ನ್ಯೂಜಿಲ್ಯಾಂಡ್ ಕ್ರಿಕೆಟ್‌ನಲ್ಲಿ “ಬ್ರೇಸ್‌ವೆಲ್’ ಪರಿವಾರಕ್ಕೆ ವಿಶೇಷ ಸ್ಥಾನಮಾನವಿದೆ. ಜಾನ್ ಬ್ರೇಸ್‌ವೆಲ್, ಬ್ರೆಂಡನ್ ಬ್ರೇಸ್‌ವೆಲ್, ಡಗ್ ಬ್ರೇಸ್‌ವೆಲ್… ಹೀಗೆ ಸಾಗುತ್ತದೆ ಈ ಕೌಟುಂಬಿಕ ಕ್ರಿಕೆಟ್ ನಂಟು. ಇದು “ಬ್ರೇಸ್‌ವೆಲ್ ಕ್ರಿಕೆಟ್ ಫ್ಯಾಕ್ಟರಿ’ ಎಂದೇ ಜನಜನಿತ. ಇಲ್ಲಿನ ನೂತನ ಉತ್ಪನ್ನವೇ, ಬುಧವಾರ ರಾತ್ರಿ ಹೈದರಾಬಾದ್‌ನಲ್ಲಿ ಬ್ಯಾಟಿಂಗ್ ಸುಂಟರಗಾಳಿ ಎಬ್ಬಿಸಿದ ಮೈಕಲ್ ಬ್ರೇಸ್‌ವೆಲ್!
ಮೇಲೆ ಹೆಸರಿಸಿದ ಅಷ್ಟೂ ಮಂದಿ ಮೈಕಲ್ ಬ್ರೇಸ್‌ವೆಲ್ ಅವರ ಸಂಬಂಧಿಗಳೇ. ಮೂವರೂ ಟೆಸ್ಟ್ ಆಡಿದವರೇ. ಮೈಕಲ್ ಬ್ರೇಸ್‌ವೆಲ್ ಅವರ ತಂದೆ ಮಾರ್ಕ್ ಬ್ರೇಸ್‌ವೆಲ್ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಮೈಕಲ್ ಅವರ ಕೋಚ್ ಕೂಡ ಹೌದು. ಆದರೆ ಇವರ್ಯಾರೂ ಬಿಗ್ ಹಿಟ್ಟರ್‌ಗಳಾಗಿರಲಿಲ್ಲ. ಆದರೆ ಒಂದೇ ಒಂದು ಮೈನಸ್ ಪಾಯಿಂಟ್ ಎಂದರೆ ವಯಸ್ಸು. ಮೈಕಲ್‌ಗೆ ಈಗಾಗಲೇ 31 ವರ್ಷ ಭರ್ತಿಯಾಗಿದೆ!
ಈ ಲೆಕ್ಕಾಚಾರದಲ್ಲಿ ಮೈಕಲ್ ಬ್ರೇಸ್‌ವೆಲ್ ಅವರದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಳಂಬ ಪ್ರವೇಶ. ಕಳೆದ ಮಾರ್ಚ್‌ನಲ್ಲಷ್ಟೇ ನೆದರ್ಲೆಂಡ್ಸ್ ವಿರುದ್ಧ ಏಕದಿನ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. 17 ಏಕದಿನ, 13 ಟಿ20 ಹಾಗೂ 4 ಟೆಸ್ಟ್ ಆಡಿದ್ದಾರೆ.
ಪರಿಪೂರ್ಣ ಕ್ರಿಕೆಟ್ ಪ್ಯಾಕೇಜ್ :
Related Articles
ಎಡಗೈ ಬ್ಯಾಟರ್, ವಿಕೆಟ್ ಕೀಪರ್, ಆಫ್ಸ್ಪಿನ್ನರ್, ಎಲ್ಲಕ್ಕಿಂತ ಮಿಗಿಲಾಗಿ ಬಿಗ್ ಹಿಟ್ಟರ್… ಹೀಗೆ ಮೈಕಲ್ ಬ್ರೇಸ್‌ವೆಲ್ ಒಂದು ಪರಿಪೂರ್ಣ ಕ್ರಿಕೆಟ್ ಪ್ಯಾಕೇಜ್. ಪರಿಸ್ಥಿತಿ ಹೇಗೆಯೇ ಇರಲಿ, ಇವರಿಗೆ ತಿಳಿದಿರುವುದು ಮುನ್ನುಗ್ಗಿ ಬಾರಿಸುವುದು ಮಾತ್ರ. ಆ ಹೊಡೆತಗಳಾದರೂ ಎಂಥವು… ಅಷ್ಟೊಂದು ಪಫೆìಕ್ಟ್. ಬೀಸಿದರೆ ಬೌಂಡರಿ, ಎತ್ತಿದರೆ ಸಿಕ್ಸರ್. ಬುಧವಾರ ರಾತ್ರಿ ಬ್ರೇಸ್‌ವೆಲ್ ಶೋ ಕಂಡು ದಂಗಾಗದ, ಗಿಲ್ ದ್ವಿಶತಕ ಬಾರಿಸಿಯೂ ಪಂದ್ಯ ಜಾರಿ ಹೋಗುತ್ತದಲ್ಲ ಎಂದು ಆತಂಕ ವ್ಯಕ್ತಪಡಿಸದೇ ಇದ್ದ ಭಾರತದ ಕ್ರಿಕೆಟ್ ಪ್ರೇಮಿಗಳ್ಯಾರಾದರೂ ಇದ್ದರೆ ಹೇಳಿ!
ನ್ಯೂಜಿಲ್ಯಾಂಡ್‌ನ 6 ವಿಕೆಟ್ 131ಕ್ಕೆ ಬಿದ್ದಾಗ ಭಾರತ ಆಗಲೇ ಗೆದ್ದಾಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕಿವೀಸ್ ಬತ್ತಳಿಕೆಯ ಅಪಾಯಕಾರಿ ಅಸ್ತ್ರದ ಬಗ್ಗೆ ಯಾರಿಗೂ ಅರಿವಿರಲಿಲ್ಲ. ಬ್ರೇಸ್‌ವೆಲ್ ನಮ್ಮ ಬೌಲರ್‌ಗಳನ್ನು ಬೆದರಿಸುತ್ತ ಸಾಗಿದರು. ಪಂದ್ಯ ಹಂತ ಹಂತವಾಗಿ ಭಾರತದ ಕೈಯಿಂದ ಜಾರುತ್ತ ಹೋಯಿತು. ಇನ್ನೆರಡೇ ಎರಡು ಎಸೆತ ಬಾರಿ ಸಲು ಸಿಕ್ಕಿದರೆ ಸಾಕಿತ್ತು, ನ್ಯೂಜಿಲ್ಯಾಂಡ್ ಜಯ ಭೇರಿ ಮೊಳಗಿಸುತ್ತಿತ್ತು! ಇತ್ತೀಚಿನ ವರ್ಷ ಗಳಲ್ಲಿ ಭಾರತವನ್ನು ಬ್ರೇಸ್‌ವೆಲ್ ರೀತಿಯಲ್ಲಿ ಬೆದರಿಸಿದವರು ಯಾರೂ ಇಲ್ಲ!
ದೇಶಿ ಕ್ರಿಕೆಟ್ ಯಶಸ್ಸು :
ಹಾಗಾದರೆ ಬ್ರೇಸ್‌ವೆಲ್ ಅವರ ಈ ಯಶಸ್ಸಿಗೆ ಕಾರಣವಾದರೂ ಏನು? “ದೇಶಿ ಕ್ರಿಕೆಟ್‌ನಲ್ಲಿ ಸಾಧಿಸಿದ ಯಶಸ್ಸನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದ್ಬಳಕೆ ಮಾಡಿಕೊಂಡೆ, ಅಷ್ಟೇ…’, ಎಷ್ಟೊಂದು ಸರಳ ಉತ್ತರ!
“ಗಿಲ್ 50 ಓವರ್ ತನಕ ಬ್ಯಾಟಿಂಗ್ ನಡೆಸಿದ್ದನ್ನು ಕಂಡಾಗ ಇದು ಬ್ಯಾಟಿಂಗ್ ಟ್ರ್ಯಾಕ್ ಎಂಬುದು ಸ್ಪಷ್ಟವಾಯಿತು. ಅಂದಮೇಲೆ ನಮ್ಮ ಶಾಟ್‌ಗಳನ್ನು ಸಲೀಸಾಗಿ ಬಾರಿಸುವುದು ಅಸಾಧ್ಯವಲ್ಲ ಎಂಬುದೂ ಅರಿವಾಯಿತು. ನೇರ ಸೀಮಾರೇಖೆಯ ಅಂತರ ಕಡಿಮೆ ಇತ್ತು. ಇನ್ನೇನು ಬೇಕಿತ್ತು…’ ಎಂದರು ನಗುತ್ತ!
ಸಾಮಾನ್ಯವಾಗಿ ಚೇಸಿಂಗ್ ವೇಳೆ ಇಂಥ ಸಿಡಿಲಬ್ಬರದ ಆಟವಾಡಲು ಗಟ್ಟಿಯಾದ ಮನೋಸ್ಥೈರ್ಯ, ಅಪಾರ ಆತ್ಮವಿಶ್ವಾಸ ಬೇಕು. ಬ್ರೇಸ್‌ವೆಲ್ ಅವರಲ್ಲಿ ಇದು ತುಂಬಿ ತುಳುಕುತ್ತಿತ್ತು. ಅವರು ಎಲ್ಲೂ ಒತ್ತಡ ಹೇರಿಕೊಳ್ಳಲಿಲ್ಲ. ಬದಲು ಆಟವನ್ನು “ಎಂಜಾಯ್’ ಮಾಡುತ್ತ ಸಾಗಿದರು. ಭಾರತದವರೂ ಅವರ ಈ ಅಸಾಮಾನ್ಯ ಪರಾಕ್ರಮಕ್ಕೆ ಸಲಾಂ ಹೇಳಲು ಮರೆಯಲಿಲ್ಲ.
ಇನ್ನೂ ಎರಡು ಪಂದ್ಯಗಳಿವೆ, ನ್ಯೂಜಿಲ್ಯಾಂಡ್ ಮತ್ತು ಬ್ರೇಸ್‌ವೆಲ್ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕಿದೆ!
ಬ್ರೇಸ್‌ವೆಲ್ ಅಬ್ಬರ ಇದೇ ಮೊದಲಲ್ಲ ! : ಮೈಕಲ್ ಬ್ರೇಸ್‌ವೆಲ್ ಅಬ್ಬರಿಸಿದ್ದು ಇದೇ ಮೊದಲಲ್ಲ. ಅದು ಕಳೆದ ಜುಲೈಯಲ್ಲಿ ನಡೆದ ಐರ್ಲೆಂಡ್ ಎದುರಿನ ಡಬ್ಲಿನ್ ಏಕದಿನ ಪಂದ್ಯ. ಇದಕ್ಕೂ ಬುಧವಾರದ ಹೈದರಾಬಾದ್ ಪಂದ್ಯಕ್ಕೂ ಸಾಮ್ಯವಿರುವುದನ್ನು ಗಮನಿಸಿ.
ಮೊದಲು ಬ್ಯಾಟಿಂಗ್ ನಡೆಸಿದ ಐರ್ಲೆಂಡ್ 9 ವಿಕೆಟಿಗೆ ಬರೋಬ್ಬರಿ 300 ರನ್ ರಾಶಿ ಹಾಕಿತ್ತು. ನ್ಯೂಜಿಲ್ಯಾಂಡ್ ನಿನ್ನೆಯಂತೆ ಕುಸಿದು 153ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. ಐರ್ಲೆಂಡ್ ಗೆಲುವಿನ ಕನಸಿನಲ್ಲಿ ವಿಹರಿಸುತ್ತಿತ್ತು. ಆಗ ಬಂದರು ನೋಡಿ ಮೈಕಲ್ ಬ್ರೇಸ್‌ವೆಲ್… ಡಬ್ಲಿನ್‌ನಲ್ಲಿ ಬ್ಯಾಟಿಂಗ್ ಚಂಡ ಮಾರುತವೇ ಬೀಸಿತು. 82 ಎಸೆತಗಳಿಂದ ಅಜೇಯ 127 ರನ್. 10 ಫೋರ್, 7 ಸಿಕ್ಸರ್! ಒಂದು ಎಸೆತ ಬಾಕಿ ಇರುವಾಗ ನ್ಯೂಜಿಲ್ಯಾಂಡ್‌ಗೆ ಒಂದು ವಿಕೆಟ್ ಅಂತರದ ಅಚ್ಚರಿಯ ಜಯ!