Advertisement

ಕಾಶ್ಮೀರದ ಶಾರದೆಗೆ ಶೃಂಗೇರಿಯಲ್ಲಿ ವಿಶೇಷ ಪೂಜೆ; ಅ. 5ರಂದು ಹಸ್ತಾಂತರ ಕಾರ್ಯ

12:45 AM Oct 02, 2022 | Team Udayavani |

ಚಿಕ್ಕಮಗಳೂರು: ಭರತ ಖಂಡದ ತುತ್ತ ತುದಿಯ ಕಾಶ್ಮೀರದ ನೀಲಂ ಕಣಿವೆಯ ತ್ರಿತ್ವಾಲ್‌ನ ನವೀಕೃತ ಶ್ರೀಶಾರದಾದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ನೂತನ ಶ್ರೀಶಾರದಾದೇವಿ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಹಸ್ತಾಂತರ ಕಾರ್ಯ ವಿಜಯ ದಶಮಿಯಂದು ಶೃಂಗೇರಿಯಲ್ಲಿ ನಡೆಯಲಿದೆ.

Advertisement

ಈ ದೇವಸ್ಥಾನ ನಿರ್ಮಾಣದ ಹೊಣೆಯನ್ನು ಶ್ರೀಮಠ ವಹಿಸಿಕೊಂಡಿದ್ದು, ಕಾಮಗಾರಿ ಬಹುತೇಕ ಮುಗಿದಿದೆ. ಛಾವಣಿ ನಿರ್ಮಾಣ ವಷ್ಟೇ ಬಾಕಿಯಿದ್ದು, ಅಕ್ಟೋಬರ್‌ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಪಂಚಲೋಹದಲ್ಲಿ ನಿರ್ಮಿತ ನೂತನ ಶ್ರೀದೇವಿಯ ವಿಗ್ರಹ ವನ್ನು ಶೃಂಗೇರಿ ಶ್ರೀ ಮಠ ದಿಂದ ನೀಡಲಾ ಗುತ್ತಿದೆ. ವಿಜಯ ದಶಮಿ ಶುಭ ದಿನವಾದ ಬುಧವಾರ ವಿಶೇಷ ಪೂಜೆ ಸಲ್ಲಿಸಿ ತ್ರಿತ್ವಾಲ್‌ನ ಶಾರದಾ ಸಂರಕ್ಷಣಾ ಸಮಿತಿಯ ರವೀಂದ್ರ ಪಂಡಿತ್‌ ಮತ್ತು ತಂಡದವರಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಗದ್ಗುರುಗಳ ಸಾನ್ನಿಧ್ಯ
ಬೆಂಗಳೂರಿನ ಶಿಲ್ಪಿಗಳು ಶಾರದಾ ದೇವಿ ವಿಗ್ರಹ ರಚನೆಯ ಕಾರ್ಯ ಪೂರ್ಣಗೊಳಿಸಿದ್ದು, ಜಗದ್ಗುರು ಗಳಾದ ಶ್ರೀ ಭಾರತೀ ತೀರ್ಥ ಮಹಾ ಸ್ವಾಮೀಜಿ ಹಾಗೂ ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಗಳ ಸಮ್ಮುಖದಲ್ಲಿ ವಿಗ್ರಹ ಹಸ್ತಾಂತರ ನಡೆಯಲಿದೆ.

ಸಾದರಹಳ್ಳಿ ಕಲ್ಲು ಬಳಕೆ
ಕಾಶ್ಮೀರದಲ್ಲಿನ ಶ್ರೀ ಶಾರದಾ ದೇವಿ ದೇವಸ್ಥಾನ ನಿರ್ಮಾಣಕ್ಕೆ ಬೆಂಗಳೂರಿನ ಸಾದರಹಳ್ಳಿ ಕಲ್ಲುಗಳನ್ನು ಬಳಸಲಾಗಿದೆ. ಎರಡು ತಂಡಗಳು ಈ ಕಲ್ಲುಗಳ ಕೆತ್ತನೆ ಕಾರ್ಯವನ್ನು ಕೈಗೊಂಡಿದ್ದವು. ನಾಲ್ಕು ಲಾರಿಗಳಲ್ಲಿ ಕಲ್ಲುಗಳನ್ನು ತ್ರಿತ್ವಾಲ್‌ಗೆ ರವಾನಿಸಲಾಗಿತ್ತು. ಕೇವಲ ಕಲ್ಲು ಸಾಗಣೆಗೆ ಅಂದಾಜು 16 ಲಕ್ಷ ರೂ. ವೆಚ್ಚ ತಗಲಿದೆ. ಕೆತ್ತನೆ ಕಾರ್ಯಕ್ಕೆ ಅಂದಾಜು 65 ಲಕ್ಷ ರೂ. ಹಾಗೂ ಕಲ್ಲುಗಳ ಜೋಡಣೆಗೆ 8 ಲಕ್ಷ ರೂ. ವೆಚ್ಚವಾಗಿದೆ ಎನ್ನಲಾಗಿದೆ.

ಸಂಕ್ರಾಂತಿಗೆ ಪ್ರತಿಷ್ಠಾಪನೆ?
ಅಕ್ಟೋಬರ್‌ ಮಾಸಾಂತ್ಯಕ್ಕೆ ದೇವಸ್ಥಾನ ಸಿದ್ಧ  ವಾದರೂ ಆ ಬಳಿಕ ಕಾಶ್ಮೀರ ಭಾಗದಲ್ಲಿ ಹಿಮ ಹೆಚ್ಚು ಆವರಿಸಿಕೊಳ್ಳುತ್ತದೆ. ಅಲ್ಲಿಗೆ ಸಾಗು ವುದು ಸವಾಲಿನ ಕೆಲಸ. ಮುಂದಿನ ಜನವರಿ- ಫೆಬ್ರವರಿ-ಮಾರ್ಚ್‌ ವೇಳೆಗೆ ಹಿಮ ಪ್ರಮಾಣ ಕಡಿಮೆಯಾಗುವುದರಿಂದ ಸಂಕ್ರಾಂತಿ ವೇಳೆಗೆ ಶ್ರೀ ಶಾರದಾದೇವಿ ವಿಗ್ರಹ ಪ್ರತಿಷ್ಠಾಪನೆಗೆ ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.

Advertisement

ಹಿಮ ಸುರಿಯುವ ಸಂದರ್ಭದಲ್ಲಿ ಜಲ ಸಮಾಧಿ , ಮಂಡಲ ಪೂಜೆ ಸೇರಿ ವಿವಿಧ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸುವುದು ಕಷ್ಟ. ಆದ ಕಾರಣ ವಿಜಯದಶಮಿ ಶುಭದಿನ ಹಿನ್ನಲೆಯಲ್ಲಿ ವಿಗ್ರಹ ಹಸ್ತಾಂತರ ಕಾರ್ಯ ಮಾತ್ರ ನಡೆಯಲಿದೆ. ಸಂಕ್ರಾತಿಯ ಬಳಿಕ ಭಕ್ತರಿಗೆ ಶ್ರೀಶಾರದಾ ದೇವಿಯ ದರ್ಶನ ಲಭ್ಯವಾಗಲಿದೆ. ಅಲ್ಲಿಗೆ ತೆರಳು ವವರು ಆನ್‌ಲೈನ್‌ ಮೂಲಕ ಅಲ್ಲಿಯ ಆಡಳಿತದಿಂದ ಅನುಮತಿಯನ್ನು ಮೊದಲೇ ಪಡೆಯಬೇಕಿದೆ.

ದೇಗುಲದ ಇತಿಹಾಸ
ತ್ರಿತ್ವಾಲ್‌ನ ಶಾರದಾ ನಗರಿಯಲ್ಲಿರುವ ಈ ದೇವಸ್ಥಾನ ಹಿಂದೆ ಶಕ್ತಿಪೀಠ ಆಗಿತ್ತು. ಸರಸ್ವತಿ ನದಿಯ ಉಗಮಸ್ಥಾನ ಎಂದೂ ಕರೆಯಲಾಗುತ್ತಿತ್ತು. ರಾಜ-ಮಹಾರಾಜರ ಕಾಲದಲ್ಲಿ ವೈಭವದಿಂದ ಇತ್ತು. ವಿದ್ವತ್‌ ಹಾಗೂ ವಿದ್ವಾನ್‌ ಪರೀಕ್ಷೆ ಬರೆಯಲು ದೇಶದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಅಲ್ಲದೇ ಸರ್ವಜ್ಞಪೀಠ ಎಂದೂ ಪ್ರಸಿದ್ಧಿಯಾಗಿತ್ತು. ಶ್ರೀಶಾರದಾದೇವಿ ದೇವಸ್ಥಾನ, ಈಶ್ವರ, ಗಣಪತಿ, ಪಾರ್ವತಿ, ವಿಷ್ಣುವಿಗ್ರಹ ಮತ್ತು ಗುರುದ್ವಾರವಿತ್ತು. ಅನಂತರದ ದಿನಗಳಲ್ಲಿ ನಡೆದ ದಾಳಿಗಳಿಂದ ಅಸ್ತಿತ್ವ ಕಳೆದುಕೊಂಡಿತ್ತು. ಹೀಗಾಗಿ ಈ ಪವಿತ್ರ ಸ್ಥಳದಲ್ಲಿ ಶಾರದಾ ದೇವಸ್ಥಾನ ಪುನರ್‌ನಿರ್ಮಾಣಗೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next