ಐಟಿ, ಇಂಜಿನಿಯರಿಂಗ್ ಹಿನ್ನೆಲೆಯ ಹೊಸ ಪ್ರತಿಭೆಗಳು ಹೆಚ್ಚಾಗಿ ಬರುತ್ತಿರುವ ಹಿನ್ನೆಲೆಯಿಂದಲೋ ಏನೋ, ಇತ್ತೀಚೆಗೆ ಬರುತ್ತಿರುವ ಅನೇಕ ಸಿನಿಮಾಗಳ ಟೈಟಲ್‌ಗಳಲ್ಲೂ ಸೈನ್ಸ್ ಛಾಯೆ ಎದ್ದು ಕಾಣುತ್ತದೆ. ಈಗ ಅಂಥದ್ದೆ ಒಂದು ಸಿನಿಮಾ ಸೆಟ್ಟೇರಲು ಸಿದ್ಧವಾಗಿದೆ. ಅದರ ಹೆಸರು “ನ್ಯೂರಾನ್’. ಸಾಮಾನ್ಯವಾಗಿ ವಿಜ್ಞಾನ ಬಗ್ಗೆ ತಿಳಿದುಕೊಂಡವರಿಗೆ ಈ ಹೆಸರು ಪರಿಚಯವಿರುತ್ತದೆ.
ಮನುಷ್ಯನ ದೇಹ ಬಿಲಿಯನ್ಸ್ ಆಫ್ ನ್ಯೂರಾನ್ಸ್ ನಿಂದ ರೂಪುಗೊಂಡಿದ್ದು, “ನ್ಯೂರಾನ್’ಗಳು ದೇಹದ ಸ್ಪರ್ಶ, ಸಂವೇದನೆ, ಗ್ರಹಿಕೆಯನ್ನು ಮೆದುಳಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈಗ ಇದೇ “ನ್ಯೂರಾನ್’ ಎಂಬ ಟೈಟಲ್ ಇಟ್ಟುಕೊಂಡು ನವ ನಿರ್ದೇಶಕ ವಿಕಾಸ್ ಪುಷ್ಪಗಿರಿ ಸಿನಿಮಾ ಮಾಡಲು ಹೊರಟಿದ್ದಾರೆ. ಮೂಲತಃ ಐಟಿ ಹಿನ್ನೆಲೆಯಿಂದ ಬಂದ ವಿಕಾಸ್, ಸುಮಾರು ಹತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ನಿರ್ದೇಶಕರಾದ ಸೀತಾರಾಮ ಕಾರಂತ್, ದೇವರಾಜ ಕುಮಾರ್ ಮೊದಲಾದವರ ಜತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಈಗ “ನ್ಯೂರಾನ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಚಿತ್ರಕ್ಕೆ ಅ. 28ರಂದು ಮುಹೂರ್ತ. ಚಿತ್ರದ ಬಗ್ಗೆ ಮಾತನಾಡುವ ವಿಕಾಸ್ ಪುಷ್ಪಗಿರಿ, “ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ನ್ಯೂರಾನ್ಸ್‌ಗಳು ನಮಗೆ ಗೊತ್ತಿಲ್ಲದಂತೆ, ನಮ್ಮೊಳಗೆ ಅನೇಕ ಕೆಲಸಗಳನ್ನು ಮಾಡುತ್ತಿರುತ್ತವೆ.
ಅವುಗಳ ಕೆಲಸ ಎಂಥವರಿಗೂ ಅಚ್ಚರಿ ಮೂಡಿಸುವಂಥದ್ದು. ಈ ಸಿನಿಮಾದಲ್ಲೂ ಕೂಡ ಆಡಿಯನ್ಸ್‌ಗೆ ಗೊತ್ತಾಗದಂತೆ ಥ್ರಿಲ್ಲಿಂಗ್ ಆಗಿ ಚಿತ್ರದ ಕಥೆ ತೆರೆದುಕೊಳ್ಳುತ್ತ ಹೋಗುತ್ತದೆ. ಒಂದಷ್ಟು ನೈಜ ಘಟನೆಗಳು ಕಥೆಗೆ ಸ್ಪೂರ್ತಿ. ಕಥೆಗೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಈ ಶೀರ್ಷಿಕೆ ಇಟ್ಟಿದ್ದೇವೆ. ಕಡಿಮೆ ಪಾತ್ರಗಳನ್ನು ಇಟ್ಟುಕೊಂಡು ಒಂದು ಸಸ್ಪೆನ್ಸ್ ಸಿನಿಮಾವನ್ನು ಮಾಡಲು ಹೊರಟಿದ್ದೇನೆ’ ಎನ್ನುತ್ತಾರೆ. ಇನ್ನು, ಈ ಚಿತ್ರದಲ್ಲಿ ಯುವ ಎಂಬ ನವನಟ ಹೀರೋ ಆಗಿ ಪರಿಚಯವಾಗುತ್ತಿದ್ದಾರೆ.
ಉಳಿದಂತೆ ನೇಹಾ ಪಾಟೀಲ್, ವೈಷ್ಣವಿ ಮೆನನ್, ವರ್ಷಾ, ಅರವಿಂದ್ ರಾವ್, ರಾಮಕೃಷ್ಣ, ಕಬೀರ್ ಸಿಂಗ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ, ಶೋಯೆಬ್ ಅಹಮದ್ ಛಾಯಾಗ್ರಹಣವಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಡಾ. ವಿ. ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯವಿದೆ. ಫ್ರೆಂಡ್ಸ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಸಕಲೇಶಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸುವ ಯೋಚನೆ ಚಿತ್ರತಂಡಕ್ಕಿದೆ.