ಚಾಮರಾಜನಗರ: ನಗರದ ಅಗ್ರಹಾರ ಬೀದಿಯಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಚೇರಿಯ ಹಸ್ತಾಂತರ ಕಾರ್ಯಕ್ರಮ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಯಿತು
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ನೂತನ ಕಚೇರಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಮಾತನಾಡಿ, ಚಾಮರಾಜನಗರ ಸಾಹಿತ್ಯ ಸಂಸ್ಕೃತಿಯ ನೆಲೆವೀಡಾಗಿದ್ದು, ಇಲ್ಲಿ ಸಾಹಿತ್ಯ ಪರಿಷತ್ತು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಕಸಾಪಕ್ಕೆ ಕಚೇರಿ ಇಲ್ಲದ್ದು ನೋವಿನ ಸಂಗತಿಯಾಗಿತ್ತು. ಆದ್ದರಿಂದ ರಾಜ್ಯೋತ್ಸವದ ಈ ತಿಂಗಳಲ್ಲೇ ಪರಿಷತ್ತಿಗೆ ಕಚೇರಿಯನ್ನೂ ಒದಗಿಸಬೇಕೆಂದು ನಿರ್ಧರಿಸಿ ಅದನ್ನು ಕಾರ್ಯಗತಗೊಳಿಸಲಾಗಿದೆ. ಎಂದರು.
ಇದೇನೋ ಸಾಧನೆಯಲ್ಲ. ತಾಯಿಯ ಸೇವೆ ಮಾಡುವುದುಕರ್ತವ್ಯವೇ ಹೊರತು ಸಾಧನೆ ಅಲ್ಲ. ನಾನು ನನ್ನ ಕರ್ತವ್ಯ ನಿರ್ವಹಿಸಿದ್ದೇನೆ ಅಷ್ಟೇ. ಕನ್ನಡ ಸಾಹಿತ್ಯ ಪರಿಷತ್ತು ಮತ್ತಷ್ಟು ಚಟುವಟಿಕೆಗಳನ್ನು ನಡೆಸಲು ಇದರಿಂದ ಅವಕಾಶವಾಗಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್ ಮಾತನಾಡಿ, ಚಾಮರಾಜನಗರ ಜಿಲ್ಲಾ ಕಸಾಪ ಮತ್ತು ತಾಲೂಕು ಘಟಕಗಳು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ ಮಾರ್ಚ್ ತಿಂಗಳಿಂದ ಕಚೇರಿ ಇಲ್ಲದೆ ತೊಂದರೆಯಾಗಿತ್ತು. ಜಿಲ್ಲಾಧಿಕಾರಿ ರವಿ ಪರಿಸ್ಥಿತಿಯನ್ನು ಮನಗಂಡು ಕನ್ನಡದ ಕುರಿತ ಅಪಾರ ಕಾಳಜಿಯಿಂದ ಪರಿಷತ್ತಿಗೆ ನೂತನ ಕಚೇರಿಯನ್ನು ವಿಶೇಷ ಆಸಕ್ತಿ ವಹಿಸಿ ಮಾಡಿಕೊಂಡಿದ್ದಾರೆ. ಸ್ವತಃ ಸಾಹಿತಿಯೂ ಆಗಿರುವುದರಿಂದ ಅವರಿಗೆ ಈ ನೆಲದ ಸಂಸ್ಕೃತಿ, ಪರಂಪರೆಯ ಸೂಕ್ಷ್ಮ ಅರಿವಿದೆ. ಆಡಳಿತದ ದಕ್ಷತೆಗೆ ಸಾಹಿತ್ಯದ ಸೌಜನ್ಯ ಬೆರೆತು ಸುವರ್ಣಕ್ಕೆ ಸುಗಂಧ ಬಂದಂತಾಗಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಜನಪದ ಅಕಾಡೆಮಿಯ ಸದಸ್ಯ ಸಿ.ಎಂ ನರಸಿಂಹಮೂರ್ತಿ, ಹಿರಿಯ ಸಾಹಿತಿ ಕೆ.ವೆಂಕಟರಾಜು ವೇದಿಕೆಯಲ್ಲಿದ್ದರು.ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ಕನ್ನಡ ಪುಸ್ತಕ ಪ್ರಾಧಿಕಾರದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಯ ಗೋವಿಂದರಾಜು, ಕಸಾಪ ಕಾರ್ಯದರ್ಶಿಗಳಾದ ಜಿ.ರಾಜಪ್ಪ, ಬಂಗಾರಗಿರಿ ನಾಯಕ,ಕೋಶಾಧ್ಯಕ್ಷಎಸ್ ನಿರಂಜನ್‌ಕುಮಾರ್, ಬಸವಣ್ಣ, ಸಿ.ಎಂ.ಶಿವಕುಮಾರ್, ಬಿ.ಬಸವರಾಜು, ಮಂಜು, ವೆಂಕಟರಮಣಸ್ವಾಮಿ ಪಾಪು, ಮಾದಾಪುರ ರವಿಕುಮಾರ್, ಕಿರಣ್ ರಾಜ್, ಸಿಎಸ್ ಮಂಜುಳಾ, ಶಾ. ಮುರಳಿ, ಚಾರಂ ಶ್ರೀನಿವಾಸಗೌಡ, ಪುರುಷೋತ್ತಮ, ವಿ.ನಾ. ಚಿದಾನಂದ ಸ್ವಾಮಿ, ದುಗ್ಗಟ್ಟಿ ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.