಹತ್ಯೆಗೆ ಶರಣಾದವರು/ ಯತ್ನಿಸಿದವರು
-ಜು. 29: ಕೆಫೆ ಕಾಫಿ ಡೇ ಸ್ಥಾಪಕ ಸಿದ್ಧಾರ್ಥ್ ಅವರು ಉಳ್ಳಾಲ ಸೇತುವೆಯ ಬಳಿ ನಿಗೂಢವಾಗಿ ನಾಪತ್ತೆಯಾಗಿ ಜು. 31ರಂದು ಸೇತುವೆಯಿಂದ ಸುಮಾರು 4.5 ಕಿ. ಮೀ. ದೂರ ಹೊಗೆ ಬಜಾರ್ ಐಸ್‌ಪ್ಲಾಂಟ್ ಬಳಿ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. – ಆ.4: ಉರ್ವಸ್ಟೋರಿನ ಎಳನೀರು ವ್ಯಾಪಾರಿ, ಚಿಕ್ಕಮಗಳೂರು ಜಿಲ್ಲೆ ಕಡೂರು ನಿವಾಸಿ ಗಿರೀಶ್ (22) ಅವರು ಉಳ್ಳಾಲ ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಹಾರಿದ ಬಳಿಕ ಪತ್ನಿ ಮತ್ತು ಮಗುವಿನ ನೆನಪಾಗಿ ಈಜುತ್ತಿದ್ದ ಅವರನ್ನು ಸ್ಥಳೀಯರು ರಕ್ಷಿಸಿದ್ದರು. -ಆ. 9: ನಗರದ ಪ್ಲೈವುಡ್ ಕಂಪೆನಿ ಕಾರ್ಮಿಕೆ, ಪುತ್ತೂರು ಬಡಗನ್ನೂರು ಕೋಡಿಯಡ್ಕ ನಿವಾಸಿ ಗಜನೀಶ್ವರಿ ಕೆ. (24) ಅವರು ಉಳ್ಳಾಲ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿದ್ದು, ಎರಡು ದಿನಗಳ ಬಳಿಕ ಆಕೆಯ ಶವ ಸೋಮೇಶ್ವರ ಉಚ್ಚಿಲ ಬಳಿ ಪತ್ತೆಯಾಗಿತ್ತು. -ಆ. 17: ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ರೈಲುಗಳಿಗೆ ಮತ್ತು ರೈಲ್ವೇ ಕಚೇರಿಗೆ ಕುಡಿಯುವ ನೀರು ಸರಬರಾಜು ಮಾಡುವ ಗುತ್ತಿಗೆ ವಹಿಸಿಕೊಂಡಿದ್ದ ಕಡಬ ತಾಲೂಕು ಬಾಳ್ತಿಲ ನಿವಾಸಿ ಸದಾಶಿವ (28) ಅವರು ನದಿಗೆ ಹಾರಿದ್ದರು. ಆ. 25ರಂದು ಎನ್‌ಎಂಪಿಟಿ ಯಿಂದ 12 ಕಿ.ಮೀ. ದೂರ ಸಮುದ್ರದಲ್ಲಿ ಅವರ ಶವ ಪತ್ತೆಯಾಗಿತ್ತು. -ಆ. 30: ನಾಗುರಿಯ ಫೋಟೋಗ್ರಾಫರ್ ಬೆಂಗಳೂರು ಮೂಲದ ಪದ್ಮರಾಜ್ (18) ಉಳ್ಳಾಲ ಸೇತುವೆಯಿಂದ ನದಿಗೆ ಹಾರಿದ್ದು, ಆತನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. -ಸೆ. 11: ನಗರದ ಬಿಜೈ ನ್ಯೂ ರೋಡ್‌ನ 6 ನೇ ಅಡ್ಡ ರಸ್ತೆಯ ನಿವಾಸಿ ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾಶಿವ ರಾವ್ (64) ಅವರು ಉಳ್ಳಾಲ ಸೇತುವೆ ಬಳಿ ಸ್ಕೂಟರ್ ಇಟ್ಟು ನಿಗೂಢವಾಗಿ ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. -ಸೆ. 28: ಕೊಡಗು ಜಿಲ್ಲೆಯ ಕವಿತಾ ಮಂದಣ್ಣ (55), ಅವರ ಪುತ್ರ ಕೌಶಿಕ್ ಮಂದಣ್ಣ (30) ಮತ್ತು ಪುತ್ರಿ ಕಲ್ಪಿತಾ ಮಂದಣ್ಣ (20) ಸಾಕು ನಾಯಿ ಯೊಂದಿಗೆ ಪಾಣೆಮಂಗಳೂರಿನ ಸೇತುವೆಯಿಂದ ನದಿಗೆ ಹಾರಿದ್ದರು. – ಹಿಲರಿ ಕ್ರಾಸ್ತಾ