Advertisement

ನವೆಂಬರ್‌ ವೇಳೆಗೆ ನೂತನ ಜವಳಿ ನೀತಿ

11:52 AM May 25, 2018 | |

ಬೆಂಗಳೂರು: ರಾಜ್ಯದ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ನವೆಂಬರ್‌ ವೇಳೆಗೆ “ನೂತನ ಜವಳಿ ನೀತಿ’ ಅಸ್ತಿತ್ವಕ್ಕೆ ಬರಲಿದೆ ಎಂದು ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಹೆಚ್ಚುವರಿ ನಿರ್ದೇಶಕ ಆನಂದ್‌ ವಿ. ಕಿತ್ತೂರು ತಿಳಿಸಿದರು.

Advertisement

ನಗರದ ಲಿ ಮೆರಿಡಿಯನ್‌ ಹೋಟೆಲ್‌ನಲ್ಲಿ ಗುರುವಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ (ಫಿಕ್ಕಿ) ಜವಳಿ ಸಚಿವಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹಾರಾಷ್ಟ್ರದಲ್ಲಿ ನಡೆಯಲಿರುವ “ಟೆಕ್ನೋಟೆಕ್ಸ್‌ 2018’ಗೆ ಸಂಬಂಧಿಸಿದ ರೋಡ್‌ ಶೋದಲ್ಲಿ ಭಾಗವಹಿಸಿ ಮಾತನಾಡಿದ ಅವರು, 2013-18ರ ಜವಳಿ ನೀತಿ ಸೆಪ್ಟೆಂಬರ್‌ಗೆ ಅಂತ್ಯಗೊಳ್ಳಲಿದ್ದು, ಅಕ್ಟೋಬರ್‌-ನವೆಂಬರ್‌ ಒಳಗೆ ನೂತನ ನೀತಿ ಜಾರಿಗೆ ಬರಲಿದೆ.

ಈ ಸಂಬಂಧ ಈಗಾಗಲೇ ಪೂರ್ವಸಿದ್ಧತೆಗಳು ನಡೆದಿವೆ. ನೇಕಾರರ ಸಂಘಗಳು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳೊಂದಿಗೆ ಚರ್ಚಿಸಲಾಗಿದೆ. ನೆರೆ ರಾಜ್ಯಗಳಲ್ಲಿರುವ ಜವಳಿ ನೀತಿ ಕುರಿತು ಅಧಿಕಾರಿಗಳು ಅಧ್ಯಯನ ನಡೆಸಿದ್ದು, ಹೊಸ ನೀತಿಯು ಹೂಡಿಕೆಗೆ ಪೂರಕವಾದ ಅಂಶಗಳನ್ನು ಒಳಗೊಂಡಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಜವಳಿ ನೀತಿಯಲ್ಲಿ ಕ್ಷೇತ್ರದ ಒಟ್ಟಾರೆ ವೃದ್ಧಿ ದರ ಹೆಚ್ಚಳ, ಮೂಲ ಸೌಕರ್ಯ ಅಭಿವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ ಅಂಶಗಳನ್ನು ಒಳಗೊಂಡಿರಲಿದೆ. ಜವಳಿ ಉದ್ಯಮದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ವಾರ್ಷಿಕ ಒಟ್ಟಾರೆ ದೇಶದ ಹತ್ತಿ ಉತ್ಪಾದನೆಯಲ್ಲಿ ರಾಜ್ಯ ಶೇ.6.5ರಷ್ಟು ಉತ್ಪಾದಿಸುತ್ತಿದೆ. ಅಂದಾಜು 9 ಸಾವಿರ ಟನ್‌ ರೇಷ್ಮೆ ಬೆಳೆಯುತ್ತಿದ್ದು, ಇದು ದೇಶದ ಒಟ್ಟಾರೆ ಉತ್ಪಾದನೆಯ ಶೇ.60ರಷ್ಟಾಗಿದೆ. 5.3 ದಶಲಕ್ಷ ಕೆಜಿ ಉಣ್ಣೆ ಉತ್ಪಾದನೆ ಆಗುತ್ತಿದೆ. 2008-15ರ ಅವಧಿಯಲ್ಲಿ ಜವಳಿ ಉದ್ಯಮದಲ್ಲಿ 2.56 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ ಎಂದು ವಿವರಿಸಿದರು. 

ಜವಳಿ ಸಂಶೋಧನೆಗೆ ನೀರಸ ಸ್ಪಂದನೆ: ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ಅನಂತ ಕುಮಾರ್‌ ಸಿಂಗ್‌ ಮಾತನಾಡಿ, ಜವಳಿ ಉದ್ಯಮದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರೀಕ್ಷಿತ ಪ್ರಸ್ತಾವನೆಗಳು ಬಂದಿಲ್ಲ. ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

“ಮಹಾರಾಷ್ಟ್ರದಲ್ಲಿ ಜೂನ್‌ 28-29ರಂದು ನಡೆಯಲಿರುವ “ಟೆಕ್ನೋಟೆಕ್ಸ್‌-2018’ರಲ್ಲಿ 150ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುವ ನಿರೀಕ್ಷೆ ಇದ್ದು, ಚೀನಾ, ತೈವಾನ್‌, ದಕ್ಷಿಣ ಕೋರಿಯ ಸೇರಿಂದ 30ಕ್ಕೂ ಹೆಚ್ಚು ರಾಷ್ಟ್ರಗಳಿಂದ 225 ಅಂತಾರಾಷ್ಟ್ರೀಯ ಖರೀದಿದಾರರು ಮತ್ತು ಮಾರಾಟಗಾರರು ಭಾಗವಹಿಸಲಿದ್ದಾರೆ. ಜವಳಿಗೆ ಸಂಬಂಧಿಸಿದ ಅನೇಕ ಆವಿಷ್ಕಾರಗಳು, ತಂತ್ರಜ್ಞಾನಗಳಿಗೆ ಈ ಸಮ್ಮೇಳನ ವೇದಿಕೆ ಆಗಲಿದೆ.

ಇದರಲ್ಲಿ ರಾಜ್ಯದ ಜವಳಿ ಉದ್ದಿಮೆದಾರರೂ ಭಾಗವಹಿಸಬೇಕು ಎಂದು ಇದೇ ವೇಳೆ ಅನಂತ ಕುಮಾರ್‌ ಸಿಂಗ್‌ ಮನವಿ ಮಾಡಿದರು. ಫಿಕ್ಕಿ ಕರ್ನಾಟಕ ಪರಿಷತ್‌ ಸಹ ಅಧ್ಯಕ್ಷ ಉಲ್ಲಾಸ್‌ ಕಾಮತ್‌, ಕಾಸಿಯಾ ಅಧ್ಯಕ್ಷ ಹನುಮಂತೇಗೌಡ, ಉದ್ಯಮಿ ತ್ಯಾಗು ವಲ್ಲಿಯಪ್ಪ, ಕೇಂದ್ರ ಜವಳಿ ಸಚಿವಾಲಯದ ಜಂಟಿ ಕಾರ್ಯದಶಿರ್ಸ ಪುನೀತ್‌ ಅಗರವಾಲ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next