Advertisement

ಕೆರೆಗಳಿಗೆ ನೀರು ತರಲು ಹೊಸ ಯೋಜನೆ

04:14 PM Nov 06, 2022 | Team Udayavani |

ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿ ಉದ್ದೇಶದಿಂದ ಜಿಲ್ಲೆಯಲ್ಲಿರುವ ಕೆರೆಗಳಿಗೆ ನೀರು ತುಂಬಿಸುವ ಸಮಗ್ರ ನೂತನ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಅಗತ್ಯ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಬೆಂಗಳೂರಿನ ವಿಧಾನಸೌಧದ 3ನೇ ಮಹಡಿಯ ಸಮಿತಿ ಸಭಾಂಗಣದಲ್ಲಿ, ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಸಂಬಂಧ ನಡೆದ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಸವಾಂಗೀಣ ಪ್ರಗತಿ ದೃಷ್ಟಿಯಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳ ಅನುಷ್ಠಾನ ತೀರಾ ಅಗತ್ಯವಾಗಿದೆ. ಯೋಜನೆಯ ಜಾರಿ ತುರ್ತಾಗಿ ಆಗಬೇಕಿದೆ. ಆರ್ಥಿಕ ಇಲಾಖೆ ಅನುಮೋದನೆ, ಟೆಂಡರ್‌ ಪ್ರಕ್ರಿಯೆ ಇನ್ನಿತರ ಅವಶ್ಯಕ ಕ್ರಮಗಳಿಗೆ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿಕೊಂಡು ಶೀಘ್ರವೇ ಯೋಜನೆ ಚಾಲನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಇದೇ ವೇಳೆ ಆನೆಮಡುವಿನ ಕೆರೆಗೆ ನೀರು ತುಂಬಿಸುವ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ ಸಚಿವರು ಯಾವುದೇ ತೊಂದರೆಯಿಲ್ಲದೇ ಆನೆಮಡುವಿನ ಕೆರೆಗೆ ನೀರು ತುಂಬಿಸಲು ಅಗತ್ಯವಿರುವ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದರು.

ಹನೂರು ಕ್ಷೇತ್ರ ವ್ಯಾಪ್ತಿಗೆ ಬರುವ ರಾಮನಗುಡ್ಡ, ಹುಬ್ಬೆ ಹುಣಸೆ ಯೋಜನೆ ಕಾಮಗಾರಿಗಳನ್ನು ಕೈಗೊಂಡು ಕೆರೆಗಳನ್ನು ತುಂಬಿಸುವ ಯೋಜನೆಯ ಪ್ರಗತಿಗೆ ಮುಂದಾಗಬೇಕು. ಜಿಲ್ಲೆಯಲ್ಲಿ ಬಾಕಿ ಇರುವ ಕೆರೆ ತುಂಬಿಸುವ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ದ ಸೋಮಣ್ಣ ಆಧಿಕಾರಿಗಳಿಗೆ ಸೂಚನೆ ನೀಡಿದರು.

ಶಾಸಕರಾದ ಆರ್‌. ನರೇಂದ್ರ, ಎನ್‌. ಮಹೇಶ್‌, ಸಿ.ಎಸ್‌. ನಿರಂಜನ್‌ ಕುಮಾರ್‌, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು, ಜಲ ಸಂಪನ್ಮೂಲ ಇಲಾಖೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಸಣ್ಣ ನೀರಾವರಿ ಇಲಾಖೆ ಸರ್ಕಾರದ ಕಾರ್ಯದರ್ಶಿಗಳಾದ ಮೃತ್ಯುಂಜಯಸ್ವಾಮಿ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ಮುಖ್ಯ ಎಂಜಿನಿಯರ್‌ ವೆಂಕಟೇಶ್‌, ಅಧೀಕ್ಷಕ ಎಂಜಿನಿಯರ್‌ ಶಿವಮಾದಯ್ಯ, ಕಾರ್ಯಪಾಲಕ ಎಂಜಿನಿಯರ್‌ ಎಂ.ಬಿ. ಪಾಟೀಲ್‌, ವೆಂಕಟೇಶ್‌ ಪ್ರಭು, ಕಿಶೋರ್‌, ಈಶ್ವರ್‌, ಮಂಜುನಾಥ್‌ ಇತರರಿದ್ದರು.

Advertisement

ಯೋಜನೆ ಕುರಿತು ವರದಿ ಸಲ್ಲಿಸಲು ಸೂಚನೆ: ಕೆರೆಗಳಿಗೆ ನೀರು ತುಂಬಿಸುವ ಒಟ್ಟು 7 ಯೋಜನೆಗಳ ಪೈಕಿ 3 ಯೋಜನೆಗಳಿಗೆ 745 ಕೋಟಿ ರೂ. ಅಂದಾಜು ಮೊತ್ತವಾಗಿದೆ. ಈ ಯೋಜನೆಗೆ ಈಗಾಗಲೇ ಅಂದಾಜು ಪರಿಶೀಲನಾ ಸಭೆಯಲ್ಲಿ ಮಂಡಿಸಿ ತೆರವು ಪಡೆಯಲಾಗಿದೆ. ಉಳಿದ 4 ಯೋಜನೆಗಳಿಗೆ ಹೊಸದಾಗಿ ಒಟ್ಟು 749 ಕೋಟಿ ರೂ. ವೆಚ್ಚದ ಅಂದಾಜು ಮೊತ್ತದ ಲೈನ್‌ ಡಿಪಿಆರ್‌ ಆಗಿದೆ. ಇದಕ್ಕೆ ವಿಸೃತ ಯೋಜನೆ ವರದಿ ಅಂತಿಮಗೊಳಿಸಬೇಕು ಎಂದು ಸಚಿವ ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು.

ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಬಾಕಿಯಿರುವ ಎಲ್ಲಾ ರೂಪುರೇಷೆಗಳನ್ನು ಅಂತಿಮಗೊಳಿಸಿ ಅನುಮೋದನೆ ಪಡೆದುಕೊಳ್ಳಬೇಕು. ವಿಳಂಬ ಮಾಡದೇ ಯೋಜನೆ ಜಾರಿಗೆ ಮುಂದಾಗಲು ಹಿರಿಯ ಅಧಿಕಾರಿಗಳೇ ಕ್ರಮ ತೆಗೆದುಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next