Advertisement

ತಿಂಗಳಾಂತ್ಯದಲ್ಲೇ ಹೊಸ ಸಂಸತ್‌ ಭವನ ಲೋಕಾರ್ಪಣೆ?

09:33 PM May 16, 2023 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ತಲೆಯೆತ್ತಿರುವ ನೂತನ ಸಂಸತ್‌ ಭವನಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಇದೇ ತಿಂಗಳ ಅಂತ್ಯದಲ್ಲಿ ಭವ್ಯ ಸಂಸತ್‌ ಭವನ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ 9 ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೇ 30ರಂದು ಅವರು ಸಂಸತ್‌ ಭವನವನ್ನು ಉದ್ಘಾಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಆದರೆ ಲೋಕಾರ್ಪಣೆಯ ದಿನಾಂಕದ ಕುರಿತು ಸರಕಾರದ ವತಿಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 2020ರ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿಯವರು ಹೊಸ ಸಂಸತ್‌ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಟಾಟಾ ಪ್ರಾಜೆಕ್ಟ್$Õ ಲಿ. ಸಂಸ್ಥೆಯು ಭವನದ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದ್ದು, 2 ಸಾವಿರ ಮಂದಿ ನೇರವಾಗಿ ಮತ್ತು 9 ಸಾವಿರ ಮಂದಿ ಪರೋಕ್ಷವಾಗಿ ಇದರ ನಿರ್ಮಾಣದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಪ್ರಸಕ್ತ ವರ್ಷಾಂತ್ಯದಲ್ಲಿ ಜಿ20 ರಾಷ್ಟ್ರಗಳ ಸ್ಪೀಕರ್‌ಗಳ ಸಮಾವೇಶವು ಹೊಸ ಸಂಸತ್‌ ಭವನದಲ್ಲೇ ನಡೆಯುವ ಸಾಧ್ಯತೆಯಿದೆ.

ವೈಶಿಷ್ಟ್ಯವೇನು?
ನಾಲ್ಕು ಅಂತಸ್ತುಗಳ ಸಂಸತ್‌ ಭವನದಲ್ಲಿ ಭಾರತದ ಪ್ರಜಾಸತ್ತಾತ್ಮಕ ಪರಂಪರೆಯನ್ನು ಪ್ರದರ್ಶಿಸುವ ಅತ್ಯಾಧುನಿಕ ಸಂವಿಧಾನ ಸಭಾಂಗಣ, ಔತಣಕ್ಕೆಂದೇ ವಿಶೇಷವಾದ ಹಾಲ್‌, ಗ್ರಂಥಾಲಯ, ವಿಶಾಲವಾದ ಪಾರ್ಕಿಂಗ್‌ ಪ್ರದೇಶ ಇವೆ. ಎರಡೂ ಸದನಗಳ ಎಲ್ಲ ಸಿಬಂದಿಯೂ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್‌ ಟೆಕ್ನಾಲಜಿ (ಎನ್‌ಐಎಫ್ಟಿ) ವಿನ್ಯಾಸಗೊಳಿಸಿರುವ ಹೊಸ ಸಮವಸ್ತ್ರವನ್ನೇ ಧರಿಸಲಿದ್ದಾರೆ. ಸಂಸತ್‌ ಭವನದ ಒಳಾಂಗಣದಲ್ಲಿ ಉತ್ತರಪ್ರದೇಶದ ಭದೋಹಿಯಿಂದ ತರಿಸಲಾದ ಕೈಯ್ಯಲ್ಲೇ ನೇಯ್ದ ನೆಲಹಾಸನ್ನು ಬಳಸಲಾಗಿದೆ.

ಮೂರು ದ್ವಾರಗಳು
ಹೊಸ ಭವನಕ್ಕೆ ಮೂರು ದ್ವಾರಗಳಿದ್ದು, ಅವುಗಳನ್ನು ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಸಲಾಗಿದೆ. ಸಂಸದರು, ವಿಐಪಿಗಳು ಮತ್ತು ಭವನಕ್ಕೆ ಭೇಟಿ ನೀಡುವ ಇತರರಿಗೆಂದು ಪ್ರತ್ಯೇಕ ಪ್ರವೇಶ ವ್ಯವಸ್ಥೆಯಿದೆ.

ತ್ರಿಭುಜಾಕೃತಿ ಕಟ್ಟಡ ನಿರ್ಮಾಣ ಆರಂಭ- 2021, ಜ. 15
ಸಂಸತ್‌ ಭವನಕ್ಕೆ ತಗುಲಿದ ವೆಚ್ಚ- 970 ಕೋಟಿ ರೂ.
ಒಟ್ಟು ವಿಸ್ತೀರ್ಣ- 64,500 ಚದರ ಮೀಟರ್‌
ಎಷ್ಟು ಸಂಸದರಿಗೆ ಸ್ಥಳಾವಕಾಶ?- 1,224

Advertisement
Advertisement

Udayavani is now on Telegram. Click here to join our channel and stay updated with the latest news.

Next