ಕ್ರೈಸ್ಟ್ ಚರ್ಚ್: ವನಿತಾ ಏಕದಿನ ವಿಶ್ವಕಪ್ ನ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಜಯ ಸಾಧಿಸಿದೆ. ಪಾಕ್ ವಿರುದ್ಧ ಪಂದ್ಯದಲ್ಲಿ 71 ರನ್ ಅಂತರದ ಗೆಲುವು ಸಾಧಿಸಿದರೂ ನ್ಯೂಜಿಲ್ಯಾಂಡ್ ಸೆಮಿ ರೇಸ್ ನಿಂದ ಹೊರಬಿದ್ದಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಬೇಟ್ಸ್ ಶತಕದ ನೆರವಿನಿಂದ ಎಂಟು ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಗುರಿ ಬೆನ್ನತ್ತಿದ ಪಾಕ್ 194 ರನ್ ಮಾತ್ರ ಗಳಿಸಲಷ್ಟೇ ಶಕ್ತವಾಯಿತು.
ಭರ್ಜರಿ ಶತಕ ಬಾರಿಸಿದ ಕಿವೀಸ್ ಆರಂಭಿಕ ಬ್ಯಾಟರ್ ಸೂಜಿ ಬೇಟ್ಸ್ 126 ರನ್ ಗಳಿಸಿದರು. ಉಳಿದಂತೆ ವಿಕೆಟ್ ಕೀಪರ್ ಮಾರ್ಟಿನ್ 30 ರನ್, ಹಾಲ್ಲಿಡೆ 29 ರನ್, ಅಮೆಲಾ ಕೆರ್ರ್ 24 ರನ್ ಗಳಿಸಿದರು. ಪಾಕ್ ಪರ ನಿದಾ ದರ್ ಮೂರು ವಿಕೆಟ್ ಕಿತ್ತರು.
ಪಾಕ್ ಪರ ಮಧ್ಯಮ ಕ್ರಮಾಂಕದ ಆಟಗಾರ್ತಿ ನಿದಾ ದರ್ ಅರ್ಧಶತಕ ಬಾರಿಸಿದರು. ಉಳಿದಂತೆ ನಾಯಕಿ ಮರೂಫ್ 38 ರನ್, ಮುನೀಬಾ ಅಲಿ 29 ರನ್ ಗಳಿಸಿದರು. ಕಿವೀಸ್ ಪರ ಹನ್ನಾ ರೋವ್ ಐದು ವಿಕೆಟ್ ಕಿತ್ತರೆ, ಎರಡು ವಿಕೆಟ್ ಫ್ರಾಸಸ್ ಮೆಕಾಯ್ ಪಾಲಾಯಿತು.
ಇದನ್ನೂ ಓದಿ:ಸಂಕಟ ತಂದ ಕೀಟಲೆ; ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದವೇ ಸಿಡಿದೆದ್ದ ನಾಯಕ ಸಂಜು ಸ್ಯಾಮ್ಸನ್
ಆಡಿದ ಏಳು ಪಂದ್ಯಗಳಲ್ಲಿ ಮೂರನ್ನು ಮಾತ್ರ ಗೆದ್ದ ಆತಿಥೇಯ ಕಿವೀಸ್ ಆರು ಅಂಕ ಪಡೆದರೂ ಕೂಟದಿಂದ ಹೊರಬಿದ್ದಿದೆ. ಅತ್ತ ಪಾಕಿಸ್ಥಾನ ಕೊನೆಯ ಸ್ಥಾನಿಯಾಗಿದೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿ ಫೈನಲ್ ಗೆ ಅರ್ಹತೆ ಪಡೆದಿದ್ದು, ಮತ್ತೆರಡು ಸ್ಥಾನಕ್ಕೆ ಭಾರತ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಫೈಟ್ ಮಾಡುತ್ತಿದೆ.