Advertisement

“ಭವಿಷ್ಯದ ವಿಜ್ಞಾನ’ಕ್ಕೆ ಹೊಸ ಮಾರ್ಗ

11:41 AM Jan 08, 2020 | Suhan S |

ಬೆಂಗಳೂರು: ಐದು ದಿನಗಳ ಭಾರತೀಯ ವಿಜ್ಞಾನ ಮೇಳಕ್ಕೆ ಮಂಗಳವಾರ ಅದ್ದೂರಿ ತೆರೆಬಿದ್ದಿತು. ಇದರೊಂದಿಗೆ “ಭವಿಷ್ಯದ ವಿಜ್ಞಾನ’ಕ್ಕೆ ಹೊಸ ಮಾರ್ಗವೂ ತೆರೆದುಕೊಂಡಿತು.

Advertisement

ಭವಿಷ್ಯದಲ್ಲಿ ಭಾರತದ ವಿಜ್ಞಾನದ ದಿಕ್ಕು-ದಿಸೆ ಹೇಗಿರಬೇಕು? ಯಾವ ಕ್ಷೇತ್ರಕ್ಕೆ ಆದ್ಯತೆ ನೀಡಬೇಕಿದೆ? ಮಹಿಳೆ ಮತ್ತು ಮಕ್ಕಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒತ್ತುಕೊಡುವ ಬಗ್ಗೆ ಮೊದಲ 4 ದಿನ ನೋಬೆಲ್‌ ಪುರಸ್ಕೃತರೂ ಸೇರಿದಂತೆ ವಿಜ್ಞಾನ ಲೋಕದ ದಿಗ್ಗಜರು ಚಿಂತನ-ಮಂಥನ ನಡೆಸಿದರು.

ಈ ಹಿಂದೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಆ “ಆದ್ಯತಾ ಪಟ್ಟಿ’ಗೆ ಬಾಹ್ಯಾಕಾಶವೂ ಸೇರಿಕೊಂಡಿತ್ತು. ಆದರೆ, 107ನೇ ಸಮ್ಮೇಳನ ಇದರಾಚೆಗೆ ಇಣುಕುವ ಪ್ರಯತ್ನ ಮಾಡಿದೆ. ಅದರಲ್ಲೂ ವಿಶೇಷವಾಗಿ ಆರೋಗ್ಯ ಮತ್ತು ಕೃಷಿ, ನಗರ ಕೇಂದ್ರಿತ ಸಮಸ್ಯೆಗಳ ಕುರಿತು ಹೆಚ್ಚು ಚರ್ಚೆ ನಡೆದಿವೆ. ಇದೆಲ್ಲದಕ್ಕೂ ವೇದಿಕೆಕಲ್ಪಿಸಿದ್ದು ಬೆಂಗಳೂರು. ಇನ್ನು ಗ್ರಾಮೀಣಾಭಿವೃದ್ಧಿ “ಥೀಮ್‌’ ಕೂಡ ಇದಕ್ಕೆ ಪೂರಕವಾಗಿತ್ತು.

ಅಂದುಕೊಂಡಂತೆ ಅವುಗಳನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡು ಹೋದಲ್ಲಿ ಇದು ರಾಜ್ಯಮಟ್ಟಿಗಾದರೂ ದಿಕ್ಸೂಚಿ ಆಗಬಲ್ಲದು ಎಂದು ವಿಜ್ಞಾನಿಗಳು-ತಂತ್ರಜ್ಞರು ಅಭಿಪ್ರಾಯಪಡುತ್ತಾರೆ.  ಸುಮಾರು 150ಕ್ಕೂ ಹೆಚ್ಚು ಗೋಷ್ಠಿ ನಡೆದಿವೆ. ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಒಂದು ದಿನ ಮೀಸಲಿಟ್ಟಿದ್ದು ಇದೇ ಮೊದಲು ಎನ್ನಲಾಗಿದೆ. ಇನ್ನು ಬೆಂಗಳೂರನ್ನು ಕಾಡುತ್ತಿರುವ ಸಂಚಾರ ದಟ್ಟಣೆ, ಅದರಿಂದ ಕಂಡುಬರುವ ಆರೋಗ್ಯ ಸಮಸ್ಯೆ, ತ್ಯಾಜ್ಯ ನಿರ್ವಹಣೆ, ವಾಯುಮಾಲಿನ್ಯ, ನೀರಿನ ಅಭಾವ ಮತ್ತಿತರ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಪ್ರಯತ್ನಗಳೂ ಇಲ್ಲಿ ನಡೆದವು ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ತಿಳಿಸಿದರು.

ನೀರಿನ ಅಭಾವ ಸಮಸ್ಯೆಗೆ ನೀರಿನ ಸೋರಿಕೆ ತಡೆಯಲು ಹೊಸ ತಂತ್ರಜ್ಞಾನ, ತ್ಯಾಜ್ಯನೀರು ಸುಲಭದ ಮರುಬಳಕೆ ವಿಧಾನ, ತ್ಯಾಜ್ಯ ಸಂಸ್ಕರಣೆಗೆ ವಿನೂತನ ವಿಧಾನಗಳನ್ನು ಕೌನ್ಸಿಲ್‌ ಆಫ್ ಸೈಂಟಿμಕ್‌ ಆಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ (ಸಿಎಸ್‌ಐಆರ್‌) ಪ್ರಸ್ತುತಪಡಿಸಿತು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಹಾನಗರದಲ್ಲಿ ವಾಯುಮಾಲಿನ್ಯ ಮಟ್ಟ ಅಳತೆ ಹಾಗೂ ಆರೋಗ್ಯ ಪರಿಣಾಮ ಮತ್ತು ಪರಿಹಾರ ಮುಂದಿಟ್ಟಿತು.

Advertisement

ಸ್ಥಳೀಯ ಸಂಶೋಧಕರಿಗೆ ದಿಕ್ಸೂಚಿ: ರಾಷ್ಟ್ರೀಯ ಮಟ್ಟದ ಈ ಸಮ್ಮೇಳನ ರಾಜ್ಯದ ಸ್ಥಳೀಯ ಸಂಶೋಧಕರಿಗೆ ನೆರವಾಗುವ ಮೂಲಕ ಅವರ ಮುಂದಿನ ಸಂಶೋಧನೆಗೆ ದಿಕ್ಸೂಚಿಯಾಯಿತು ಎಂದು ಬೇಸಾಯ ವಿಭಾಗದ ಕೃಷಿ ವಿಜ್ಞಾನಿ ಡಾ.ತಿಮ್ಮೇಗೌಡ ಅಭಿಪ್ರಾಯಪಟ್ಟರು.

ಸರ್ಕಾರಕ್ಕೆ ಪರಿಣಿತರ ಅಭಿಪ್ರಾಯ ವರದಿ: ನಗರೀಕರಣ, ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರಿನ ಮೂಲ ಸಮಸ್ಯೆ ಕುರಿತು ಸಂಶೋಧನಾ ಪ್ರಬಂಧ, ಸಮಸ್ಯೆ ಬಗೆಹರಿಸಲು ಹೊಸ ತಂತ್ರಜ್ಞಾನ, ಯೋಜನೆ ಸಿದ್ಧಪಡೆಸಿ ಪ್ರಸ್ತುತ ಪಡಿಸಿದ್ದಾರೆ. ಇವುಗಳೆಲ್ಲವುಗಳ ಕ್ರೋಡೀಕರಿಸಿ ಸರ್ಕಾರಕ್ಕೆ ಹಾಗೂ ಭವಿಷ್ಯದಲ್ಲಿ ಅಧ್ಯಯನ ನಡೆಸುವ ಎಲ್ಲಾ ವಿಜ್ಞಾನ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಭಾರತೀಯ ವಿಜ್ಞಾನ ಸಮ್ಮೇಳನದ ಅಧ್ಯಕ್ಷ ಪ್ರೊ.ಕೆ.ಎಸ್‌.ರಂಗಪ್ಪ ತಿಳಿಸಿದರು.

ಸಂಶೋಧನೆ ನೆರವಿಗೆ ಅಮೇರಿಕ ಕರೆ :  ಬೆಂಗಳೂರು ಕೃಷಿ ವಿವಿಗೆ ಅಮೇರಿಕಾದಿಂದ ಕೆಲ ಸಂಸ್ಥೆಗಳು ಕರೆ ಮಾಡಿ ಕೃಷಿ ವಿಜ್ಞಾನ ಸಂಶೋಧನೆಗೆ ಮಾನವ ಸಂಪನ್ಮೂಲದ ನೆರವು, ಸಹಯೋಗ ಕೋರಿದ್ದಾರೆ. ಇದರಿಂದ ಸಾಕಷ್ಟು ಇಲ್ಲಿನ ಸಂಶೋಧಕರಿಗೆ ಅನುದಾನ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಿಕೆಗೆ ವೇದಿಕೆ ಸಿಗಲಿದೆ. ಜತೆಗೆ ಅಭಿವೃದ್ಧಿ ಹೊಂದಿದ ದೇಶಗಳ ಜತೆ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವುದು ಹೆಮ್ಮೆಯ ವಿಷಯ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌ ತಿಳಿಸಿದರು.

ವಿಜ್ಞಾನಿ ಆಗುತ್ತೇನೆ’..! :  ಸಮ್ಮೇಳನಕ್ಕೆ ಬಂದಿದ್ದ ನೂರಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ವಿಜ್ಞಾನ ವಾತಾವರಣ ದಿಂದ ಪ್ರೇರೇಪಿತಗೊಂಡಿರು ವುದು ಕಂಡುಬಂತು. ಅತಿಥಿಗಳು, ಸಂಶೋಧಕರು ಮಕ್ಕಳನ್ನು ಮಾತನಾಡಿಸಿ ” ಓದಿ ಮುಂದೆ ಏನಾಗುತ್ತೀಯಾ? ನಿನ್ನ ಜೀವನದ ಗುರಿ ಏನು?’ ಎಂಬ ಪ್ರಶ್ನೆ ಕೇಳಿದರೆ ಬಹುಪಾಲು ವಿದ್ಯಾರ್ಥಿಗಳ ಉತ್ತರ “ನಾನು ವಿಜ್ಞಾನಿಯಾಗುತ್ತೇನೆ’ ಎಂಬುದಾಗಿತ್ತು. ಈ ವಿದ್ಯಾರ್ಥಿಗಳು ಪರಿಣಿತರೊಂದಿಗೆ ಚರ್ಚಿಸಿ, ನೋಬೆಲ್‌ ಪುರಸ್ಕೃತರ ಮಾತು ಕೇಳಿ ಇನ್ನಷ್ಟು ಸ್ಪೂರ್ತಿ ಪಡೆದಿರುವುದರಲ್ಲಿ ಎರಡು ಮಾತಿಲ್ಲ

 

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next