Advertisement

ಉರ್ವದಲ್ಲಿ ‘ಜಿಐ’ಉಪಕೇಂದ್ರ ಸಿದ್ಧ!

11:20 AM May 09, 2022 | Team Udayavani |

ಉರ್ವ: ಗುಣಮಟ್ಟದ ವಿದ್ಯುತ್‌ ಸರಬರಾಜಿಗಾಗಿ, ದ.ಕ. ಜಿಲ್ಲೆಯಲ್ಲೇ ಮೊದಲ ಅತ್ಯಾಧುನಿಕ ತಂತ್ರಜ್ಞಾನದ 33/11 ಕೆವಿ ಗ್ಯಾಸ್‌ ಇನ್ಸುಲೇಟೆಡ್‌ ಉಪಕೇಂದ್ರ (ಜಿಐ) ಮಂಗಳೂರಿನ ಉರ್ವದಲ್ಲಿ ನಿರ್ಮಾಣವಾಗಿದೆ.

Advertisement

ಮಣ್ಣಗುಡ್ಡೆಯ ಸಬ್‌ಸ್ಟೇಶನ್‌ನಲ್ಲಿ ಒತ್ತಡ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಉರ್ವ ಮಾರ್ಕೆಟ್‌ನ ಪಕ್ಕದಲ್ಲಿ ಹೊಸ ಸಬ್‌ ಸ್ಟೇಶನ್‌ ತೆರೆಯಲಾಗಿದೆ. ಸಾಮಾನ್ಯವಾಗಿ ಸಬ್‌ಸ್ಟೇಶನ್‌ಗೆ ಹಲವು ಎಕರೆ ಭೂಮಿ ಅಗತ್ಯವಿರುವುದರಿಂದ ನಗರ ವ್ಯಾಪ್ತಿಯಲ್ಲಿ ಸ್ಥಳಾವಕಾಶ ಲಭ್ಯವಿಲ್ಲದ ಕಾರಣದಿಂದ ಗ್ಯಾಸ್‌ ಇನ್ಸುಲೇಟೆಡ್‌ ವಿದ್ಯುತ್‌ ಉಪಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಮಣ್ಣಗುಡ್ಡೆಯಲ್ಲಿ 10ಎಂವಿಎ ಸಾಮರ್ಥ್ಯದ ಸಬ್‌ ಸ್ಟೇಶನ್‌ ಕಾರ್ಯಾಚರಿಸುತ್ತಿದೆ.

ಸದ್ಯ ಕೊಟ್ಟಾರಚೌಕಿ, ಅಶೋಕನಗರ ವ್ಯಾಪ್ತಿಗೆ ಕಾವೂರು, ಪಣಂಬೂರು ಸಬ್‌ ಸ್ಟೇಶನ್‌ ನಿಂದ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ಆದರೆ ಉರ್ವ ಸ್ಟೇಶನ್‌ ಕಾರ್ಯಾರಂಭಿಸಿದ ಬಳಿಕ ಇಲ್ಲಿಂದಲೇ ಅಲ್ಲಿಗೆ ವಿದ್ಯುತ್‌ ಸರಬರಾಜು ಮಾಡುವ ನಿರೀಕ್ಷೆಯಿದೆ.

ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ನಗರ ಪ್ರದೇಶಗಳಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲು ಮೆಸ್ಕಾಂ ಉದ್ದೇಶಿಸಿತ್ತು. ಈ ಯೋಜನೆಯಲ್ಲಿ ಮಂಗಳೂರು, ಬಂಟ್ವಾಳ, ಉಡುಪಿ ಹಾಗೂ ಸಾಲಿಗ್ರಾಮ ಸೇರಿದಂತೆ ಜನನಿಬಿಡ ನಗರ ಪ್ರದೇಶದಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ಸಬ್‌ಸ್ಟೇಶನ್‌ಗಳನ್ನು ಒಟ್ಟು 39 ಕೋ.ರೂ. ವೆಚ್ಚದಲ್ಲಿ ಸ್ಥಾಪಿಸಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.

ಭೂಗತ ಕೇಬಲ್‌

Advertisement

ಕೆಪಿಟಿಸಿಎಲ್‌ನ ಕಾವೂರಿನಲ್ಲಿರುವ 220 ಕೆ.ವಿ.ಶರಾವತಿ ವಿದ್ಯುತ್‌ ಸ್ವೀಕರಣೆ ಕೇಂದ್ರದಿಂದ ಜಿಲ್ಲೆಯ ಬೇರೆ ಬೇರೆ ಭಾಗದ ಮೆಸ್ಕಾಂ ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜಾಗುತ್ತದೆ. ಇದರಂತೆ ಮಣ್ಣಗುಡ್ಡೆ ಸಬ್‌ಸ್ಟೇಶನ್‌ಗೆ ವಿದ್ಯುತ್‌ ಸರಬರಾಜಾಗುತ್ತಿದೆ. ಇದೀಗ ಉರ್ವ ದಲ್ಲಿ ಜಿಐಎಸ್‌ ಸ್ಟೇಶನ್‌ ಆದ ಕಾರಣದಿಂದ ಮಣ್ಣಗುಡ್ಡೆದಿಂದ ಉರ್ವದವರೆಗೆ ಭೂಗತ ಕೇಬಲ್‌ ಅಳವಡಿಸಲಾಗಿದೆ.

ಕೆಪಿಟಿಸಿಎಲ್‌; ಇನ್ನಷ್ಟೇ ಅನುಷ್ಠಾನ!

ನೆಹರೂ ಮೈದಾನದ ಬಳಿ ಇರುವ ಮೆಸ್ಕಾಂನ 33 ಕೆ.ವಿ. ಸಾಮರ್ಥ್ಯದ ಸಬ್‌ ಸ್ಟೇಶನ್‌ ಅನ್ನು ಕೆಪಿಟಿಸಿಎಲ್‌ ವತಿಯಿಂದ 110 ಕೆ.ವಿ.ಯ ಅತ್ಯಾಧುನಿಕ ತಂತ್ರಜ್ಞಾನದ ಜಿಐಎಸ್‌ (ಗ್ಯಾಸ್‌ ಇನ್ಸುಲೇಟೆಡ್‌ ಸ್ಟೇಶನ್‌) ಆಗಿ ಮೇಲ್ದರ್ಜೆಗೇರಿಸುವ ಬಗ್ಗೆ ಒಂದೆರಡು ವರ್ಷದಿಂದ ಚರ್ಚೆ ನಡೆಯಿತಾದರೂ, ಅದು ಇನ್ನಷ್ಟೇ ಅನುಷ್ಠಾನಗೊಳ್ಳಬೇಕಿದೆ. ಅದಕ್ಕಿಂತಲೂ ಮೊದಲು ಇದೀಗ ಮೆಸ್ಕಾಂನ ಜಿಐಎಸ್‌ ನಿರ್ಮಾಣ ಕಾಮಗಾರಿ ಪೂರ್ಣವಾಗಿದೆ.

ಕಾಮಗಾರಿ ಪೂರ್ಣ

ಸಾಕಷ್ಟು ಸ್ಥಳಾವಕಾಶ ಲಭ್ಯವಿಲ್ಲದ ನಗರ ಪ್ರದೇಶಗಳಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ವಿದ್ಯುತ್‌ ಉಪಕೇಂದ್ರಗಳನ್ನು ಸ್ಥಾಪಿಸಲು ಮೆಸ್ಕಾಂ ಉದ್ದೇಶಿಸಿದೆ. ಈ ಯೋಜನೆಯಂತೆ ಮಂಗಳೂರಿನ ಉರ್ವದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. -ಪ್ರಶಾಂತ್‌ ಕುಮಾರ್‌ ಮಿಶ್ರಾ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ

ಕಾರ್ಯಕ್ರಮ ಮುಂದೂಡಿಕೆ!

ಉರ್ವದಲ್ಲಿ ಗ್ಯಾಸ್‌ ಇನ್ಸುಲೇಟೆಡ್‌ ಉಪಕೇಂದ್ರ (ಜಿಐ) ಉದ್ಘಾಟನೆ ಮೇ 9ರಂದು ಬೆಳಗ್ಗೆ 11.30ಕ್ಕೆ ಎಂದು ನಿಗದಿಯಾಗಿತ್ತು. ಆದರೆ ಸಚಿವ ವಿ. ಸುನಿಲ್‌ ಕುಮಾರ್‌ ಅವರಿಗೆ ಬೆಂಗಳೂರಿನಲ್ಲಿ ತುರ್ತು ಸಭೆ ಇದ್ದ ಕಾರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಉದ್ಘಾಟನ ಕಾರ್ಯಕ್ರಮವನ್ನು ದಿಢೀರ್‌ ಮುಂದೂಡಿಕೆ ಮಾಡಲಾಗಿದೆ.

 

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next