ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಪಿಯು ಕಾಲೇಜಿನ ಮಸ್ಟರಿಂಗ್ ಡಿ ಮಸ್ಟರಿಂಗ್ ಸಂದರ್ಭ ಅಂಚೆ ಮತಗಳ ಪೆಟ್ಟಿಗೆ, ಚುನಾವಣೆಗೆ ಸಂಬಂಧಪಟ್ಟ ಪರಿಕರ ಪೆಟ್ಟಿಗೆಗಳನ್ನು ಭದ್ರತೆಯ ಕೊಠಡಿಯಲ್ಲಿರಿಸಲು ಸಿಬಂದಿಯ ಜತೆಗೆ ಬೆಳ್ತಂಗಡಿ ತಹಶೀಲ್ದಾರ್ ಸ್ವತಃ ತಲೆಯಲ್ಲಿ ಹೊತ್ತು ಸಾಗಿದ್ದಾರೆ.
ಅಚ್ಚುಕಟ್ಟಾಗಿ ಚುನಾವಣ ಕರ್ತವ್ಯ ನಿರ್ವಹಿಸಿ, ಸಿಬಂದಿಗೆ ಮಾರ್ಗದರ್ಶನ ನೀಡುತ್ತ, ತಾನೇ ಮುಂದೆ ನಿಂತು ಕರ್ತವ್ಯದಲ್ಲಿ ದಕ್ಷತೆ ತೋರಿರುವ ಗಣಪತಿ ಶಾಸ್ತ್ರಿಯವರ ಈ ನಡೆ ಇತರ ಅಧಿಕಾರಿಗಳಿಗೆ ಮಾದರಿಯಾಗುವ ಜತೆಗೆ ಸಿಬಂದಿಗಳಲ್ಲಿ ಅಭಿಮಾನ ಮೂಡಿಸಿದೆ.
ರಾತ್ರಿ 2 ಗಂಟೆಯ ತನಕ ಪ್ರತಿಯೊಂದು ಮತಗಟ್ಟೆಯಿಂದ ಬಂದ ಮತ ಯಂತ್ರಗಳನ್ನು ಕ್ರಮಪ್ರಕಾರ ಇರಿಸಿ, ಬಳಿಕ ಸೂಕ್ತ ಭದ್ರತೆಯೊಂದಿಗೆ ಸುರತ್ಕಲ್ ಎನ್‌ಐಟಿಕೆ ಸ್ಟ್ರಾಂಗ್ ರೂಂಗೆ ಕೊಂಡೊಯ್ಯವವರೆಗೂ ಸಹಾಯಕ ಚುನಾವಣ ಅಧಿಕಾರಿ ಎಚ್.ಆರ್. ನಾಯಕ್, ಎಲ್ಲ ಮಸ್ಟರಿಂಗ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಉತ್ಸಾಹದಿಂದ ತಹಶೀಲ್ದಾರ್ ಜತೆ ಭಾಗವಹಿಸಿದ್ದರು. ಈ ವೇಳೆ ತಹಶೀಲ್ದಾರ್ ಟ್ರಂಕ್ ಹೊತ್ತು ಸಾಗಿದ ಚಿತ್ರ ಸಿಬಂದಿ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಮರುಕಳಿಸಿತು ಸೈನಿಕ ಪ್ರವೃತ್ತಿ
ಗಣಪತಿ ಶಾಸ್ತ್ರಿ 15 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧರಾಗಿ ಸೇವೆ ಸಲ್ಲಿಸಿದವರು. ಸೇನೆಯಿಂದ ನಿವೃತ್ತರಾಗಿ ಬಳಿಕ ಆರೂವರೆ ವರ್ಷ ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ 2017ರ ಅಕ್ಟೋಬರ್‌ನಲ್ಲಿ ಪ್ರೊಬೆಷನರಿ ತಹಶೀಲ್ದಾರ್ ಆಗಿ ಬಳಿಕ 2019 ಜನವರಿಯಲ್ಲಿ ಬೆಳ್ತಂಗಡಿಯ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದರು.