Advertisement

ಮಳೆಬಿಲ್ಲು ಕರಗದೆ ಉಳಿದ ಬಣ್ಣ

01:37 AM Jan 17, 2021 | Team Udayavani |

ಆರೋಗ್ಯದ ಬಗ್ಗೆ  ಇರಲಿ ಕಾಳಜಿ :

Advertisement

“ಹೇ.. ನೀನು ನಿನ್ನ ಮಾಸ್ಕ್ ಎಲ್ಲಿ ಮರೆತೆ. ಅದನ್ನು ಹಾಗೆಲ್ಲ ಮರೆತು ಬಂದರೆ ಎಲ್ಲಿಯೂ ಪ್ರವೇಶ ಸಿಗುವುದಿಲ್ಲ. ಬೇಗ ಹಾಕಿಕೊಂಡು ಬಾ ನಾನು ನಿನಗೆ ಇಲ್ಲೇ ಕಾಯುತ್ತಿರುತ್ತೇನೆ. ಬೇಗ ಬಂದು ಬಿಡು. ಹಾಗೆ ಬರುವಾಗ ನಾನು ಮಾಡಿದ ಈ ಮೆಸೇಜ್‌ ಅನ್ನು ಎಲ್ಲರಿಗೂ ಕಳುಹಿಸಿಬಿಡು. ಅವರು ಅಲ್ಲಿ ಬಂದು ಮತ್ತೆ ಫ‌ಜೀತಿಗೆ ಒಳಗಾಗುವುದು ಬೇಡ.’

ಇದು ಸ್ನೇಹಿತೆಯೊಬ್ಬಳು ವಾಟ್ಸ್‌ಆ್ಯಪ್‌ನಲ್ಲಿ ನನಗೆ ಕಳುಹಿಸಿದ ಸಂದೇಶ. ಇದರಲ್ಲಿ ಏನು ವಿಶೇಷವಿಲ್ಲ. ಆದರೆ ಆರೋಗ್ಯದ ಕಾಳಜಿ ಇದೆ. ಎಲ್ಲ  ಸ್ನೇಹಿತರ ಮೆಸೇಜ್‌ ಬಾಕ್ಸ್ ನಲ್ಲಿ ಅಥವಾ ಬಾಯಿ ಮಾತಲ್ಲಿ ಮಾಸ್ಕ್ ಮರೆತು ಬಂದೆಯಾ ಎಂಬ ಮಾತು ಸಹಜವಾಗಿ ಬಿಟ್ಟಿದೆ.  ಕೋವಿಡ್ ಬಂದಾಗ ಇದ್ದ ಭಯ ಈಗ ನಮಗಿಲ್ಲ. ಆದರೂ ನಮ್ಮ ಆರೋಗ್ಯ ನಮಗೆ ಮುಖ್ಯ. ಇಲ್ಲಿ ನಮ್ಮ ಆರೋಗ್ಯದ ಜತೆಜತೆಗೆ ಇತರರ  ಆರೋಗ್ಯವು ಮುಖ್ಯ ಎನ್ನುವ ಮಾತುಗಳು ತುಂಬಾ ಇಷ್ಟವಾಗುತ್ತದೆ. ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ನಾವು ಒಂದು ಸಣ್ಣ ಕೊಡುಗೆ ಕೊಟ್ಟಂತಾಗುತ್ತದೆ.

ನಾವು ನಮ್ಮ ವಾಟ್ಸ್‌ಆ್ಯಪ್‌ ಮೆಸೇಜ್‌ ಅಥವಾ ಬೇರೆ ಸಾಮಾಜಿಕ ಜಾಲ ತಾಣದಲ್ಲಿ ಮಾಸ್ಕ್ ಧರಿಸುವುದರ ಬಗ್ಗೆ ಮತ್ತು ಧರಿಸುವವರ ಬಗ್ಗೆ ಸಾಕಷ್ಟು ಮಾತುಗಳನ್ನು ಕೇಳಿದ್ದೇವೆ.  ಅಲ್ಲದೆ ಕೋವಿಡ್ ಬಗ್ಗೆ ನಾವು ಮಾಡುವ ಪ್ರತಿ ದೂರವಾಣಿ ಕರೆಯ ಮೊದಲಿಗೂ ಅದನ್ನೇ ಕೇಳುತ್ತೇವೆ. ಮಾಸ್ಕ್ ಎನ್ನುವುದು ಈಗ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದರೂ ನಾನು ನನ್ನ ಸ್ನೇಹಿತೆಗೆ ಧನ್ಯವಾದ ಹೇಳಲೇಬೇಕು. ಏಕೆಂದರೆ ಅವಳ ಮಾಸ್ಕ್ ಧರಿಸಿ ಬಾ ಎಂಬ ಮೆಸೇಜ್‌ನಿಂದ ನಾನು ಮಾಸ್ಕ್ ಧರಿಸಿ ಹೋಗಿ ಒಳ್ಳೆಯ ನಾಗರಿಕನ ಹಾಗೆ ವರ್ತಿಸುವ ಹಾಗಾಯ್ತು. ಮಧುರಾ ಎಲ್‌. ಭಟ್‌, ಉಜಿರೆ

ಆತ್ಮವಿಶ್ವಾಸ ಇರಲಿ,  ಅಹಂಕಾರ ಬೇಡ :

Advertisement

“ಆತ್ಮವಿಶ್ವಾಸ ಇರಲಿ, ಅಹಂಕಾರ ಬೇಡ. ನಾನು ಎನ್ನುವ ಸ್ಥೈರ್ಯ ಇರಲಿ, ನಾನು ಮಾತ್ರವೇ ಎಂಬ ಭ್ರಮೆ ಬೇಡ’ ಗೆಳತಿಯೊಬ್ಬಳ ಫೇಸ್‌ಬುಕ್‌ ವಾಲ್‌ನಲ್ಲಿ ನೋಡಿದ ಸಂದೇಶವಿದು. ನಾವು ಸಣ್ಣಪುಟ್ಟ ಸಾಧನೆಗಳನ್ನು ಮಾಡುತ್ತ ಮೇಲಕ್ಕೇರಿದಂತೆ ಆತ್ಮವಿಶ್ವಾಸ ಬೆಳೆಯ ತೊಡಗುತ್ತದೆ. ಜತೆಗೆ ಸಣ್ಣದೊಂದು ಅಹಂ ಕೂಡ ಹುಟ್ಟುತ್ತದೆ. ಆದರೆ ಆ ಕೂಡಲೇ ಅದನ್ನು ಕಿತ್ತೆಸೆಯದಿದ್ದರೆ ನಾವು ಮುಂದೆ ಆತ್ಮವಿಶ್ವಾಸದೊಂದಿಗೆ ನಮ್ಮವರನ್ನೂ ಕಳೆದುಕೊಳ್ಳಬೇಕಾಗುತ್ತದೆ. ಆದೇ ರೀತಿ ನಾನು ಎನ್ನುವ ಸ್ಥೈರ್ಯ ನಮ್ಮಲ್ಲಿ ಇರಬೇಕು. ಇಲ್ಲವಾದರೆ ಸಾಧನೆಯ ಮೆಟ್ಟಿಲೇರುವುದು ಕಷ್ಟವಿದೆ. ಆದರೆ ನಾನು ಮಾತ್ರ ಎನ್ನುವ ಚಿಂತನೆ ನಮ್ಮೊಳಗೆ ಹುಟ್ಟಿದರೆ ನಾವು ಸ್ವಾರ್ಥಿಗಳಾಗುತ್ತ ಹೋಗುತ್ತೇವೆ. ಇದು ಮುಂದೆ ಅಪಾಯವನ್ನು ತಂದೊಡ್ಡುತ್ತದೆ. ರೇಷ್ಮಾ, ಕಾರ್ಕಳ

ವಿವೇಚನೆ ಜಾಗೃತವಾಗಿರಲಿ :

ಹೀಗೊಂದು ಘಟನೆ. ಬಾಲಕಿಯೊಬ್ಬಳು ಒಂದು ಹಾವನ್ನು ತುಂಬಾ ಪ್ರೀತಿಯಿಂದ ಸಾಕುತಿದ್ದಳು. ಹಾವೂ ಅಷ್ಟೇ.. ಅವಳ ಜತೆಗೆ ಇರುತ್ತಿತ್ತು, ಅವಳ ಜತೆಗೆ ಆಟ, ಊಟ. ಹೀಗೆಯೇ  ಸಮಯ ಕಳೆಯುತ್ತದೆ. ಕೆಲವು ದಿನಗಳ ಅನಂತರ ಹಾವು ಏನು ಕೊಟ್ಟರೂ ತಿನ್ನುವುದಿಲ್ಲ. ಬಾಲಕಿಗೆ ಅತೀವ ಕಳವಳ. ಹಾವಿನ ನಡವಳಿಕೆ ಏಕೆ ಈ ರೀತಿ. ಏನು ಕಷ್ಟವೋ..?ಏನಾದರೂ ಅನಾರೋಗ್ಯವೇ? ಎಂದೆಲ್ಲ ಯೋಚನೆ ಬರುತ್ತಿತ್ತು. ಸರಿ.. ಗೊತ್ತಿರೋ ಪಶುವೈದ್ಯರ ಬಳಿ ವಿಚಾರಿಸುತ್ತಾಳೆ.

ವೈದ್ಯರು ಕೇಳುತ್ತಾರೆ… ಅದು ನಿನ್ನನ್ನು ಸುತ್ತಿ ಮಲಗುತ್ತಿದೆಯೇ?, ದಿನಾ ನಿನ್ನ ಬಳಿಯೇ ಇರುತ್ತದೆಯೇ? ಹಾಗೆಯೇ ಅವರ ಎಲ್ಲ  ಪ್ರಶ್ನೆಗಳಿಗೆ ಉತ್ತರ. ಹೌದು ಆಗಿತ್ತು. ಡಾಕ್ಟರ್‌ ಹೇಳುತ್ತಾರೆ. ಎಚ್ಚರ ಹಾವು ಯಾವಾಗಲೂ ಹಾವೇ. ಅದು ಸಮಯ, ಅವಕಾಶಕ್ಕೆ ಕಾಯುತ್ತಿದೆ. ನಿನ್ನ ಅಳತೆ ಮಾಡಿಯಾಗಿದೆ, ಯಾವಾಗ ನಿನ್ನನ್ನು ಸುತ್ತಿ, ಸಾಯಿಸಿ, ನುಂಗಿ ಮತ್ತು ಯಾವ ರೀತಿ ಜೀರ್ಣಿಸಿಕೊಳ್ಳಲಿ ಎಂದು ಯೋಚಿಸುತ್ತಿದೆ ಎಂದರು. ಅವಳು ಅವಾಕ್ಕಾಗುತ್ತಾಳೆ. ನಮ್ಮ ಸುತ್ತಲಿನ ಪ್ರಪಂಚ ಕೂಡ ಇದೇ ರೀತಿ ಇರುತ್ತದೆ. ಇಲ್ಲಿ ಅವಕಾಶವಾದಿಗಳೂ ಇರುತ್ತಾರೆ. ಹೀಗಾಗಿ ನಮ್ಮ ವಿವೇಚನೆ ಜಾಗೃತವಾಗಿರಿಸಿಕೊಳ್ಳಬೇಕು.

ಹೀಗೊಂದು ವಾಟ್ಸ್‌ಆ್ಯಪ್‌ನಲ್ಲಿ ಗೆಳತಿಯೊಬ್ಬಳು ಕಳುಹಿಸಿದ ಸಂದೇಶ.  ಯಾಕೋ ಇಷ್ಟವಾಯ್ತು. ಅಮ್ಮ ಮನೆಯಲ್ಲಿ ಹೇಳುತ್ತಿದ್ದ ಮಾತೊಂದು ನೆನಪಾಯ್ತು. ಯಾವಾಗ ಮೋಸ ಹೋಗುವವರು ಇರುತ್ತಾರೆಯೋ ಅಲ್ಲಿಯವರೆಗೆ ಮೋಸ ಮಾಡುವವರೂ ಇರುತ್ತಾರೆ. ಅದಕ್ಕಾಗಿ ಸದಾ ನಾವು ಜಾಗೃತರಾಗಿವುದು ಬಹುಮುಖ್ಯವಾಗುತ್ತದೆ. ಸಂತೋಷ್‌, ತೊಕ್ಕೊಟ್ಟು

Advertisement

Udayavani is now on Telegram. Click here to join our channel and stay updated with the latest news.

Next