Advertisement

ಫೇಸ್‌ಬುಕ್‌ನಲ್ಲೇ ಮದುವೆ ನೋಡಿ, ಆಶೀರ್ವದಿಸಿ!

08:39 AM Jun 15, 2020 | Suhan S |

ದಾವಣಗೆರೆ: ಸಾಮಾನ್ಯವಾಗಿ ಮದುವೆ ಎಂದರೆ ನೆಂಟರಿಷ್ಟರು, ಬಂಧು-ಬಳಗ, ಗೆಳೆಯರು, ಆಪ್ತ ವಲಯವನ್ನು ಆಹ್ವಾನಿಸುವ ಜೊತೆಗೆ ಪ್ರತಿಯೊಬ್ಬರೂ ತಪ್ಪದೇ ಮದುವೆಗೆ ಬಂದು, ಆಶೀರ್ವಾದ ಮಾಡಿ, ಊಟ ಮಾಡಿಕೊಂಡು ತೆರಳಬೇಕು ಎಂದು ವಧು-ವರರ ಕುಟುಂಬದವರು ಬಯಸುವುದು ಸಹಜ.

Advertisement

ಆದರೆ, ತಮ್ಮ ಸ್ವಗೃಹದಿಂದಲೇ ಆನ್‌ಲೈನ್‌ ಮೂಲಕ ಆಶೀರ್ವದಿಸಬೇಕಾಗಿ ವಧು-ವರರ ಕುಟುಂಬದವರು ವಿಜ್ಞಾಪನೆ ಮಾಡುವ ಮೂಲಕ ಗಮನ ಸೆಳೆದಿರುವುದು ವಿಶೇಷ. ಕಾರಣ ಮಹಾಮಾರಿ ಕೋವಿಡ್ ಸೋಂಕಿನ ಭಯ!.

ಕೋವಿಡ್‌-19ರ ಸರ್ಕಾರದ ಅಧಿನಿಯಮದ ಪ್ರಕಾರ 50ಕ್ಕಿಂತಲೂ ಹೆಚ್ಚಿನ ಜನರಿಗೆ ಪ್ರತ್ಯಕ್ಷವಾಗಿ ಭಾಗವಹಿಸಲು ಅವಕಾಶವಿಲ್ಲದ ಕಾರಣ ತಾವೆಲ್ಲರೂ ವಧು-ವರರನ್ನು ಸ್ವ-ಗೃಹದಿಂದಲೇ ಈ ಕೆಳಗಿನ ಆನ್‌ ಲೈನ್‌ ಲಿಂಕ್‌ ಮುಖಾಂತರ ಆಶೀವರ್ದಿಸಬೇಕಾಗಿ ಕೋರುತ್ತೇವೆ… ಎಂದು ದಾವಣಗೆರೆಯ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಜೂ.15 ರಂದು ನಿಗದಿಯಾಗಿರುವ ಎನ್‌. ರಂಜಿತ ಮತ್ತು ಸಿ.ಎನ್‌. ನವೀನ್‌ ಎಂಬುವರ ಆಹ್ವಾನ ಪತ್ರಿಕೆಯಲ್ಲಿ ಸೂಚನೆ ನೀಡಲಾಗಿದೆ.  ಆಹ್ವಾನ ಪತ್ರಿಕೆಯಲ್ಲಿ ಆನ್‌ಲೈನ್‌ Watch on FaceBook live Kishor Nanda Profile ವಿಳಾಸ ವನ್ನೂ ಸಹ ನೀಡಲಾಗಿದೆ.

ಕೋವಿಡ್ ವೈರಸ್‌ ದಾಳಿ, ಲಾಕ್‌ಡೌನ್‌ ಮುಂಚೆ ವಿವಾಹ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ಬಹು ಅದ್ಧೂರಿಯಾಗಿ ನೆರವೇರುವುದನ್ನು ಕಾಣಬಹುದಿತ್ತು. ತಮಗೆ ಬೇಕಾದವರ ಮನೆ ಮನೆಗೆ ತೆರಳಿ, ಆಹ್ವಾನಪತ್ರಿಕೆ ನೀಡಿ, ತಪ್ಪಿಸದೇ ಮದುವೆಗೆ ಬರಲೇಬೇಕು… ಎಂಬ ಕಟ್ಟಪ್ಪಣೆ ಮಾಡಿ ಬರಲಾಗುತ್ತಿತ್ತು. ಒಂದೊಮ್ಮೆ ಯಾವುದೋ ಕಾರಣಕ್ಕೆ ಅತ್ಯಾಪ್ತರು ಏನಾದರೂ ಮದುವೆಗೆ ಬರದೇ ಇದ್ದರೆ ಅದರ ಕಥೆಯೇ ಬೇರೆಯದ್ದಾಗಿರುತ್ತಿತ್ತು. ಸಂಬಂಧಗಳೇ ಕಡಿದುಕೊಳ್ಳುವ ಹಂತದವರೆಗೆ ಹೋಗುತ್ತಿತ್ತು. ಆದರೆ, ಈಗ ಎಲ್ಲವೂ ತದ್ವಿರುದ್ಧ. ಮದುವೆಗೆ ಬರಲೇಬೇಡಿ…. ಎಂದು ಕೇಳಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್‌-19ರ ಮಾರ್ಗಸೂಚಿ, ಕೋವಿಡ್ ಹಾವಳಿಗೆ ಹೆದರಿ, ಮದುವೆಗೇ ಬರಬೇಡಿ ಫೇಸ್‌ಬುಕ್‌ನಲ್ಲೇ ಮದುವೆ ನೋಡಿ, ಆನ್‌ಲೈನ್‌ ಮೂಲಕವೇ ಆಶೀರ್ವದಿಸಿ ಎಂದು ವಿಜ್ಞಾಪಿಸುವ ಕಾಲ ಬಂದಿದೆ. ಪ್ರಾಯಶಃ ಇಂತದೊಂದು ವಾತಾವರಣ ನಿರ್ಮಾಣ ಆಗಬಹುದು ಎಂಬ ಊಹೆಯೂ ಯಾರಿಗೂ ಇರಲಿಲ್ಲ. ಜೂ.15 ರಂದೇ ದಾವಣಗೆರೆಯಲ್ಲಿ ನಡೆಯುವ ಮತ್ತೂಂದು ಮದುವೆ ಆಹ್ವಾನ ಪತ್ರಿಕೆಯಲ್ಲಿ ಮದುವೆಗೆ ಬರುವಂತಹವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಲೇಬೇಕು. ಸಾಮಾಜಿಕ ಅಂತರ ಕಾಪಾಡಲು ಸಹಕರಿಸಬೇಕು ಎಂದು ಕೋರಲಾಗಿದೆ. ಕೇಂದ್ರ, ರಾಜ್ಯ ಸರ್ಕಾರ ಲಾಕ್‌ಡೌನ್‌ ನಿಯಮಗಳಲ್ಲಿ ಸಡಿಲಿಕೆ ಮಾಡಿರಬಹುದು. ಜನರು ಬೇಕಾಬಿಟ್ಟಿ ಓಡಾಟ ಮಾಡುತ್ತಿರಬಹುದು. ಆದರೂ, ಮಹಾಮಾರಿ ಕೊರೊನಾದ ಭಯ ಹೋಗಿಲ್ಲ ಎಂಬುದಕ್ಕೆ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆಗಳಲ್ಲಿನ ವಿಜ್ಞಾಪನೆಗಳೇ ಸಾರಿ ಸಾರಿ ಹೇಳುತ್ತವೆ.

Advertisement

ಕೋವಿಡ್ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದುವೆಗೆ 50 ಕ್ಕಿಂತಲೂ ಹೆಚ್ಚು ಜನರು, ವಯೋವೃದ್ಧರು, ಸಣ್ಣ ಮಕ್ಕಳು ಬರುವಂತಿಲ್ಲ. ಎಲ್ಲರಿಗೂ ಮದುವೆ ನೋಡುವ ಆಸೆ ಇರುತ್ತವೆ. ವಧು-ವರರಿಗೂ ಹಿರಿಯರ ಆಶೀರ್ವಾದ ಬೇಕಾಗುತ್ತದೆ. ಒಂದು ಕಡೆ ಸರ್ಕಾರದ ರೂಲ್ಸ್‌ ಫಾಲೋ ಮಾಡಬೇಕು. ಇನ್ನೊಂದು ಕಡೆ ಎಲ್ಲರೂ ಮದುವೆ ನೋಡುವಂತಾಗಬೇಕು ಎಂಬ ಉದ್ದೇಶದಿಂದ ಆನ್‌ಲೈನ್‌ ವ್ಯವಸ್ಥೆ ಮಾಡಿದ್ದೇವೆ ಎಂದು ವಧುವಿನ ಸಹೋದರ ಸಂಬಂಧಿ ಸಿ.ಎನ್‌. ಬದರಿನಾಥ್‌ ತಿಳಿಸಿದರು.

 

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next