Advertisement

Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ

05:24 PM Dec 16, 2024 | Team Udayavani |

ಬೆಳಗಾವಿ : ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ನಿಯಂತ್ರಣಕ್ಕೆ ಮುಂದಿನ ತಿಂಗಳು ಹೊಸ ಕಾರ್ಯಕ್ರಮ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೋಮವಾರ(ಡಿ16) ಹೇಳಿಕೆ ನೀಡಿದ್ದಾರೆ.

Advertisement

ವಿಧಾನಪರಿಷತ್ ನಲ್ಲಿ ಎಂಎಲ್ ಸಿ ಜಗದೇವ ಗುತ್ತೇದಾರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಗುಂಡೂರಾವ್, ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆ ಪ್ರಮಾಣ ವಾರ್ಷಿಕವಾಗಿ ಹೆಚ್ಚುತ್ತಲೇ ಇದೆ. 2021-2022ರಲ್ಲಿ ಶೇಕಡ 35ರಷ್ಟಿದ್ದ ಸಿಸೇರಿಯನ್ ಹೆರಿಗೆ ದರವು 2022-23ರಲ್ಲಿ ಶೇಕಡ 38ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಸಿಸೇರಿಯನ್ ಪ್ರಮಾಣ ಶೇ.46ರಷ್ಟಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದೇವೆ” ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 61 ರಷ್ಟು ಹೆರಿಗೆಗಳು ಸಿಸೇರಿಯನ್ ಆಗಿದ್ದು, ಸಿಸೇರಿಯನ್ ಮೂಲಕ ಹೆಚ್ಚು ಆದಾಯವನ್ನು ಗಳಿಸುತ್ತವೆ ಮತ್ತು ನಿರ್ವಹಿಸಲು ಸುಲಭ ಎಂದು ಹೇಳಿದರು.

“ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ಇದನ್ನು ನಿಗ್ರಹಿಸುವುದು ಅತ್ಯಗತ್ಯ. ನೈಸರ್ಗಿಕ ಹೆರಿಗೆಗೆ ಮಹಿಳೆಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗಿರಬೇಕು. ನಾವು ಹೊಸ ಕಾರ್ಯಕ್ರಮವನ್ನು ರೂಪಿಸುತ್ತಿದ್ದು, ಮುಂದಿನ ತಿಂಗಳು ಅದನ್ನು ಪ್ರಕಟಿಸಲಾಗುವುದು. ಕೆಲವು ಖಾಸಗಿ ಆಸ್ಪತ್ರೆಗಳು 80-90 ರಷ್ಟು ಸಿಸೇರಿಯನ್ ಹೆರಿಗೆ ಮಾಡುತ್ತಿವೆ, ”ಎಂದರು.

ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಗುಂಡೂರಾವ್ ‘2023-24ರಿಂದ ರಾಜ್ಯದಲ್ಲಿ ಎಂಟು ಪ್ರಕರಣಗಳು ದಾಖಲಾಗಿದ್ದು, ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ 46 ಜನರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

Advertisement

ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ತಪಾಸಣೆ ಹೆಚ್ಚಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭ್ರೂಣ ಹತ್ಯೆ ಪ್ರಕರಣಗಳು ಪತ್ತೆಯಾಗಿವೆ. ಭ್ರೂಣಹತ್ಯೆಯಲ್ಲಿ ತೊಡಗಿರುವವರ ವಿರುದ್ಧ ಯಶಸ್ವಿ ಡಿಕಾಯ್ ಆಪರೇಷನ್ ಮೂಲಕ (PCPNDT) ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪಿಸಿಪಿಎನ್‌ಡಿಟಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸ್ಕ್ಯಾನಿಂಗ್ ಸೆಂಟರ್‌ಗಳು, ಮಾಲಕರು ಅಥವಾ ವೈದ್ಯರ ವಿರುದ್ಧ ರಾಜ್ಯದಲ್ಲಿ 136 ಪ್ರಕರಣಗಳನ್ನು ದಾಖಲಿಸಲಾಗಿದೆ. 74 ಮಂದಿಗೆ ದಂಡ ವಿಧಿಸಿ ಖುಲಾಸೆ ಮಾಡಲಾಗಿದೆ, 65 ಪ್ರಕರಣಗಳು ಇನ್ನೂ ವಿವಿಧ ಹಂತಗಳಲ್ಲಿ ನ್ಯಾಯಾಲಯದಲ್ಲಿ ಬಾಕಿ ಉಳಿದಿವೆ ಎಂದು ವಿವರ ನೀಡಿದರು.

ರಾಜ್ಯಮಟ್ಟದಲ್ಲಿ ಶೇ.100ರಷ್ಟು ಗರ್ಭಿಣಿಯರ ನೋಂದಣಿ ಕಾರ್ಯ ನಡೆಯುತ್ತಿದ್ದು, ಗ್ರಾಮ ಮಟ್ಟದಲ್ಲಿ ಲಿಂಗ ಅನುಪಾತದ ದತ್ತಾಂಶದ ಮೇಲೆ ನಿಗಾ ಇಡಲು ಮಾಹಿತಿ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next