ಸಾರ್ವಜನಿಕ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ; ಷರತ್ತುಗಳು ಅನ್ವಯ ಕಳೆದ ಕೆಲವು ದಿನಗಳಿಂದ ಚರ್ಚೆಯ ಕೇಂದ್ರ ಬಿಂದುವಾಗಿರುವ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಬಗ್ಗೆ ಕೊನೆಗೂ ಸರ್ಕಾರ ನಿರ್ಧಾರ ಪ್ರಕಟಿಸಿದೆ. ಈ ಕುರಿತಾಗಿ ಮಾತನಾಡಿರುವ ಸಚಿವ ಅಶೋಕ್, ಗಣೇಶ ಮೂರ್ತಿಯನ್ನು ಐದು ದಿನದೊಳಗೆ ವಿಸರ್ಜನೆ ಮಾಡಬೇಕು. ನಗರಗಳಲ್ಲಿ ವಾರ್ಡ್ ಗೆ ಒಂದು ಮಾತ್ರ ಗಣೇಶ ಮೂರ್ತಿ ಇಡಬಹುದು. ಹಳ್ಳಿಗಳಲ್ಲಿ ಸ್ಥಳಿಯಾಡಳಿತದ ಅನುಮತಿಯ ಮೇರೆಗೆ ಮೂರ್ತಿ ಪ್ರತಿಷ್ಠೆ ಮಾಡಬೇಕು ಎಂದರು. ಕೋವಿಡ್ 19: ದೇಶದಲ್ಲಿ 42,766 ಹೊಸ ಸೋಂಕು ಪ್ರಕರಣಗಳು ಪತ್ತೆ ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 42,766 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 308 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆಗೊಳಿಸಿರುವ ಮಾಹಿತಿಯಲ್ಲಿ ತಿಳಿದುಬಂದಿದೆ. 700 ತಾಲಿಬಾನ್ ಉಗ್ರರನ್ನು ಕೊಂದು, 600 ಉಗ್ರರನ್ನು ಸೆರೆಹಿಡಿದ ಪಂಜ್ ಶೀರ್ ಯೋಧರು ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಮತ್ತು ಪಂಜ್ ಶೀರ್ ಯೋಧರ ನಡುವಿನ ಹೋರಾಟ ಮುಂದುವರೆದಿದ್ದು ತಾಲಿಬಾನ್ ಪಡೆಗಳು ಪಂಜ್ ಶೀರ್ ಪ್ರಾಂತ್ಯದ ಏಳು ಜಿಲ್ಲೆಗಳಲ್ಲಿ ನಾಲ್ಕು ಜಿಲ್ಲೆಗಳನ್ನು ನಿಯಂತ್ರಿಸುತ್ತಿವೆ ಎಂದು ತಾಲಿಬಾನ್ ತಿಳಿಸಿದೆ. ಆದರೆ ತಾಲಿಬಾನ್ ಹೇಳಿಕೆಯನ್ನು ಅಲ್ಲಗಳೆದಿರುವ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆಯು ತಾವು ಖವಾಕ್ ಪಾಸ್ ನಲ್ಲಿ ಸಾವಿರಾರು ಭಯೋತ್ಪಾದಕರನ್ನು ಸುತ್ತುವರಿದಿದ್ದೇವೆ ಎಂದಿದೆ. ಈ ನಡುವೆ 700 ಕ್ಕೂ ಹೆಚ್ಚು ತಾಲಿಬಾನ್ ಉಗ್ರರನ್ನು ಕೊಲ್ಲಲಾಗಿದೆ. 600 ಉಗ್ರರನ್ನು ಸೆರೆಹಿಡಿದು ಸೆರೆಮನೆಗೆ ಹಾಕಲಾಗಿದೆ ಎಂದು ಪಂಜ್ ಶೀರ್ ನ ಹೋರಾಟ ಪಡೆ ಹೇಳಿಕೊಂಡಿದೆ. ಈ ತಿಂಗಳ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ಈ ತಿಂಗಳ ಕೊನೆಯ ವಾರದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು .ಈ ಭೇಟಿಯಲ್ಲಿ ಮೋದಿ ಮತ್ತು ಬೈಡೆನ್ ಅಫ್ಘಾನ್‌ನ ಬದಲಾದ ಚಿತ್ರಣ, ಇಂಡೋ-ಪೆಸಿಫಿಕ್ ಕಾರ್ಯಸೂಚಿ, ಚೀನ ಒಡ್ಡಿರುವ ಸವಾಲುಗಳ ಸಹಿತ ವಿವಿಧ ವಿಚಾರಗಳ ಕುರಿತು ಚರ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಎರಡು ವರ್ಷದ ಬಳಿಕ ಕೇರಳದಲ್ಲಿ ಮತ್ತೆ ನಿಫಾ ಸೋಂಕಿನ ಲಕ್ಷಣ : 12 ವರ್ಷದ ಬಾಲಕ ಸಾವು ಎರಡು ವರ್ಷದ ಬಳಿಕ ಕೇರಳದಲ್ಲಿ ನಿಫಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದು ಅದರಂತೆ ಕೇರಳದ ಆಸ್ಪತ್ರೆಯೊಂದರಲ್ಲಿ ಹನ್ನೆರಡು ವರ್ಷದ ಬಾಲಕನೋರ್ವ ಸಾನ್ನಪ್ಪಿದ್ದಾನೆ, ಪುಣೆಯಿಂದ ಬಂದ ಈತನ ವೈದ್ಯಕೀಯ ವರದಿಯಲ್ಲಿಯೂ ನಿಫಾ ಸೋಂಕು ತಗಲಿರುವುದು ದೃಢಪಟ್ಟಿದೆ. ನಾಳೆಯಿಂದ ರಾಜ್ಯಾದ್ಯಂತ 6, 7 ಮತ್ತು 8ನೇ ತರಗತಿ ಆರಂಭ ನಾಳೆಯಿಂದ ರಾಜ್ಯಾದ್ಯಂತ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೂ ತರಗತಿ ಆರಂಭಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಶನಿವಾರ, ರವಿವಾರ ಸೋಂಕು ಪ್ರಕರಣ ಕಡಿಮೆಯಾಗಿ, ಪಾಸಿಟಿವಿಟಿ ದರ ಶೇ. 2ಕ್ಕಿಂತ ಕಡಿಮೆಯಾದರೆ ಇಲ್ಲೂ ಶಾಲಾರಂಭ ಖಚಿತ ಎನ್ನಲಾಗಿದೆ. ಸಂಚಾರಿ ವಿಜಯ್ ನೆನಪಿನಲ್ಲಿ ಪುಕ್ಸಟ್ಟೆ ಲೈಫು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಿಧನರಾಗಿದ್ದರೂ, ವಿಜಯ್ ಅಭಿನಯಿಸಿದ ಪಾತ್ರಗಳು ಪ್ರೇಕ್ಷಕರಿಗೆ ಆಗಾಗ್ಗೆ ಅವರ ನೆನಪನ್ನುಕಣ್ಮುಂದೆ ತರುತ್ತಿರುತ್ತವೆ. ಇತ್ತೀಚೆಗೆ ಸಂಚಾರಿ ವಿಜಯ್ ಅಭಿನಯದ “ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅಗಲಿದ ಅಪರೂಪದ ನಟನನ್ನು ಟ್ರೇಲರ್ ಮತ್ತೂಮ್ಮೆ ನೆನಪಿಸಿಕೊಳ್ಳುವಂತೆ ಮಾಡಿದೆ. ಪ್ಯಾರಾಲಂಪಿಕ್ಸ್ ನಲ್ಲಿ ಪದಕ ಗೆದ್ದ ಜಿಲ್ಲಾಧಿಕಾರಿ ಕರ್ನಾಟಕದ ಹಾಸನ ಜಿಲ್ಲೆಯವರಾದ ಸುಹಾಸ್ ಲಾಲಿನಕೆರೆ ಯತಿರಾಜ್ ಅವರು ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಗೌರವ ಪಡೆದಿದ್ದಾರೆ.