Advertisement

ಸವಾಲು,ಸಂಕಷ್ಟಗಳ ನಡುವೆ ಪತ್ರಿಕೆಗಳು ನಂಬಿಕೆಗೆ ಅರ್ಹ: ಕುಮಾರ್ ಬಂಗಾರಪ್ಪ

08:31 PM Jul 24, 2022 | Vishnudas Patil |

ಸೊರಬ: ಆಧುನಿಕತೆಯ ಭರಾಟೆಯಲ್ಲಿ ಪತ್ರಿಕೆಗಳು ಹಲವು ಸವಾಲುಗಳು ಮತ್ತು ಸಂಕಷ್ಟಗಳ ನಡುವೆ ಜನತೆಗೆ ವಸ್ತುನಿಷ್ಠ ವರದಿಯನ್ನು ತಲುಪಿಸುವ ಮೂಲಕ ನಂಬಿಕೆಗೆ ಅರ್ಹವಾಗಿವೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.

Advertisement

ಭಾನುವಾರ ಪಟ್ಟಣದ ಗುರುಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ನೂತನ ಕಚೇರಿ ಪ್ರಾರಂಭೋತ್ಸವ, ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ತಂತ್ರಜ್ಞಾನಗಳು ಮುಂದುವರೆದಂತೆ ದೃಶ್ಯ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಅತಿ ವೇಗವಾಗಿ ಯುವ ಜನತೆಯನ್ನು ತಲುಪುತ್ತಿವೆ. ಆದರೆ, ದೃಶ್ಯ ಮಾಧ್ಯಮಗಳು ತತಕ್ಷಣದ ಘಟನಾವಳಿಗಳ ಕುರಿತು ವರದಿ ಬಿತ್ತರಿಸಿವೆ, ಆದರೆ, ಪತ್ರಿಕೆಗಳು ವಿಮರ್ಶಾತ್ಮಕವಾಗಿ ವರದಿಗಳನ್ನು ಪ್ರಕಟಿಸುವ ಮೂಲಕ ಶತಮಾನದಿಂದಲೂ ಜನತೆಯನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಆಡಳಿತವನ್ನು ಚುರುಕುಗೊಳಿಸುವ ಪ್ರಯತ್ನ ಮಾಡುತ್ತಿವೆ. ಪತ್ರಿಕೆಗಳು ಏಕ ಮುಖವಾದ ದೃಷ್ಟಿಕೋನ ಹೊಂದಿದಾಗ ಸಮಾಜಕ್ಕೆ ಆತಂಕಕಾರಿಯಾಗುತ್ತವೆ ಎಂದರು.

ರಾಜಾಡಳಿತದ ಅವಧಿಯಲ್ಲಿ ರಾಜ ಮಹಾರಾಜರನ್ನು ಆಧಾರ ಗೌರವದಿಂದ ಕಾಣಲಾಗುತ್ತಿತ್ತು. ತದ ನಂತರ ಪ್ರಜಾಪ್ರಭುತ್ವ ಆಡಳಿತಕ್ಕೆ ಬಂದ ಮೇಲೆ ಪ್ರಜೆಗಳೇ ಪ್ರಭುಗಳಾದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂರು ಅಂಗಗಳಿದ್ದರೂ ಸಹ ನಾಲ್ಕನೇ ಅಂಗವೆಂದು ಪತ್ರಿಕಾ ರಂಗವನ್ನು ಪರಿಗಣಿಸಲಾಗುತ್ತದೆ. ಹಲವು ಪತ್ರಿಕೆಗಳು ಆರಂಭದಿಂದಲೂ ಒಂದೇ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದಿದ್ದರೆ, ಇತ್ತೀಚೆಗೆ ಕೆಲ ಪತ್ರಿಕೆಗಳು ಓದುಗ ಬಯಸುವ ವರದಿ ನೀಡುವ ಮೂಲಕ ಜನತೆಯನ್ನು ಸ್ಪರ್ಧಾತ್ಮಕವಾಗಿ ತಲುಪುತ್ತಿರುವ ನಿದರ್ಶನಗಳಿವೆ. ಪ್ರಸ್ತುತ ದಿನಮಾನಗಳಲ್ಲಿ ಪತ್ರಿಕೆಗಳು ಜಾಹೀರಾತು ಇಲ್ಲದೇ ಪ್ರಕಟಗೊಳಿಸುವುದೇ ಕಷ್ಟ ಎನ್ನುವ ಸ್ಥಿತಿಗೆ ಬಂದು ತಲುಪಿವೆ. ಮುದ್ರಣ ಕಾಗದಕ್ಕೂ ಸರ್ಕಾರದ ಸಹಾಯ ಧನ ನೀಡುವಂತೆ ಒತ್ತಾಯ ಮಾಡುವ ಸ್ಥಿತಿಗೆ ತಲುಪಿವೆ. ಸಣ್ಣ ಪತ್ರಿಕೆಗಳ ಸ್ಥಿತಿ ಸಾಕಷ್ಟು ಸಂಕಷ್ಟದಲ್ಲಿದೆ. ಆದರೂ, ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳು ಮನಸ್ಸಿನ ಅಂತರಾಳದಲ್ಲಿ ಉಳಿಯಲು ಸಾಧ್ಯವಿದೆ. ಇತಿಹಾಸ ಅರಿವಿನ ಜೊತೆಗೆ ಇಂದಿನ ಸ್ಥಿತಿಗತಿಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಪತ್ರಿಕಾ ಮಾಧ್ಯಮದಿಂದ ಮಾತ್ರ ಸಾಧ್ಯ ಎಂದರು.

ಪತ್ರಕರ್ತರ ಸಂಘಕ್ಕೆ ಶೀಘ್ರದಲ್ಲಿಯೇ ನಿವೇಶನ ನೀಡುವ ಕುರಿತು ಯೋಜನೆ ರೂಪಿಸಲಾಗಿದೆ. ಸುಮಾರು 2 ಕೋಟಿ. ರೂ., ವೆಚ್ಚದಲ್ಲಿ ಸುಸಜ್ಜಿತ ಪತ್ರಿಕಾ ಭವನವನ್ನು ನಿರ್ಮಿಸಿಕೊಡಲಾಗುವುದು. ತಾತ್ಕಾಲಿಕವಾಗಿ ಹಳೇ ಗ್ರಂಥಾಲಯದ ಕಟ್ಟಡದಲ್ಲಿ ಕಚೇರಿಗೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪತ್ರಿಕಾಗೋಷ್ಠಿ ಮತ್ತು ಪತ್ರಕರ್ತರು ಒಂದಡೆ ಸೇರಿ ಸಭೆ ಮತ್ತಿತರರ ಕಾರ್ಯಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು.

Advertisement

ಪತ್ರಿಕಾ ದಿನಾಚರಣೆ ಕುರಿತು ವಿಶೇಷ ಉಪನ್ಯಾಸ ನೀಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್ ಟೆಲೆಕ್ಸ್ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರು ಕೇವಲ ಗೌರವ ಧನಕ್ಕೆ ಕಾರ್ಯನಿರ್ವಹಿಸುವ ಜೊತೆಗೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಪತ್ರಕರ್ತರ ಸಂಘವು ಸದಾ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಾಮಾಜಿಕ ಜಾಲತಾಣಗಳು ಹಾಗೂ ದೃಶ್ಯ ಮಾಧ್ಯಮಗಳ ಭರಾಟೆಯ ನಡುವೆಯೂ ಪತ್ರಿಕೆಗಳು ಸ್ವಂತಿಕೆಯನ್ನು ಕಾಯ್ದುಕೊಂಡು ಕಾರ್ಯನಿರ್ವಹಿಸುತ್ತಿವೆ ಎಂದರು.

ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಜೆ.ಎಸ್. ನಾಗರಾಜ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಟಿ. ರಾಘವೇಂದ್ರ, ಉಪಾಧ್ಯಕ್ಷರಾಗಿ ಮುಹಮ್ಮದ್ ಆರೀಫ್, ಖಚಾಂಚಿಯಾಗಿ ಕೆ.ಪಿ. ಪ್ರವೀಣ್ ಕುಮಾರ್, ಸಹ ಕಾರ್ಯದರ್ಶಿಯಾಗಿ ನೋಪಿ ಶಂಕರ ಅಧಿಕಾರ ವಹಿಸಿಕೊಂಡರು. ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಶಿವಪ್ಪ ಹಿತ್ಲರ್ ಪುತ್ರಿಯರಾದ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕಗಳಿಸಿದ ಗಮನಾ ಎಸ್. ಹಿತ್ಲರ್ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಾಧನಾ ಎಸ್. ಹಿತ್ಲರ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವೇಕಾನಂದ ಸದ್ಪಾವನಾ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಸ್.ಎಂ. ನೀಲೇಶ್ ಅವರಿಗೆ ಅಭಿನಂದಿಸಲಾಯಿತು.

ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಯು.ಎಂ. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಜಿಲ್ಲಾ ಉಪಾಧ್ಯಕ್ಷರಾದ ವೈದ್ಯ, ಆರ್.ಎಸ್. ಹಾಲಸ್ವಾಮಿ, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಹಿರಿಯ ಪತ್ರಕರ್ತ ಬಂಡಿಗಡಿ ನಂಜುಡಪ್ಪ, ಯು.ಎನ್. ಲಕ್ಷ್ಮೀಕಾಂತ್, ಜಗನ್ನಾಥಪ್ಪ, ಸೇರಿದಂತೆ ತಾಲೂಕು ಕಾರ್ಯನಿರತ ಪತ್ರಕರ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next