Advertisement

ನವನವೀನ “ನವರಂಗ್‌’

10:05 AM Sep 04, 2019 | Lakshmi GovindaRaj |

ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿದ್ದ ಅನೇಕ ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿಹೋಗಿದ್ದು ಗೊತ್ತೇ ಇದೆ. ಇನ್ನು ಕೆಲವು ಚಿತ್ರಮಂದಿರಗಳು ನವೀಕರಣದೊಂದಿಗೆ ಪುನಃ ಸಿನಿರಸಿಕರ ಪಾಲಿಗೆ ಸಂತಸ ತಂದಿದ್ದೂ ಇದೆ. ಈಗ ಕಳೆದ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಸಾವಿರಾರು ಚಿತ್ರಗಳ ಪ್ರದರ್ಶನ ನೀಡಿದ್ದ ನವರಂಗ್‌ ಚಿತ್ರಮಂದಿರ ಕೂಡ ನವೀಕರಣಗೊಳ್ಳುವ ಮೂಲಕ ನೋಡುಗರಿಗೆ ಹೊಸ ಫೀಲ್‌ ಕೊಡುವ ತಯಾರಿಯಲ್ಲಿದೆ.

Advertisement

ಹೌದು, ಈಗಾಗಲೇ ಮೆಜೆಸ್ಟಿಕ್‌, ಸಾಗರ್‌, ಕಲ್ಪನಾ, ಕೈಲಾಶ್‌, ತ್ರಿಭುವನ್‌, “ಕಪಾಲಿ’ ಹೀಗೆ ಪ್ರಮುಖ ಚಿತ್ರಮಂದಿರಗಳು ಸಂಪೂರ್ಣ ಮುಚ್ಚಿವೆ. ಆದರೆ, ಕಳೆದ ಮೂರು ತಿಂಗಳಿನಿಂದ ತಾತ್ಕಾಲಿಕ ಪ್ರದರ್ಶನ ನಿಲ್ಲಿಸಿದ್ದ ರಾಜಾಜಿನಗರದ ಡಾ.ರಾಜಕುಮಾರ್‌ ರಸ್ತೆಯಲ್ಲಿರುವ ನವರಂಗ್‌ ಚಿತ್ರಮಂದಿರ, ಈಗ ನವೀಕರಣದೊಂದಿಗೆ ಸಿನಿರಸಿಕರನ್ನು ಆಕರ್ಷಿಸಲು ಸಜ್ಜಾಗುತ್ತಿದೆ.

ನವರಂಗ್‌ ಚಿತ್ರಮಂದಿರದ ಮಾಲೀಕ ಕೆಸಿಎನ್‌ ಮೋಹನ್‌ ಅವರು, ಚಿತ್ರಮಂದಿರಕ್ಕೆ ಇನ್ನಷ್ಟು ಉನ್ನತಮಟ್ಟ ಕಲ್ಪಿಸಿ, ಒಳ್ಳೆಯ ವಾತಾವರಣ ಕಲ್ಪಿಸುವ ಉದ್ದೇಶದಿಂದ ನವೀಕರಣಗೊಳಿಸುತ್ತಿದ್ದಾರೆ. ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿದ ಕೆಸಿಎನ್‌ ಮೋಹನ್‌, “ಕಳೆದ 53 ವರ್ಷಗಳಿಂದಲೂ ಇರುವ ನವರಂಗ್‌ ಚಿತ್ರಮಂದಿರ ಇನ್ನು ಮುಂದೆ ಸುಸಜ್ಜಿತಗೊಂಡು, ಸಿನಿಮಾ ನೋಡುವ ಪ್ರೇಕ್ಷಕರಿಗೆ ಹೊಸ ಫೀಲ್‌ ತಂದುಕೊಡಲಿದೆ.

ಮೊದಲು ಕೆಳಗಡೆ 800 ಆಸನಗಳಿದ್ದವು. ಈಗ 450 ಕ್ಕೆ ಇಳಿಸಲಾಗಿದೆ. ಬಾಲ್ಕನಿಯಲ್ಲಿದ್ದ 350 ಆಸನಗಳನ್ನು ಈಗ 250 ಕ್ಕೆ ಇಳಿಸಲಾಗಿದೆ. ಹೊಸ ಬಗೆಯ ಆಸನ ವ್ಯವಸ್ಥೆ ಕಲ್ಪಿಸುವ ಮೂಲಕ ನವರಂಗ್‌ ಚಿತ್ರಮಂದಿರದ ಒಳಗೆ ಬರುವ ಪ್ರತಿಯೊಬ್ಬರಿಗೂ ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಿದ ಅನುಭವ ಆಗುವಂತಹ ವಾತಾವರಣ ಕಲ್ಪಿಸಲಾಗುತ್ತಿದೆ. ಸೆಪ್ಟೆಂಬರ್‌ 12 ರಂದು “ಪೈಲ್ವಾನ’ ಚಿತ್ರ ಬಿಡುಗಡೆಯಾಗುತ್ತಿದ್ದು, ಆ ಚಿತ್ರದ ಮೂಲಕ ನವೀಕರಣಗೊಂಡಿರುವ ನವರಂಗ್‌ ಚಿತ್ರಮಂದಿರಕ್ಕೆ ಚಾಲನೆ ಕೊಡುವ ಪ್ರಯತ್ನ ಮಾಡಲಾಗುವುದು’ ಎನ್ನುತ್ತಾರೆ ಮೋಹನ್‌.

ಅದೇನೆ ಇರಲಿ, ಡಾ.ರಾಜಕುಮಾರ್‌ ಅಭಿನಯದ “ವೀರಕೇಸರಿ’ ಈ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ. ಬಹುತೇಕ ಚಿತ್ರಗಳನ್ನು ಪ್ರದರ್ಶಿಸಿದ ಖ್ಯಾತಿ ನವರಂಗ್‌ ಚಿತ್ರಮಂದಿರಕ್ಕಿದೆ. ಕನ್ನಡದ ಎಲ್ಲಾ ಸ್ಟಾರ್‌ ಚಿತ್ರಗಳು ಇಲ್ಲಿನ ಪರದೆ ಮೇಲೆ ಬಿತ್ತರಗೊಂಡಿವೆ. ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳು ಮುಚ್ಚೇ ಹೋಗುತ್ತಿರುವ ಸಂದರ್ಭದಲ್ಲಿ ಇರುವ ಚಿತ್ರಮಂದಿರವನ್ನು ನವೀಕರಿಸಿ, ಪುನಃ ಹೊಸ ವಾತಾವರಣ ಕಲ್ಪಿಸುವ ಧೈರ್ಯ ಮಾಡುತ್ತಿರುವುದನ್ನು ಮೆಚ್ಚಲೇಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next