Advertisement

ಮಕ್ಕಳಿಂದ ಮೊಬೈಲ್‌ ಬಿಡಿಸಲು ಹೊಸ ಪ್ಲಾನ್‌

06:00 AM Sep 16, 2018 | |

ಬೆಂಗಳೂರು : ಶಾಲೆಯಿಂದ ಮನೆಗೆ ತೆರಳಿದ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಲಕಳೆಯುವುದನ್ನು ತಪ್ಪಿಸಲು ಹಾಗೂ ಈ ಬಗ್ಗೆ ಪಾಲಕ, ಪೋಷಕರಲ್ಲಿ ಅರಿವು ಮೂಡಿಸಲು ಹೊಸ ನಿಯಮ ರಚಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರಬೇಕಾದ ಮಕ್ಕಳು, ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಅತಿಯಾಗಿ ಒಗ್ಗಿಕೊಂಡಿರುವುದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಮಾತ್ರವಲ್ಲದೆ, ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ(ಕ್ಯಾಮ್ಸ್‌) ಕೂಡ ಈ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮ ರಚಿಸಲು ಇಲಾಖೆಯ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಶಾಲಾ ಮಕ್ಕಳನ್ನು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದಿಂದ ದೂರವಿಡುವಲ್ಲಿ ಪಾಲಕ, ಪೋಷಕರ ಕರ್ತವ್ಯ ಅತಿ ಮುಖ್ಯವಾಗಿದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್‌ ಇಲಾಖೆ(ಸೈಬರ್‌ ವಿಭಾಗ), ಆರೋಗ್ಯ ಇಲಾಖೆ ಮತ್ತು ನಿಮ್ಹಾನ್ಸ್‌ನ ತಜ್ಞ ವೈದ್ಯರು ಮತ್ತು ಶಿಕ್ಷಣ ತಜ್ಞರ ಸಲಹೆ ಪಡೆಯುಲು ನಿರ್ಧರಿಸಿದೆ.

ಮಾನಸಿಕ ಖನ್ನತೆಗೂ ಕಾರಣ: ಶಾಲಾ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣ ಬಳಸುವುದರಿಂದ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ಪಾಲಕರಿಗೆ ಅರಿವಿಲ್ಲದೇ, ತಮ್ಮ ಮಕ್ಕಳಿಗೆ ಮೊಬೈಲ್‌ ನೀಡುತ್ತಾರೆ. ಇದು ಮಕ್ಕಳು ಸುಲಭವಾಗಿ ಸಾಮಾಜಿಕ ಜಾಲತಾಣ ಪ್ರವೇಶಿಸಲು ದಾರಿಯಾಗಿದೆ. ಫೇಸ್‌ಬುಕ್‌, ವಾಟ್ಸ್‌ಆಪ್‌ ಮೊದಲಾದ ಜಾಲತಾಣಗಳಲ್ಲಿ ಸಂದೇಶ ರವನೆ ಮಾಡುತ್ತಾ, ಮರು ಸಂದೇಶ ಬಾರದಿದ್ದಾಗ ಮಾನಸಿಕ ಖನ್ನತೆಗೆ ಒಳಗಾಗಿರುವ ನಿದರ್ಶನವೂ ಇದೆ. ಹೀಗಾಗಿ ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣದಿಂದ ಮಕ್ಕಳನ್ನು ದೂರವಿಡಲು ಪಾಲಕ, ಪೋಷಕರಿಗೆ ಅರಿವು ಮೂಡಿಸಲು  ಹೊಸ ನಿಯಮ ರಚಿಸುವಂತೆ ಶಿಕ್ಷಣ ಇಲಾಖೆಗೆ ಕೋರಿಕೊಂಡಿದ್ದೇವೆ ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಮಾಹಿತಿ ನೀಡಿದರು.

ವಿವಿಧ ಇಲಾಖೆ ಅಧಿಕಾರಿಗಳಿಗೆ ಪತ್ರ:
ಶಿಕ್ಷಣ ಇಲಾಖೆ ರಾಜ್ಯದ ವಿವಿಧ ಶಾಲೆಗಳಲ್ಲಿ ಇರುವ ಮಕ್ಕಳ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು  ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣದ ದುರ್ಬಳಕೆ ತಪ್ಪಿಸಲು ಹೊಸ ನಿಯಮ ಒಂದನ್ನು ಅಗತ್ಯವಾಗಿ ರೂಪಿಸಬೇಕಿದೆ. ಪಾಲಕ, ಪೋಷಕರು, ಶಾಲಾಡಳಿತ ಮಂಡಳಿ ಹಾಗೂ ಸಾರ್ವಜನಿಕರು ಸೇರಿದಂತೆ ಇಡೀ ಸಮಾಜವೇ ವಿದ್ಯಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಯಲ್ಲಿ ಭಾಗಿಯಾಗುವಂತ ನಿಯಮ ರೂಪಿಸುವ ಅಗತ್ಯವಿದೆ ಎಂಬುದನ್ನು ಉಲ್ಲೇಖೀಸಿ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು, ಅವರಿಂದ ಮಾಹಿತಿ ಕೋರಿದ್ದಾರೆ.

Advertisement

ಪಾಲಕರಿಗೆ ಅರಿವು: ಶಾಲೆಯಿಂದ ಮನೆಗೆ ಹೋದ ಬಹುತೇಕ ವಿದ್ಯಾರ್ಥಿಗಳು ಮೊದಲು ಮುಟ್ಟುವುದೇ ಪಾಲಕರ ಮೊಬೈಲ್‌. ಇದನ್ನು ತುರ್ತು ತಪ್ಪಿಸಬೇಕಿದೆ. ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಕ್ಕೆ ಹೊಂದಿಕೊಂಡಷ್ಟು ಅವರಲ್ಲಿ ಬೇರೆ ರೀತಿಯ ಬದಲಾವಣೆಗಳು ಆಗುತ್ತಿರುತ್ತದೆ. ಶಾಲೆಗಳಲ್ಲಿ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆ ವಿಚಾರವಾಗಿ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಲೇ ಬೇಕು. ಶೈಕ್ಷಣಿಕ ಚುಟವಟಿಕೆಯಲ್ಲಿ ಮಕ್ಕಳು ಸಕ್ರಿಯವಾಗಿರಲು ಮೊಬೈಲ್‌ ಮತ್ತು ಸಮಾಜಿಕ ಜಾಲತಾಣದಿಂದ ದೂರವಿರಬೇಕು. ಇದಕ್ಕಾಗಿ ಪಾಲಕ, ಪೋಷಕರಿಗೆ ಅರಿವು ಮೂಡಿಸಲೇ ಬೇಕು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

ಶಾಲಾ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಖಾಸಗಿ ಶಾಲಾಡಳಿತ ಮಂಡಳಿಗಳಿಂದ ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಹೊಸ ನಿಯಮವೊಂದನ್ನು ರೂಪಿಸಲು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದೇವೆ. ಅವರಿಂದ ಸಂಗ್ರಹವಾದ ಮಾಹಿತಿ ಆಧಾರದಲ್ಲಿ ಶಿಕ್ಷಣ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.
– ಶಾಲಿನಿ ರಜನೀಶ್‌, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next