1. ವಿಧಾನಪರಿಷತ್ ನ 14 ಮಂದಿ ಕಾಂಗ್ರೆಸ್ ಸದಸ್ಯರ ಅಮಾನತು
ಸಭಾಪತಿ ಅದೇಶ ಉಲ್ಲಂಘನೆ ಆರೋಪದಡಿಯಲ್ಲಿ ವಿಧಾನ ಪರಿಷತ್ತಿನ 14 ಮಂದಿ ಸದಸ್ಯರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ. ಸದನದ ಬಾವಿಗಿಳಿದು ಧರಣಿ ಮಾಡಿದ್ದ ಕಾಂಗ್ರೆಸ್ ನ ಈ 14 ಸದಸ್ಯರನ್ನು ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.
2. ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ
ಉಪ್ಪಿನಂಗಡಿ ಠಾಣೆಯ ಎದುರು ಮಂಗಳವಾರ ಸಂಜೆ ಪಿಎಫ್ ಐ ಕಾರ್ಯಕರ್ತರ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆದಿತ್ತು. ಪೊಲೀಸರು ಮತ್ತು ಪ್ರತಿಭಟನಾಕಾರರು ಗಾಯಗೊಂಡ ಬೆನ್ನಲ್ಲೇ ಪುತ್ತೂರು ಉಪವಿಭಾಗೀಯ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
3. ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ: ಕರವೇ ಆಕ್ರೋಶ
ಮಹಾರಾಷ್ಟ್ರ ಏಕೀಕರಣ ಸಮಿತಿ ಅಧ್ಯಕ್ಷ ದೀಪಕ ದಳವಿಗೆ ಕಪ್ಪು ಮಸಿ ಬಳದಿರುವುದನ್ನು ಖಂಡಿಸಿ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಶಿವಸೇನೆ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವ ಮೂಲಕ ಪುಂಡತನ ಮೆರೆದಿದ್ದಾರೆ.
4. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವಿಧಿವಶ
ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಗಂಭೀರವಾದ ಸುಟ್ಟ ಗಾಯಗಳಿಗೆ ಒಳಗಾಗಿದ್ದರು. ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಕ್ಯಾ.ವರುಣ್ ಸಿಂಗ್ ಬುಧವಾರ ಕೊನೆಯುಸಿರೆಳೆದಿದ್ದಾರೆ.
5. ಪಶ್ಚಿಮಬಂಗಾಳದಲ್ಲಿ ಮೊದಲ ಒಮಿಕ್ರಾನ್ ಪ್ರಕರಣ
ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಪಶ್ಚಿಮಬಂಗಾಳದಲ್ಲಿ ಪತ್ತೆಯಾಗಿದೆ. ಇದು ಪಶ್ಚಿಮ ಬಂಗಾಲದ ಮೊದಲ ಪ್ರಕರಣವಾಗಿದೆ. ತೆಲಂಗಾಣ ಮೂಲದ 7 ವರ್ಷದ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
6. ಪ್ರತಿಭಟನೆ ತಾತ್ಕಾಲಿಕ ಸ್ಥಗಿತಗೊಳಿಸಿದ್ದೇವೆ ರಾಕೇಶ್ ಟಿಕಾಯತ್
ಕೃಷಿ ಕಾಯ್ದೆ ವಿರುದ್ದದ ಹೋರಾಟವನ್ನು ಕೆಲವು ಕಾಲದವರೆಗೆ ಸ್ಥಗಿತಗೊಳಿಸಿದ್ದೇವೆಯೇ ವಿನಃ, ಪೂರ್ಣ ಪ್ರಮಾಣದಲ್ಲಿ ಹಿಂಪಡೆಯಲಿಲ್ಲ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖಂಡ ರಾಕೇಶ್ ಟಿಕಾಯತ್ ಬುಧವಾರ ತಿಳಿಸಿದ್ದಾರೆ. ಕೃಷಿ ಮುಖಂಡರ ಜೊತೆಗಿನ ಸರ್ಕಾರದ ಮಾತುಕತೆ ಇನ್ನೂ ಪೂರ್ಣಗೊಳ್ಳದ ಕಾರಣ ಈ ಹೇಳಿಕೆ ನೀಡಿದ್ದಾರೆ.
7. ತುಂಬಾ ಬೋಲ್ಡ್ ಆದ್ರು ಇಲಿಯಾನಾ
ಬಾಲಿವುಡ್ ನಟಿ ಇಲಿಯಾನಾ ಬೋಲ್ಡ್ ಬೆಡಗಿ ಎನ್ನುವುದು ಗೊತ್ತಿರುವ ವಿಚಾರ. ಆದ್ರೆ ಇದೀಗ ಒಂಚೂರು ಜಾಸ್ತಿ ಬೋಲ್ಡ್ ಆಗಿದ್ದು, ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ತುಂಡುಡುಗೆ ತೊಟ್ಟ ನಟಿಯು ಸ್ವಿಮ್ಮಿಂಗ್ ಡ್ರೆಸ್ ನಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
8. ದಕ್ಷಿಣ ಆಫ್ರಿಕಾದ ಏಕದಿನ ಸರಣಿಗೆ ಲಭ್ಯ: ಕೊಹ್ಲಿ ಸ್ಪಷ್ಟ ನುಡಿ
ದಕ್ಷಿಣ ಆಫ್ರಿಕಾದಲ್ಲಿ ಮುಂಬರುವ ಏಕದಿನ ಸರಣಿಯಲ್ಲಿ ಆಡುವುದಾಗಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಬುಧವಾರ ಪ್ರತಿಕ್ರಿಯಿಸಿದ್ದಾರೆ, ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ನಾನು ಎಲ್ಲಾ ಸಮಯದಲ್ಲೂ ಆಯ್ಕೆಗೆ ಲಭ್ಯವಿದ್ದೆ ಮತ್ತು ಲಭ್ಯವಿದ್ದೇನೆ. ವಿಶ್ರಾಂತಿಗಾಗಿ ನಾನು ಬಿಸಿಸಿಐ ಜತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದರು.