Advertisement

ಪತ್ರಿಕೆ ಪ್ರೇರಣೆ: ಮಳೆಕೊಯ್ಲು ಅಳವಡಿಸಿಕೊಂಡ ಮತ್ತಷ್ಟು ಯಶೋಗಾಥೆ

10:00 PM Jul 15, 2019 | Team Udayavani |

ಮಹಾನಗರ: ಮಳೆ ನಿರೀನ ಸದ್ಬಳಕೆ ಸೇರಿದಂತೆ ಜಲ ಸಾಕ್ಷರತೆ ಕುರಿತಂತೆ ಉದಯವಾಣಿಯು ಹಮ್ಮಿಕೊಂಡಿರುವ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನಕ್ಕೆ ದಿನದಿಂದ ದಿನಕ್ಕೆ ಜನಸ್ಪಂದನೆ ಹೆಚ್ಚಾಗುತ್ತಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಕೊಯ್ಲು ಅಳವಡಿಕೆಯ ಯಶೋಗಾಥೆಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಅಭಿಯಾನವು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಈಗಾಗಲೇ ಸಾಕಷ್ಟು ಯಶಸ್ಸು ಸಾಧಿಸಿದ್ದು, ಜತೆಗೆ, ಇನ್ನಷ್ಟು ಮನೆಯವರನ್ನು ಮಳೆಕೊಯ್ಲು ಅಳವಡಿಸುವತ್ತ ಉತ್ತೇಜಿಸುತ್ತಿದೆ.

Advertisement

ಮಳೆಗಾಲ ಪ್ರಾರಂಭಗೊಂಡು ಒಂದೂವರೆ ತಿಂಗಳು ಕಳೆದಿದೆ. ಆದರೆ, ಇಷ್ಟು ದಿನಗಳಾದರೂ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ನಿರೀಕ್ಷಿತ ಮಳೆಯಾಗದಿರುವುದು ಮುಂದಿನ ಬೇಸಗೆಯಲ್ಲಿ ಜಿಲ್ಲೆಯು ಎದುರಿಸಬಹುದಾಗ ಕುಡಿಯುವ ನೀರಿನ ಸಮಸ್ಯೆ ತೀವ್ರತೆಯ ಮುನ್ಸೂಚನೆ ನೀಡುತ್ತಿದೆ. ಮುಂಗಾರು ಋತುವಿನ ಅರ್ಧಭಾಗ ಈಗಾಗಲೇ ಮುಗಿದಿದ್ದು, ಇನ್ನು ಬಾಕಿ ಉಳಿದಿರುವ ಮಳೆಗಾಲದ ಅವಧಿಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮಳೆಯಾಗಬಹುದು ಎನ್ನುವುದನ್ನು ಊಹಿಸುವುದು ಸದ್ಯದ ಹವಾಮಾನ ಪರಿಸ್ಥಿತಿಯಲ್ಲಿ ಕಷ್ಟಸಾಧ್ಯ.

ಇಂಥಹ ಸನ್ನಿವೇಶದಲ್ಲಿ ಪ್ರತಿದಿನವೂ ನಾಲ್ಕೈದು ಬಾರಿ ಬಂದು ಕಣ್ಮರೆಯಾಗುವ ಮಳೆ ನೀರನ್ನು ಪೋಲಾಗದಂತೆ ಹಿಡಿದಿಟ್ಟುಕೊಳ್ಳುವುದು ಅಥವಾ ಭೂಮಿಯೊಳಗೆ ಇಂಗುವಂತೆ ಮಾಡುವುದಷ್ಟೇ ನಮ್ಮೆಲ್ಲರ ಮುಂದೆ ನೀರಿನ ಸಮಸ್ಯೆಗೆ ಉಳಿದಿರುವ ಪರ್ಯಾಯ ವ್ಯವಸ್ಥೆ. ಈ ಕಾರಣಕ್ಕೆ ಪ್ರತಿಯೊಂದು ಮನೆಯಲ್ಲಿಯೂ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿಕೊಳ್ಳಬೇಕೆನ್ನುವುದು ಉದಯವಾಣಿಯ ಕಳಕಳಿ ಮತ್ತು ಆಶಯವಾಗಿದೆ. ಅಷ್ಟೇಅಲ್ಲ, ಸದ್ಯದ ಮಳೆ ಪರಿಸ್ಥಿತಿ ನೋಡುವಾಗ, ಬೋರ್‌ವೆಲ್‌, ಬಾವಿ-ಕೆರೆ ಹೊಂದಿರುವ ಮನೆಯವರು ಮಳೆಕೊಯ್ಲು ಅಳವಡಿಸಿಕೊಳ್ಳುವುದು ಕೂಡ ಅನಿವಾರ್ಯ ಎನ್ನುವಂತಾಗಿದೆ. ಅಭಿಯಾನದಿಂದ ಉತ್ತೇಜಿತರಾಗಿ ಮಳೆಕೊಯ್ಲು ಅಳವಡಿಸಿಕೊಂಡವರು, ಇತರರಿಗೆ ಮಾದರಿಯಾಗಲು ಹೊರಟಿರುವ ಮತ್ತಷ್ಟು ಮಂದಿಯ ಯಶೋಗಾಥೆಗಳನ್ನು ಪ್ರಕಟಿಸಲಾಗುತ್ತಿದೆ.

ಸುರತ್ಕಲ್‌ನಲ್ಲಿ ಇಂಗುಗುಂಡಿ
ಸುರತ್ಕಲ್‌ ಕೃಷ್ಣಾಪುರದ ವಲೇರಿಯನ್‌ ಕೊರೆಯಾ ಅವರು ಎರಡು ವಾರಗಳ ಹಿಂದೆ ತಮ್ಮ ಮನೆ ಪರಿಸರದಲ್ಲಿ ಇಂಗುಗುಂಡಿ ರಚಿಸಿ ನೀರಿಂಗಿಸುವ ಪ್ರಯತ್ನ ಮಾಡಿದ್ದಾರೆ. ಮನೆಯ ಛಾವಣಿ ಸಹಿತ ಸುತ್ತಮುತ್ತಲಿನ ಪರಿಸರದಲ್ಲಿ ವ್ಯರ್ಥವಾಗಿ ಹರಿದು ಹೋಗುವ ಮಳೆ ನೀರನ್ನು ಗುಂಡಿಗೆ ಬಂದು ಬೀಳುವಂತೆ ಮಾಡಿದ್ದಾರೆ. ಮೇಲ್ಭಾಗದಿಂದ ಗುಂಡಿಯನ್ನು ಮುಚ್ಚಲಾಗಿದೆ. ಇದರಿಂದ ನೀರಿಂಗಿ ಅಂತರ್ಜಲ ಹೆಚ್ಚಾಗುವ ವಿಶ್ವಾಸವನ್ನು ಅವರು ಹೊಂದಿದ್ದಾರೆ.

“ಉದಯವಾಣಿ’ ಪ್ರಕಟಿಸುವ ಮಳೆನೀರು ಕೊಯ್ಲು ಲೇಖನಗಳನ್ನು ಪ್ರತಿದಿನ ಓದುತ್ತಿದ್ದೆ. ಇದರಿಂದ ಪ್ರೇರಣೆಗೊಂಡು ಪ್ರಯತ್ನ ಮಾಡಿದ್ದೇನೆ’ ಎಂದು ವಲೇರಿಯನ್‌ ಕೊರೆಯ ತಿಳಿಸಿದ್ದಾರೆ.

Advertisement

ಉದಯವಾಣಿಯಿಂದಾಗಿ ಮನೆಗೆ ಮಳೆಕೊಯ್ಲು
ಕಳೆದ ಎಪ್ರಿಲ್‌ ತಿಂಗಳಲ್ಲಿ ಉಂಟಾದ ನೀರಿನ ಸಮಸ್ಯೆ ಮೂಡಬಿದಿರೆಯ ಇರುವೈಲ್‌ ರಸ್ತೆಯ ಮಸ್ತಕಟ್ಟೆ ನಿವಾಸಿ ವಿಶ್ವನಾಥ್‌ ಕಾಮತ್‌ ಅವರು ತಮ್ಮ ಮನೆಯಲ್ಲಿ ಮಳೆ ಕೊಯ್ಲು ಮಾಡುವಂತೆ ಮಾಡಿದೆ.

ಮನೆ ಯಂಗಳಲ್ಲಿ ಬಾವಿ ಇದ್ದರೂ ನೀರಿನ ಸಮಸ್ಯೆ ಎದುರಾದ ಹಿನ್ನಲೆಯಲ್ಲಿ ಇದಕ್ಕೆ ಪರಿಹಾರ ಹುಡುಕುವ ಯೋಚನೆಯಲ್ಲಿದ್ದೆವು. ಆ ಸಂದರ್ಭದಲ್ಲಿ ಉದಯವಾಣಿಯಲ್ಲಿ ಮಳೆಕೊಯ್ಲು ಅಭಿಯಾನ ನೋಡಿ ಕಾರ್ಯಕ್ರಮಕ್ಕೆ ಆಗಮಿಸಿದೆವು. ಅಲ್ಲಿ ಪಡೆದ ಮಾಹಿತಿಯಿಂದ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದೆವು. ನಮ್ಮ ಮನೆ 2,500 ಚ.ಅಡಿಯಲ್ಲಿದ್ದು, ಮನೆ ಸಮೀಪ ಬಾವಿ ಇದೆ. ಟೇರೆಸ್‌ಗೆ ಬೀಳುವ ಮಳೆ ನೀರನ್ನು ಪೈಪ್‌ ಮೂಲಕ ಫಿಲ್ಟರ್‌ ಮಾಡಿ ಬಾವಿಗೆ ಬೀಡುತ್ತಿದ್ದೇವೆ. ನನಗೆ 15,500 ರೂ. ಖರ್ಚು ತಗಲಿದೆ. ಮುಂದಿನ ಬಾರಿ ನೀರಿನ ಅಭಾವ ಬಾರದು ಎಂಬ ನಂಬಿಕೆ ಇದೆ ಎಂದು ವಿಶ್ವನಾಥ್‌ ಕಾಮತ್‌ ಹೇಳುತ್ತಾರೆ.

ಬಾವಿ ನೀರಿನ ಬಣ್ಣ ಬದಲಾದಾಗ ಆತಂಕ
ನಾಟೇಕಲ್‌ನ ನಿವಾಸಿ ಶಮೀರ್‌ ಅವರ ಮನೆಯ ಬಾವಿಯ ನೀರಿನ ಬಣ್ಣ ಬದಲಾಗಲು ಆರಂಭವಾದಾಗ ಆತಂಕ ಶುರುವಾಯಿತು. ಅದಕ್ಕಾಗಿ ಮನೆಯಲ್ಲಿ ಮಳೆನೀರು ಕೊಯ್ಲು ಮಾಡಿದ್ದಾರೆ. ಪತ್ರಿಕೆಯಲ್ಲಿ ಮಳೆಕೊಯ್ಲು ಅಭಿಯಾನ ಆರಂಭವಾದ ಬಳಿಕ ಮಳೆ ನೀರಿನ ಕೊಯ್ಲಿನ ಮಹತ್ವ ಅರಿವಾಗಿದೆ. ಆ ಕಾರಣಕ್ಕಾಗಿ ಮನೆಯಲ್ಲಿ ಮಳೆಕೊಯ್ಲು ಆಳವಡಿಸಿದ್ದೇವೆ. ಸುಮಾರು 3,000 ಚದರ ಅಡಿಯ ಮನೆ ಇದ್ದು, ಇಲ್ಲಿನ ಟೆರೇಸ್‌ನಿಂದ ಪೈಪ್‌ ಮೂಲಕ ಮಳೆ ನೀರನ್ನು ಬಾವಿ ಸಮೀಪ ತರಲಾಗಿದೆ. ಅಲ್ಲಿ ಎರಡು ದೊಡ್ಡ ಡ್ರಮ್‌ ಇಟ್ಟು ಅದಕ್ಕೆ ನೀರು ಬೀಳುವಂತೆ ಮಾಡಲಾಗಿದೆ. ಅದರೊಳಗೆ ಫಿಲ್ಟರ್‌ ಆಗಿ ನೀರು ಬಾವಿಗೆ ಸೇರುತ್ತದೆ. ಮುಂದಿನ ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆ ಎದುರಾದರೆ ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ಮಳೆಕೊಯ್ಲು ಅಳವಡಿಸಿದ್ದೇವೆ ಎಂದು ಶಮೀರ್‌ ಹೇಳುತ್ತಾರೆ.

ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
ನೀರಿನ ಸಂರಕ್ಷಯಿಂದ ಪರಿಹಾರ
ನಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮನೆ ಮನೆಗೆ ಮಳೆಕೊಯ್ಲು ಎಂಬ ಅಭಿಯಾನವನ್ನು ರೂಪಿಸಿ ಜನರ ಮನಸ್ಸಲ್ಲಿ ನೀರಿನ ಸಂರಕ್ಷಣೆಗೆ ಮಳೆಕೊಯ್ಲು ನಿಂದ ಪರಿಹಾರ ಕಂಡುಕೊಳ್ಳುವ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ ಉದಯವಾಣಿಯ ಸಾಧನೆ ಜನರ ಮನಸ್ಸಲ್ಲಿ ನೀರಿನ ಸಂರಕ್ಷಣೆ ಉದಯಿಸುವಂತೆ ಮಾಡಿದೆ. ಈ ಅಭಿಯಾನ ಮುಂದುವರಿಯಲಿ ಎಂಬುದು ನಮ್ಮಲ್ಲರ ಆಶಯ.
 - ಮೊಹಮ್ಮದ್‌ ನೌಶಾದ್‌, ಜೆಪ್ಪು

ಉದಯವಾಣಿಗೆ ಅಭಿನಂದನೆ
ಉದಯವಾಣಿಯ “ಮನೆ ಮನೆಗೆ ಕೊಯ್ಲು’ ಅಭಿಯಾನವು ನಮ್ಮನ್ನೆಲ್ಲ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ನೀರಿನ ಸಮಸ್ಯೆಗೆ ಇದರ ಆವಶ್ಯಕತೆ ಇತ್ತು. ಪತ್ರಿಕೆ ಓದಿದ ಜನರು ಇದಕ್ಕೆ ಪೂರಕವಾಗಿ ಅದ್ಭುತವಾಗಿ ಸ್ಪಂದಿಸಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎನ್ನುವ ಅವರ ಹೇಳಿಕೆಗಳೇ ಸಾಕ್ಷಿ. ಈ ಮಳೆಕೊಯ್ಲು ಅಭಿಯಾನದಲ್ಲಿ ಭಾಗಿಯಾದ ಉದಯವಾಣಿಗೆ ಮತ್ತು ಜನರಿಗೆ ಅಭಿನಂದನೆಗಳು.
– ವಿಶ್ವನಾಥ್‌ ಶೆಟ್ಟಿಗಾರ್‌, ಕಾವೂರ್‌

ಉದಯವಾಣಿ- ಸ್ಫೂರ್ತಿಯ ಚಿಲುಮೆ
ಜನರ ಜೀವನದಲ್ಲಿ ಪ್ರಮುಖವಾದ ಹಾಗೂ ದಿನನಿತ್ಯವೂ ಬಳಸಲ್ಪಡುತ್ತಿರುವ ಅತ್ಯಮೂಲ್ಯವಾದ ಅಂಶವೆಂದರೆ ನೀರು. ಇಂತಹ ಶ್ರೇಷ್ಠ ಅಂಶವನ್ನು ಮಳೆಕೊಯ್ಲು ಎಂಬ ವಿಧಾನದ ಮೂಲಕ ಉಳಿತಾಯ ಮಾಡಲು ಮತ್ತು ಅದರ ಆವಶ್ಯಕತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ಉದಯವಾಣಿಯು ಇಂದಿನ ಪೀಳಿಗೆಗೆ ಮಾತ್ರವಲ್ಲದೆ ಮುಂದಿನ ಪೀಳಿಗೆಗೂ ಸ್ಫೂರ್ತಿಯ ಚಿಲುಮೆಯಾಗಿದೆ.
– ಶ್ವೇತಾ, ಮಂಗಳೂರು ವಿವಿ,ಕೊಣಾಜೆ

ಜನರಲ್ಲಿ ಜಾಗೃತಿ ಮೂಡಿಸಿದ ಅಭಿಯಾನ
ಒಂದೆಡೆ ಕಡಿಮೆಯಾಗಿರುವ ಮಳೆಯ ಪ್ರಮಾಣ, ಬೇಸಗೆಯಲ್ಲಿ ತಲೆದೋರುವ ಕುಡಿಯುವ ನೀರಿನ ಸಮಸ್ಯೆಯ ಕುರಿತಾಗಿ ಅವಲೋಕಿಸಿದರೆ ಮುಂದಿನ ದಿನಗಳಲ್ಲಿ ಹನಿ ಹನಿ ನೀರಿಗೂ ಪರದಾಡುವಂತಹ ಪರಿಸ್ಥಿತಿ ಎದುರಾಗಲಿದೆ. ಈ ಸಂದರ್ಭ ಉದಯವಾಣಿ ಹಮ್ಮಿಕೊಂಡ “ಮನೆ ಮನೆಗೆ ಮಳೆ ಕೊಯ್ಲು’ ಅಭಿಯಾನವು ಜನರಲ್ಲಿ ಜಲಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಯಶಸ್ವಿಯಾಗಿದ್ದು, ಜಲಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಿರುವ ಉದಯವಾಣಿ ಪತ್ರಿಕಾ ತಂಡಕ್ಕೆ ಅಭಿನಂದನೆಗಳು.
 - ತಾರಾನಾಥ ಶೆಟ್ಟಿ ,ಬೋಳಾರ

ನೀವು ಅಭಿಪ್ರಾಯ ಹಂಚಿಕೊಳ್ಳಿ
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಒಂದು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಓದುಗರು ಕೂಡ ಈ ಯಶಸ್ವಿ ಅಭಿಯಾನದ ಕುರಿತಂತೆ ತಮ್ಮ ಅಭಿಪ್ರಾಯ, ಅನಿಸಿಕೆ ಅಥವಾ ಸಲಹೆಗಳನ್ನು ಪತ್ರಿಕೆ ಜತೆಗೆ ಹಂಚಿಕೊಳ್ಳಬಹುದು. ಆ ಮೂಲಕ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವುದಕ್ಕೆ ಉತ್ತೇಜನ ನೀಡಬಹುದು. ಆಸಕ್ತರು ತಮ್ಮ ಹೆಸರು, ಸ್ಥಳದ ಜತೆಗೆ ಸಂಕ್ಷಿಪ್ತ ಬರೆಹಗಳನ್ನು ನಿಮ್ಮ ಫೋಟೋ ಸಹಿತ ನಮಗೆ ಕಳುಹಿಸಬಹುದು. ಸೂಕ್ತ ಅಭಿಪ್ರಾಯ-ಸಲಹೆಗಳನ್ನು ಪ್ರಕಟಿಸಲಾಗುವುದು.
9900567000

Advertisement

Udayavani is now on Telegram. Click here to join our channel and stay updated with the latest news.

Next