Advertisement

ಜೆಡಿಎಸ್‌ ಶಾಸಕರಿಗೆ ಹೊಸ ವರ್ಷದ ಗಿಫ್ಟ್?

06:00 AM Dec 20, 2018 | Team Udayavani |

ಬೆಳಗಾವಿ: ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌, ಪಕ್ಷದ ಶಾಸಕರಿಗೆ ಹೊಸ ವರ್ಷದ ಗಿಫ್ಟ್‌ ನೀಡಲು ಮುಂದಾಗಿದ್ದು, ಸಂಪುಟ ವಿಸ್ತರಣೆಯಾದರೆ ಅದರ ಬೆನ್ನಲ್ಲೇ 10 ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ಸಹಿತ ರಾಜಕೀಯ ಕಾರ್ಯದರ್ಶಿ, ಸಂಸದೀಯ
ಕಾರ್ಯದರ್ಶಿ, ಪ್ರಮುಖ ನಿಗಮ- ಮಂಡಳಿ  ಅಧ್ಯಕ್ಷಗಿರಿ ಹುದ್ದೆಯ ಭಾಗ್ಯ ಸಿಗಲಿದೆ.

Advertisement

ಶಾಸಕರಾದ ಶಿವಲಿಂಗೇಗೌಡ, ಅನ್ನದಾನಿ, ವೀರಭದ್ರಯ್ಯ, ಗೋಪಾಲಯ್ಯ. ಬಿ.ಸಿ.ಗೌರಿಶಂಕರ್‌, ಕೆ.ಮಹದೇವ, ಡಾ.ಕೆ.ಶ್ರೀನಿವಾಸಮೂರ್ತಿ, ಮಂಜು, ಸುರೇಶ್‌ಗೌಡ, ನಾರಾಯಣ ಗೌಡ, ಪರಿಷತ್‌ ಸದಸ್ಯರಾದ ಚೌಡರೆಡ್ಡಿ, ಮನೋಹರ್‌, ಅಪ್ಪಾಜಿಗೌಡ, ಕಾಂತರಾಜು ಅವರು ಪ್ರಮುಖ ಹುದ್ದೆಗಳ ರೇಸ್‌ನಲ್ಲಿದ್ದಾರೆ.

ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿದರೆ ಸಂಪುಟ ವಿಸ್ತರಣೆ ಜತೆಗೆ ನಿಗಮ-ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷರ ನೇಮಕ, ಸಂಸದೀಯ ಕಾರ್ಯದರ್ಶಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನೇಮಕವೂ ಆಗುವುದರಿಂದ ಜೆಡಿಎಸ್‌ನಲ್ಲಿ ಸಂಪುಟ ದರ್ಜೆ ಸ್ಥಾನಮಾನಕ್ಕಾಗಿ ತೀವ್ರ ಪೈಪೋಟಿ ಪ್ರಾರಂಭವಾಗಿದೆ. ಇದಕ್ಕಾಗಿ ಹತ್ತು ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಮೊದಲ ಹಂತದಲ್ಲಿ ನೇಮಕಗೊಳ್ಳುವ ಮೂವತ್ತು ನಿಗಮ-ಮಂಡಳಿಗಳ ಪೈಕಿ ಜೆಡಿಎಸ್‌ಗೆ 10 ಹಾಗೂ 10 ಸಂಸದೀಯ ಕಾರ್ಯದರ್ಶಿಗಳ ಪೈಕಿ ಜೆಡಿಎಸ್‌ಗೆ 3 ಸ್ಥಾನ ಲಭಿಸಲಿದೆ. ಈ ಪೈಕಿ 7 ಶಾಸಕರಿಗೆ ನಿಗಮ- ಮಂಡಳಿ ಅಧ್ಯಕ್ಷಗಿರಿ, ಮೂವರಿಗೆ ಸಂಸದೀಯ ಕಾರ್ಯ ದರ್ಶಿ ಹುದ್ದೆ ನೀಡಲು ತೀರ್ಮಾನಿಸಲಾಗಿದೆ. ಸಂಪುಟ ವಿಸ್ತರಣೆ ಜತೆಗೆ ಎಲ್ಲ ನೇಮಕಾತಿಗಳ ಆದೇಶಗಳು
ಹೊರಬೀಳಲಿವೆ ಎಂದು ತಿಳಿದು ಬಂದಿದೆ.

ವಿಧಾನಸಭೆಯಲ್ಲಿ ಜೆಡಿಎಸ್‌ 38 ಸಂಖ್ಯಾಬಲ ಹೊಂದಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹಿತ 10 ಮಂದಿ ಸಂಪುಟದಲ್ಲಿದ್ದಾರೆ. ಮತ್ತೂಬ್ಬ ಸದಸ್ಯರಿಗೂ ಸಂಪುಟ ವಿಸ್ತರಣೆಯಲ್ಲಿ ಅವಕಾಶ ಸಿಗಲಿದೆ.7 ಶಾಸಕರಿಗೆ ನಿಗಮ-ಮಂಡಳಿ ಅಥವಾ
ಸಂಸದೀಯ ಕಾರ್ಯದರ್ಶಿ ಹುದ್ದೆ ಸಿಗುವುದರಿಂದ ಒಟ್ಟು 18 ಮಂದಿಗೆ ಅಧಿಕಾರ ಸಿಕ್ಕಂತಾಗುತ್ತದೆ. ಹಿರಿಯ ಶಾಸಕರಾದ ಎ.ಟಿ.ರಾಮಸ್ವಾಮಿ, ಕೆ.ಶ್ರೀನಿವಾಸಗೌಡ, ಸಿರಾ ಸತ್ಯನಾರಾಯಣ ಸೇರಿದಂತೆ ಉಳಿದವರಿಗೆ 2 ವರ್ಷಗಳ ನಂತರ ಸಂಪುಟದಲ್ಲಿ ಅವಕಾಶ ಕಲ್ಪಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು, ಪರಿಷತ್‌ನಲ್ಲಿ ಜೆಡಿಎಸ್‌ 14 ಸ್ಥಾನ ಹೊಂದಿದ್ದು, ಒಬ್ಬರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ. ಉಪ ಸಭಾಪತಿ ಹುದ್ದೆಯೂ ಒಬ್ಬರಿಗೆ ಲಭಿಸಿದೆ. ಮುಖ್ಯ ಸಚೇತಕ ಹುದ್ದೆಯೂ
ದೊರೆಯಲಿದ್ದು, ಮೂವರಿಗೆ ನಿಗಮ-ಮಂಡಳಿ ಹಾಗೂ ಸಂಸದೀಯ ಕಾರ್ಯದರ್ಶಿ ಹುದ್ದೆ ಸಿಗಲಿದೆ. ಪರಿಷತ್‌ನಲ್ಲಿ ಮುಖ್ಯ ಸಚೇತಕ
ಹುದ್ದೆಗೆ ಟಿ.ಎ.ಶರವಣ ಅವರ ಹೆಸರು ಪರಿಶೀಲನೆಯಲ್ಲಿದೆ. ತೂಪಲ್ಲಿ ಚೌಡರೆಡ್ಡಿ ಸಹ ಆಕಾಂಕ್ಷಿ ಎಂದು ಹೇಳಲಾಗಿದೆ.

ಶಾಸಕರಿಗಷ್ಟೇ ಅಲ್ಲದೆ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಾಜಿ ಶಾಸಕರಿಗೂ ರಾಜಕೀಯ ಕಾರ್ಯದರ್ಶಿ, ಕಾರ್ಯರ್ತರು ಹಾಗೂ ಮುಖಂಡರಿಗೆ ಮೂರು ನಿಗಮ-ಮಂಡಳಿ ಸ್ಥಾನಗಳು ಸಿಗಲಿವೆ ಎಂದು ಮೂಲಗಳು ತಿಳಿಸಿವೆ. ಮಾಜಿ ಶಾಸಕ
ಕೋನರೆಡ್ಡಿ, ಸುರೇಶ್‌ಬಾಬು, ಆನಂದ್‌ ಆಸ್ನೋಟಿಕರ್‌, ಮಂಜುನಾಥಗೌಡ, ವೆಂಕಟಶಿವಾರೆಡ್ಡಿ, ಪರಿಷತ್‌ನ ಮಾಜಿ ಸದಸ್ಯ ರಮೇಶ್‌ಬಾಬು, ಮುಖಂಡರಾದ ಶಶಿಭೂಷಣ್‌ ಹೆಗಡೆ, ತಿಮ್ಮೇಗೌಡ, ಜಿ.ರಾಮರಾಜು, ಚಂದ್ರಶೇಖರ್‌, ಆನಂದ್‌, ಅಮರನಾಥ್‌ ಅವರ ಹೆಸರುಗಳು ಈ ನಿಟ್ಟಿನಲ್ಲಿ ಕೇಳಿ ಬರುತ್ತಿವೆ.

Advertisement

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಮಾಜಿ ಶಾಸಕರಾದ ಮಧು ಬಂಗಾರಪ್ಪ, ಸುರೇಶ್‌ಬಾಬು ಹೆಸರು ಕೇಳಿ ಬರುತ್ತಿದೆ. ಟಿ.ಎ.ಶರವಣ ಸಹ ಆಕಾಂಕ್ಷಿಯಾಗಿದ್ದಾರೆ. ಆದರೆ, ಅವರಿಗೆ ಪರಿಷತ್‌ ಮುಖ್ಯ ಸಚೇತಕ ಸ್ಥಾನ ದೊರೆತರೆ ಮಧು ಬಂಗಾರಪ್ಪ ಅಥವಾ ಸುರೇಶ್‌ ಬಾಬು ಪೈಕಿ ಒಬ್ಬರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ಸಿಗಲಿದೆ. ವಿಧಾನಪರಿಷತ್‌ಗೆ
ಜೆಡಿಎಸ್‌ ಕೊಟಾದಡಿ ಒಬ್ಬರ ನಾಮಕರಣಕ್ಕೆ ಅವಕಾಶವಿದ್ದು, ಮಧು ಬಂಗಾರಪ್ಪ, ಸುರೇಶ್‌ಬಾಬು, ಕೋನರೆಡ್ಡಿ ಹೆಸರು ಪರಿಶೀಲನೆಯಲ್ಲಿದೆ ಎಂದು ಹೇಳಲಾಗಿದೆ.

ಜೆಡಿಎಸ್‌ನಲ್ಲಿ ಸರಿ ಸುಮಾರು 20 ವರ್ಷಗಳ ನಂತರ ಶಾಸಕರಿಗೆ, ಮುಖಂಡರಿಗೆ ನಿಗಮ-ಮಂಡಳಿ ಸೇರಿ ಸಂಪುಟ ದರ್ಜೆ ಸ್ಥಾನಮಾನ ಹುದ್ದೆ ಸಿಗಲಿದೆ. ಈ ಹಿಂದೆ 1994ರಿಂದ 1999 ರವರೆಗೆ ಜನತಾದಳ ಸರ್ಕಾರ ಇದ್ದಾಗ ದೇವೇಗೌಡ, ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ನಿಗಮ-ಮಂಡಳಿ ಹುದ್ದೆಗೆ ನೇಮಕವಾಗಿತ್ತು. ನಂತರ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲೂ ನೇಮಕವಾಗಿರಲಿಲ್ಲ. ಎರಡು ಹುದ್ದೆ ಸೃಷ್ಟಿಸಲು ತೀರ್ಮಾನ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ 2 ಹುದ್ದೆ ಸೃಷ್ಟಿಸಲು ತೀರ್ಮಾನಿಸಲಾಗಿದೆ. ಕಾಂಗ್ರೆಸ್‌ನಿಂದ ಒಬ್ಬರು, ಜೆಡಿಎಸ್‌ನಿಂದ ಒಬ್ಬರು ನೇಮಕಗೊಳ್ಳಲಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ವಿ.ಮುನಿಯಪ್ಪ ಅವರ ಹೆಸರು ಅಂತಿಮಗೊಂಡಿದ್ದು, ರಾಜ್ಯಪಾಲರಿಗೂ
ಕಳುಹಿಸಲಾಗಿದೆ. ಆದರೆ, ಅವರು ಕೆಲವೊಂದು ಸ್ಪಷ್ಟನೆ ಕೇಳಿದ್ದಾರೆ ಎಂದು ಹೇಳಲಾಗಿದೆ. ಮತ್ತೂಂದೆಡೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸಹ ರಾಜಕೀಯ ಕಾರ್ಯದರ್ಶಿಯನ್ನು  ನೇಮಕ ಮಾಡಿಕೊಳ್ಳಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next