ಮಂಗಳೂರು: 2015ರ ಬಳಿಕದ ಕೋಮುಗಲಭೆ ಪ್ರಕರಣಗಳನ್ನು ಪರಿಶೀಲಿಸಿ, ಅದರ ಆರೋಪಿಗಳ ಬಗ್ಗೆ ನಿಗಾ ಇರಿಸುವಂತೆ ರಾಜ್ಯ ಪೊಲೀಸ್ ಉಪಮಹಾನಿರ್ದೇಶಕ ಅಲೋಕ್ ಕುಮಾರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳೂರಿನ ಕಮಿಷನರ್ ಕಚೇರಿಯಲ್ಲಿ ದ.ಕ, ಉಡುಪಿ ಜಿಲ್ಲಾ ಪೊಲೀಸ್ ಹಾಗೂ ನಗರ ಕಮಿಷನರ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ಜೊತೆ ಗುರುವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಹಿತಕರ ಘಟನೆ ನಿಯಂತ್ರಿಸುವ ಸಲುವಾಗಿ ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ಹಾಕಿರುವ ನಿರ್ಬಂಧಗಳನ್ನು ಹಂತಹಂತವಾಗಿ ತೆರವು ಮಾಡಲಾಗುವುದು, ಅದರೊಂದಿಗೆ ದ್ವಿಚಕ್ರವಾಹನಗಳಲ್ಲಿ ಸಂಚರಿಸುವ ಸಹಸವಾರರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು ಎಂದು ತಿಳಿಸಿದರು.
ಸಹಸವಾರರು ಅನೇಕ ಬಾರಿ ಅಪರಾಧಗಳಲ್ಲಿ ಭಾಗಿಯಾಗುವುದು ಜಾಸ್ತಿ ಕಂಡುಬಂದಿದೆ. ಇತರ ರಾಜ್ಯಗಳ ಮಾದರಿಯಲ್ಲಿ ಇಲ್ಲಿಯೂ ಅವರ ಮೇಲೆ ನಿಗಾ ಇರಿಸಲಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಯುವಕರು ಇಬ್ಬರು ಹೋಗುವಂತಿಲ್ಲ. ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಹೊರತುಪಡಿಸಿ ಉಳಿದವರು ದ್ವಿಚಕ್ರ ವಾಹನದಲ್ಲಿ ಸಂಚರಿಸುವಂತಿಲ್ಲ. ಮುಖ್ಯವಾಗಿ ಯುವಕರ ಮೇಲೆ ನಿಗಾ ಇರಿಸಲಾಗುವುದು ಎಂದರು.
ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಎಲ್ಲಿದ್ದಾರೆ ? ಹೇಗಿದ್ದಾರೆ, ಅವರ ಮೇಲೆ ಯಾವುದಾದರೂ ಪ್ರಿವೆಂಟಿವ್ ಆಗಿ ರೌಡಿ ಶೀಟ್ ತೆರೆಯುವ ಕೆಲಸ ಆಗಿದೆಯಾ? ಕೇಸಿನ ವಿಚಾರಣೆ ಹೇಗೆ ನಡೆಯುತ್ತಿದೆ ಎಂಬಿತ್ಯಾದಿ ಆಯಾಮಗಳಲ್ಲಿ ಪರಿಶೀಲನೆ ಮಾಡಬೇಕು. ಶರತ್ ಮಡಿವಾಳ ಹತ್ಯೆ, ದೀಪಕ್ ರಾವ್ ಹತ್ಯೆ, ಪಿಂಕಿ ನವಾಜ್ ಹತ್ಯೆಯತ್ನದಂತಹ ಅನೇಕ ಪ್ರಕರಣಗಳಲ್ಲಿ ವಿಚಾರಣೆ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ. ಕೆಲವೊಮ್ಮೆ ಆರೋಪಿಗಳು ಜಾಮೀನು ಪಡೆದು ಹೊರಬರುವುದು, ತನಿಖೆ ಸರಿಯಾಗಿ ನಡೆಯದೆ ಕೇಸ್ ಖುಲಾಸೆಯಾಗಿ ಹೊರಬಂದು ಆರೋಪಿ ಮತ್ತೆ ಅಂತಹ ಕೃತ್ಯ ಮುಂದುವರಿಸುವುದು ಆಗಬಾರದೆಂದು ಸೂಚನೆ ನೀಡಲಾಗಿದೆ ಎಂದರು.
ಕೆಲವೊಂದು ಆರೋಪಿಗಳು ತಲೆಮರೆಸಿಕೊಂಡಿದ್ದರೆ ಆ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ, ಪಿಂಕಿನವಾಜ್ ಹತ್ಯೆಯತ್ನ ಪ್ರಕರಣ ಆರೋಪಿ ನೌಷಾದ್ ಎಂಬಾತ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ, ಇಂತಹ ಪ್ರಕರಣದಲ್ಲಿ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಇದನ್ನೂ ಓದಿ: ಛತ್ತೀಸ್ ಗಢದಲ್ಲಿ ಲಘು ಭೂಕಂಪ; ಸಾವು, ನೋವು ಸಂಭವಿಸಿಲ್ಲ: ವರದಿ
ಗಡಿಯಲ್ಲಿ ಒಂದು ವರ್ಷ ಚೆಕ್ಪೋಸ್ಟ್
ಜಿಲ್ಲಾ ಪೊಲೀಸ್ ವತಿಯಿಂದ ಗಡಿಪ್ರದೇಶಗಳಲ್ಲಿ 12 ಕಡೆ ಹಾಗೂ ನಗರಪೊಲೀಸ್ ವ್ಯಾಪ್ತಿ ಯಲ್ಲಿ 6 ಕಡೆಗಳಲ್ಲಿ ಚೆಕ್‌ಪೋಸ್ಟ್ ಹಾಕಲಾಗಿದೆ. ಸಿಎಂ ಸೂಚನೆ ಮೇರೆಗೆ ಹಾಗೂ ಅಹಿತಕರ ಘಟನೆಗಳನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಮುಂದಿನ ಒಂದು ವರ್ಷ ಕಾಲ ಚೆಕ್‌ಪೋಸ್ಟ್‌ಗಳು ಕಾರ್ಯವಹಿಸಲಿವೆ ಎಂದರು.
ಸಭೆಯಲ್ಲಿ ಐಜಿಪಿ ದೇವಜ್ಯೋತಿ ರೇ, ಕಮಿಷನರ್ ಶಶಿಕುಮಾರ್, ಉಡುಪಿ ಎಸ್ಪಿ ವಿಷ್ಣುವರ್ಧನ್, ದ.ಕ ಎಸ್ಪಿ ರಿಷಿಕೇಶ್ ಸೋನಾವಣೆ ಪಾಲ್ಗೊಂಡಿದ್ದರು.