ಆಕ್ಲೆಂಡ್: ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡೆನ್ ಅವರು ಆಕ್ಲೆಂಡ್‌ನಲ್ಲಿನ ರಾಧಾ ಕೃಷ್ಣ ದೇವಾಲಯಕ್ಕೆ ದಿಢೀರ್ ಭೇಟಿ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೇಗುಲದ ಆವರಣದಲ್ಲಿ ಬಂದು ನಿಲ್ಲುವ ಕಾರಿನಿಂದ ಇಳಿದು, ತಮ್ಮ ಪಾದರಕ್ಷೆಗಳನ್ನು ಕಳಚಿ ಜೆಸಿಂಡಾ ಅವರು ದೇಗುಲವನ್ನು ಪ್ರವೇಶಿಸಿದ ದೃಶ್ಯಗಳು ವೀಡಿಯೋದಲ್ಲಿದೆ. ಒಳ ಬರುತ್ತಿದ್ದಂತೆಯೇ ಆರ್ಡೆನ್ ಎಲ್ಲರಿಗೂ ಕೈಮುಗಿದು ನಮಸ್ಕರಿಸುತ್ತಾರೆ. ಸಂಸ್ಕೃತ ಶ್ಲೋಕ, ಮಂತ್ರಗಳು, ಶಂಖ ನಾದಗಳೊಂದಿಗೆ ಪೂಜೆ ಪ್ರಾರಂಭವಾಗುತ್ತದೆ. ಜೆಸಿಂಡಾ ಅವರು ದೇವರಿಗೆ ಕೈಮುಗಿದು, ಅನಂತರ ತಿಲಕವನ್ನೂ ಹಾಕಿಕೊಳ್ಳುತ್ತಾರೆ.
ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಮುಕ್ತೇಶ್ ಪರ್ದೇಶಿ ಈ ಕುರಿತು ಟ್ವೀಟ್ ಮಾಡಿದ್ದು, ಪ್ರಧಾನಿ ಜೆಸಿಂಡಾ ಅವರು ರಾಧಾಕೃಷ್ಣ ಮಂದಿರಕ್ಕೆ ಭೇಟಿ ನೀಡಿದ ವೇಳೆ ಅವರೊಂದಿಗೆ ಕೆಲವು ಅಮೂಲ್ಯ ಕ್ಷಣಗಳನ್ನು ಕಳೆದಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಜತೆಗೆ, ಪೂಜೆಯ ಬಳಿಕ ಜೆಸಿಂಡಾ ಅವರು ಭಾರತೀಯ ಸಸ್ಯಾಹಾರಿ ಖಾದ್ಯವಾದ ಪೂರಿ, ಛೋಲೆ ಮತ್ತು ದಾಲ್ ಸವಿದಿದ್ದಾರೆ ಎಂದೂ ತಿಳಿಸಿದ್ದಾರೆ.
ಜೆಸಿಂಡಾ ಅವರ ವೀಡಿಯೋ ಈಗ ವೈರಲ್ ಆಗಿದ್ದು, ಸರ್ವಧರ್ಮಗಳನ್ನೂ ಸಮಾನವಾಗಿ ಗೌರವಿಸುವ ನಾಯಕಿ ಎಂದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂದಿರ, ಮಸೀದಿ, ಚರ್ಚುಗಳಿಗೆ ಭೇಟಿ ನೀಡಿದಾಗ, ಅವರ ನಡವಳಿಕೆ ಹಾಗೂ ಚಟುವಟಿಕೆಗಳೇ ಜೆಸಿಂಡಾರನ್ನು ವಿಶ್ವದ ಶ್ರೇಷ್ಠ ನಾಯಕಿ ಎಂಬುದನ್ನು ತೋರಿಸುತ್ತದೆ ಎಂದೂ ಕೆಲವರು ಶ್ಲಾ ಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.