Advertisement

ಮಂಗಳೂರು ಏರ್‌ಪೋರ್ಟ್‌ಗೂ ಹೊಸ ಸಾಧ್ಯತೆ

09:38 AM Dec 06, 2018 | |

ಕರಾವಳಿ ಭಾಗದ ಪ್ರವಾಸೋದ್ಯಮ, ವ್ಯಾಪಾರ-ವಹಿವಾಟು,ರಫ್ತು, ಶಿಕ್ಷಣ, ಆರೋಗ್ಯ-ಹೀಗೆ ಸ್ಥಳೀಯ ಸಮಗ್ರ ಅಭಿವೃದ್ಧಿಗೆ ಸಂಪರ್ಕ ಕೊಂಡಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದಕ್ಕೆ ಪ್ರತಿಸ್ಪರ್ಧಿ ಎಂಬಂತೆ ಕಣ್ಣೂರಿನ ವಿಮಾನ ನಿಲ್ದಾಣ ಡಿ. 9ರಂದು ಆರಂಭಗೊಳ್ಳುತ್ತಿದೆ. ವಾಸ್ತವದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲೂ ಅತ್ಯಾಧುನಿಕ ಸೌಲಭ್ಯಗಳಿಂದ ಪ್ರಯಾಣಿಕ ಸ್ನೇಹಿಯಾಗಿ ರೂಪುಗೊಳ್ಳುತ್ತಿದೆ. ಒಂದೆಡೆ ಸೇವಾ ಗುಣಮಟ್ಟ ಹೆಚ್ಚಿಸುವ ಸವಾಲು, ಇನ್ನೊಂದೆಡೆ “ಖಾಸಗೀಕರಣ’ದ ಆತಂಕ-ಇವೆರಡೂ ಸದ್ಯದ‌ ಸವಾಲುಗಳು. ಈ ಹಿನ್ನೆಲೆಯಲ್ಲಿ ಉದಯವಾಣಿಯ ಅಭಿಯಾನ “ಮಂಗಳೂರು ವಿಮಾನ ನಿಲ್ದಾಣ: ಸಾಧ್ಯತೆ-ಸವಾಲುಗಳು’ ಇಂದಿನಿಂದ ಆರಂಭ.

Advertisement

ಮಂಗಳೂರು: ನೆರೆಯ ಕಣ್ಣೂರಿನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾರ ದೊಳಗೆ ಕಾರ್ಯಾರಂಭ ಮಾಡಲಿದೆ. ಹಾಗೆಯೇ ರಾಜ್ಯದ 3ನೇ ಅತಿದೊಡ್ಡ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಈ ತಿಂಗಳಿನಿಂದ ಕುವೈಟ್‌, ಸೌದಿ ಸಹಿತ ಹೊರದೇಶಗಳಿಗೆ ಸಂಪರ್ಕ ವಿಮಾನ ಸೇವೆ (ಕನೆಕ್ಟಿಂಗ್‌ ಫ್ಲೈಟ್) ಪ್ರಾರಂಭ ಸಾಧ್ಯತೆಯಿದೆ. ಈ ಎರಡು ಮಹತ್ವದ ಬೆಳವಣಿಗೆಗಳು ಮಂಗಳೂರು ವಿಮಾನ ನಿಲ್ದಾಣವನ್ನು ಆಶ್ರಯಿಸಿದ್ದ ಪ್ರಯಾಣಿಕರಿಗೆ ಹೊಸ ಆಯ್ಕೆ ತೆರೆದಿರಿಸಿವೆ. 

ಈ ನಿಲ್ದಾಣದ ಪ್ರಯಾಣಿಕರ ಸಂಖ್ಯೆಯ ಮೇಲೆ ಹುಬ್ಬಳ್ಳಿಯಿಂದ ವಿದೇಶಿ ವಿಮಾನಗಳ ಹಾರಾಟ ಅಷ್ಟೊಂದು ಪರಿಣಾಮ ಬೀರದು. ಆದರೆ ಕಣ್ಣೂರಿನ ನಿಲ್ದಾಣ ಪರಿಣಾಮ ಬೀರಬಹುದು ಎಂಬುದು ಬಲ್ಲವರ ಲೆಕ್ಕಾಚಾರ.
“ಉದಯವಾಣಿ’ಯು ಕಣ್ಣೂರಿನ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ವಾಸ್ತವಾಂಶ ವರದಿ ಮಾಡಿದೆ. ಅದಕ್ಕೆ ಸಮನಾಗಿ ಅತ್ಯಾಧುನಿಕ ಸೇವಾ ಸವಲತ್ತುಗಳನ್ನು ಅಳವಡಿಸಿ ಮಂಗಳೂರು ನಿಲ್ದಾಣ ಹೊಸ ರೂಪ ಪಡೆಯುತ್ತಿದೆ. ವರ್ಷದೊಳಗೆ ಮತ್ತಷ್ಟು ಯಾನ ಆರಂಭಿಸುವ ಉತ್ಸಾಹದಲ್ಲಿದೆ. 

ನಗರಕ್ಕೆ ತುಂಬಾ ಹತ್ತಿರ
ನಗರದಿಂದ ಕೇವಲ 12 ಕಿ.ಮೀ. ದೂರದ ಬಜಪೆ ವಿಮಾನ ನಿಲ್ದಾಣಕ್ಕೆ ಉತ್ತಮ ರಸ್ತೆ ಸಂಪರ್ಕ ವ್ಯವಸ್ಥೆಯಿದೆ. ನಗರದಿಂದ ನಿಲ್ದಾಣ ತಲುಪಲು 15 ನಿಮಿಷ ಸಾಕು. ನವ ಮಂಗಳೂರು ಬಂದರೂ ಹತ್ತಿರದಲ್ಲಿದೆ. ರೈಲಿನ ಮೂಲಕ ಬಂದು ವಿಮಾನ ಏರುವವರಿಗೂ ಅನುಕೂಲ. ಬೆಂಗಳೂರಿನ ವಿಮಾನ ನಿಲ್ದಾಣ ಅಥವಾ ಕಣ್ಣೂರಿನ ಹೊಸ ನಿಲ್ದಾಣಕ್ಕೆ ಹೋಲಿಸಿದರೆ ರಸ್ತೆ, ರೈಲು ಹಾಗೂ ಜಲ ಮಾರ್ಗದ ಮೂಲಕ ಕಡಿಮೆ ಅವಧಿಯಲ್ಲಿ ತಲುಪ ಬಹುದಾದ ನಿಲ್ದಾಣ ಮಂಗಳೂರಿನದು. ಹೀಗಾಗಿ ಕರಾವಳಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಜತೆಗೆ ಆರ್ಥಿಕ ಹೆಬ್ಟಾಗಿಲಾಗಿ ಇನ್ನಷ್ಟು ಎತ್ತರಕ್ಕೆ ಬೆಳಗಿಸುವ ಸಾಮರ್ಥ್ಯ ಇದಕ್ಕಿದೆ. 

ಹೊಸ ರಾಡಾರ್‌ ನೇವಿಗೇಷನ್‌
ನಿಲ್ದಾಣದಲ್ಲಿ ಈಗ ಹೊಸ ಮಾದರಿ “ಎಎಸ್‌ಆರ್‌/ಎಂಎಸ್‌ಎಸ್‌ಆರ್‌’ ರಾಡಾರ್‌ ತಂತ್ರಜ್ಞಾನ ಅಳವಡಿಕೆ ನಡೆಯುತ್ತಿದೆ. ಇದರಡಿ ವಿಮಾನಗಳು ಲ್ಯಾಂಡಿಂಗ್‌ ಅಥವಾ ಟೇಕಾಫ್‌ಗೆ ಹೆಚ್ಚು ಕಾಯ ಬೇಕಿಲ್ಲ. ಏರ್‌ ಟ್ರಾಫಿಕ್‌ ಕಂಟ್ರೋಲ್‌ ವ್ಯವಸ್ಥೆಗೆ ಸುತ್ತು ಹೊಡೆಯದೆ ನೇರ ಇಳಿಯಬಹುದು. ಇದರಿಂದ ಪ್ರಯಾಣಿಕರಿಗೆ ಸಮಯ ಉಳಿತಾಯವಾದರೆ, ಏರ್‌ಲೈನ್ಸ್‌ಗಳಿಗೆ ಇಂಧನ ಉಳಿತಾಯ- ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಸದ್ಯ ಈ ಸೌಲಭ್ಯ ದೊಡ್ಡ ಮಟ್ಟದ ಏರ್‌ಪೋರ್ಟ್‌ಗಳಲ್ಲಷ್ಟೇ ಇದೆ. 

Advertisement

ರನ್‌ವೇ ಸೇಫ್ಟಿ ಹೆಚ್ಚಳ
ಮಂಗಳೂರು ನಿಲ್ದಾಣ ರನ್‌ವೇ ಅಗಲ ಈಗ 75 ಮೀ. ರನ್‌ವೇ ಸುರಕ್ಷತಾ ಬೇಸಿಕ್‌ ಸ್ಟ್ರಿಪ್‌ ವಿಸ್ತರಣೆ ಹಾಗೂ ಪರ್ಯಾಯ ಟ್ಯಾಕ್ಸಿ ಟ್ರ್ಯಾಕ್‌ ವಿಸ್ತರಿಸುತ್ತಿದೆ. ಸುಮಾರು 121 ಕೋ.ರೂ. ವೆಚ್ಚದಲ್ಲಿ ರನ್‌ವೇ ಅಗಲವನ್ನು 150 ಮೀ.ಗೆ ವಿಸ್ತರಿಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಾನದಂಡ ಪಡೆಯಲಿದೆ. ಇದರಿಂದ ವಿಮಾನವು ರನ್‌ವೇಯಿಂದ ಹೊರ ಜಾರಿದರೂ ಹೆಚ್ಚು ಅಪಾಯವಾಗದು. 

ಗಂಟೆಗೆ 20 ವಿಮಾನ ಹಾರಾಟ
ಮಂಗಳೂರು ನಿಲ್ದಾಣ ಈಗ ಗಂಟೆಗೆ 13 ವಿಮಾನ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಆದರೆ ರನ್‌ವೇ ವಿಸ್ತರಣೆ, ಪರ್ಯಾಯ ಟ್ಯಾಕ್ಸಿ ಟ್ರ್ಯಾಕ್‌ ಮುಂತಾದ ತಂತ್ರಜ್ಞಾನ ಅಳವಡಿಕೆಯಿಂದ ಭವಿಷ್ಯದಲ್ಲಿ ಗಂಟೆಗೆ 20 ವಿಮಾನಗಳ ಹಾರಾಟ ನಿರ್ವಹಿಸಬಹುದು.

ಅತಿ ಉದ್ದದ ರನ್‌ವೇ ಅನಗತ್ಯ
ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಹಾಗೂ ಹೊಸ ಮಾದರಿ ವಿಮಾನಗಳು ಬಂದಿರುವ ಹಿನ್ನೆಲೆಯಲ್ಲಿ ಈಗ ಅತಿ ಉದ್ದದ ರನ್‌ವೇ ಅನಗತ್ಯ. ಮಂಗಳೂರಿನ ನಿಲ್ದಾಣದ ರನ್‌ವೇ 2,450 ಮೀ. ಉದ್ದವಿದ್ದು, ಅದು “ಎ 320′ ಮಾದರಿಯ ವಿಮಾನಗಳ ಹಾರಾಟಕ್ಕೆ ಸಾಕು. ಮಂಗಳೂರಿನಂಥ ನಿಲ್ದಾಣದಲ್ಲಿ 400 ಮಂದಿ ಪ್ರಯಾಣಿಸುವ ಏರ್‌ಬಸ್‌ನಂಥ ದೊಡ್ಡ ವಿಮಾನ ಹಾರಾಟ ನಿರೀಕ್ಷಿಸುವುದು ಕಾರ್ಯಸಾಧುವಲ್ಲ. ಅದಕ್ಕಿಂತಲೂ ಮುಖ್ಯವಾಗಿ ಹೊಸ ಆವಿಷ್ಕಾರದ ವಿಮಾನಗಳು ರನ್‌ವೇಯಲ್ಲಿ ಕಡಿಮೆ ದೂರ ಚಲಿಸಿ ಲಂಬವಾಗಿ ಹಾರಬಲ್ಲವು. ಹೀಗಾಗಿ ಭವಿಷ್ಯದಲ್ಲಿ ಇಲ್ಲಿನ ರನ್‌ವೇ ಅನ್ನು 2,450 ಮೀ.ನಿಂದ ಕಣ್ಣೂರು ಮಾದರಿಯಲ್ಲಿ 3,050 ಅಥವಾ 4,000 ಮೀ.ಗೆ ವಿಸ್ತರಿಸುವ ಅಗತ್ಯವೇನೂ ಇಲ್ಲ. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣ ರನ್‌ವೇ ಉದ್ದ ಕಡಿಮೆ ಅಥವಾ ವಿಸ್ತರಣೆಯಾಗದ ಕಾರಣ ಹೆಚ್ಚಿನ ಮತ್ತು ದೊಡ್ಡ ವಿಮಾನಗಳ ಹಾರಾಟ ಸಾಧ್ಯವಾಗುತ್ತಿಲ್ಲ ಎನ್ನುವ ವಾದ ಸರಿಯಲ್ಲ ಎನ್ನುತ್ತಾರೆ ಮಂಗಳೂರಿನ ವಿಮಾನ ನಿಲ್ದಾಣದ ತಂತ್ರಜ್ಞರು.

ಪ್ರಯಾಣಿಕರು ಮೂರು ಪಟ್ಟು ಹೆಚ್ಚಳ
ಮಂಗಳೂರು ವಿಮಾನ ನಿಲ್ದಾಣದಲ್ಲಿ 2012ರಲ್ಲಿ ಇದ್ದ 7.5 ಲಕ್ಷ ಪ್ರಯಾಣಿಕರ ಸಂಖ್ಯೆ 2017-18ಕ್ಕೆ 23.5 ಲಕ್ಷಕ್ಕೆ ಏರಿದೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರ ಸಂಖ್ಯೆ 5 ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 2016-17ರಲ್ಲಿ ಇದ್ದ 8.67 ಮೆ.ಟನ್‌ ಕಾರ್ಗೊ ನಿರ್ವಹಣೆಯು 2017-18ರಲ್ಲಿ  2,338 ಮೆ.ಟನ್‌ಗೇರಿದೆ. ಕಾರ್ಗೋ ನಿರ್ವಹಣೆಯಲ್ಲೂ ನಿರೀಕ್ಷೆಗೂ ಮೀರಿದ ಏರಿಕೆಯಾಗಿದೆ. ದೇಶದ ಬೇರೆ ಕೆಲವು ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಮಂಗಳೂರು ಹೆಚ್ಚು ಲಾಭದಲ್ಲಿ ಮುನ್ನಡೆಯುತ್ತಿರುವುದರ ಜತೆಗೆ ಮತ್ತಷ್ಟು ಪ್ರಯಾಣಿಕರನ್ನು ಆಕರ್ಷಿಸಲು ಮೇಲ್ದರ್ಜೆಗೆ ಏರುವುದು ಗಮನಾರ್ಹ.

ಸುರೇಶ್‌ ಪುದುವೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next