Advertisement

ಬಹುಮತ ಬಂದ್ರೆ ಆಡಳಿತ,ಇಲ್ಲದಿದ್ರೆ ಪ್ರತಿಪಕ್ಷ: HDD

06:00 AM Oct 03, 2017 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬಹುಮತ ಬಂದರೆ  ಆಡಳಿತ ನಡೆಸುತ್ತೇವೆ, ಇಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ. ಯಾರೊಂದಿಗೂ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಪುನರುಚ್ಚರಿಸಿದ್ದಾರೆ.

Advertisement

ಜೆಡಿಎಸ್‌ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಸಾಮೂಹಿಕ ನಾಯಕತ್ವದಡಿ ಎದುರಿಸಲಾಗುವುದು. ನವೆಂಬರ್‌-ಡಿಸೆಂಬರ್‌ ವೇಳಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.

ಪ್ರಧಾನಿ ನರೇಂದ್ರಮೋದಿ ಮನ್‌ ಕಿ ಬಾತ್‌ ಎಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮ್‌ ಕಿ ಬಾತ್‌ ಅಂತಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷಗಳು ಕೋಟ್ಯಂತರ ರೂ. ಜಾಹೀರಾತು ನೀಡಿ ಮಾರ್ಕೆಟಿಂಗ್‌ ಮಾಡುತ್ತಿವೆ ಎಂದು  ಈ ಸಂದರ್ಭದಲ್ಲಿ ದೇವೇಗೌಡರು ಆಕ್ರೋಶ ವ್ಯಕ್ತಪಡಿಸಿದರು.ಜನತೆಯ ಹಣ ದುಂದು ವೆಚ್ಚ ಮಾಡಿ ನೀಡುವ ಜಾಹೀರಾತುಗಳಿಂದ ಜನರನ್ನು ಮರಳು ಮಾಡಲು ಸಾಧ್ಯವಿಲ್ಲ ಎಂಬುದನ್ನು ಎರಡೂ ಪಕ್ಷಗಳು ತಿಳಿದುಕೊಳ್ಳಬೇಕು ಎಂದೂ ಸಹ ಹೇಳಿದರು.

ಮಾಧ್ಯಮಗಳಿಗೆ ಕೊಡುತ್ತಿರುವ ಜಾಹೀರಾತುಗಳಿಗೂ ವಾಸ್ತವವಾಗಿ ಆಗಿರುವ ಅಭಿವೃದ್ಧಿಗೂ ಅಜ-ಗಜಾಂತರ ವ್ಯತ್ಯಾಸವಿದೆ. ಜನರು ಇದಕ್ಕೆ ಚುನಾವಣೆಯಲ್ಲಿ ಸೂಕ್ತ ತೀರ್ಪು ನೀಡಲಿದ್ದಾರೆ ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳ ಎದುರು ಆರ್ಥಿಕವಾಗಿ ನಾವು ಸೆಣಸಾಡಲು ಆಗುವುದಿಲ್ಲ. ನಮಗೆ ಮಾರ್ಕೆಟಿಂಗ್‌ ಬರುವುದಿಲ್ಲ. ಆದರೂ ರಾಜ್ಯದ ಜನತೆಯ ಹಿತಕ್ಕಾಗಿ ಪ್ರಾದೇಶಿಕ ಪಕ್ಷ ಉಳಿಸುವ ಸಲುವಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

Advertisement

ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಕೇರಳದಲ್ಲಿ ಕಾಂಗ್ರೆಸ್‌ ಅನ್ನು ಎಡಪಕ್ಷಗಳು ಹಿಂದಿಕ್ಕಿವೆ. ರಾಜ್ಯದಲ್ಲಿ ಜೆಡಿಎಸ್‌ ಶಕ್ತಿಶಾಲಿ ಮಾಡುವುದು ನಮ್ಮ ಗುರಿ ಎಂದು ತಿಳಿಸಿದರು.

ಗಾಂಧೀಜಿ ಸತ್ಯ -ಅಹಿಂಸೆ ಪ್ರತಿಪಾದಿಸಿದವರು. ನಾವು ಕಾಂಗ್ರೆಸ್‌ ಹಿನ್ನೆಲೆಯಿಂದ ಬಂದವರು ಆದರೆ, ಯಾರನ್ನೂ ಅನುಕರಿಸುವುದಿಲ್ಲ. ಗಾಂಧೀಜಿ ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯುತ್ತೇವೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next