ಮದುವೆಯೊಂದು ನಿಶ್ಚಯವಾದಾಗ ಆ ಮನೆಯಲ್ಲಿ ಸಡಗರ ಮೈದುಂಬಿಕೊಳ್ಳುತ್ತದೆ. ಮದುವೆಯಾಗುವ ಹೆಣ್ಣಿನಲ್ಲಿ ಸಂಭ್ರಮ, ನಾಚಿಕೆ ಮನೆ ಮಾಡಿದ್ದರೂ ಅದರಾಚೆಗೊಂದು ಆತಂಕ, ಸಣ್ಣದೊಂದು ಭಯ, ಅವಿಶ್ವಾಸದ ಛಾಯೆ ಸುಳಿಯುತ್ತಿರುತ್ತದೆ. ಅದನ್ನು ಅವಳು ತೋರಗೊಡದಿದ್ದರೂ, ಕಣ್ಣುಗಳು ಆ ಭಾವವನ್ನು ಹೊಮ್ಮಿಸುತ್ತಿರುತ್ತವೆ. ಅದನ್ನು ಆಕೆ ತನಗೆ ಅತ್ಯಾಪ್ತರೆನ್ನಿಸಿಕೊಂಡವರ ಬಳಿ ಹಂಚಿಕೊಳ್ಳಬಹುದಷ್ಟೇ. ಮದುವೆಯ ದಿನ ಹತ್ತಿರವಾದಂತೆ, ಅವಳಲ್ಲಿನ ಆತಂಕ ಜಾಸ್ತಿಯಾಗುತ್ತಲೇ ಹೋಗುತ್ತದೆ. ಅದರಲ್ಲೂ, ಹಿರಿಯರು ನಿಶ್ಚಯಿಸಿದ ಮದುವೆಗಳಲ್ಲಿ ಇದು ಇನ್ನೂ ಹೆಚ್ಚು. ಒಂದು ರೀತಿ ಅವಳಲ್ಲೇ ಅವಳು ಕಳೆದು ಹೋಗಿರುತ್ತಾಳೆ.
ಎರಡು ಮೂರು ದಶಕಗಳ ಕಾಲ ತಾವು ಹುಟ್ಟಿ ಬೆಳೆದ ಮನೆಯನ್ನು ತೊರೆದು, ಮತ್ತೂಂದು ಮನೆಯಲ್ಲಿ ಬದುಕು ಕಟ್ಟಿಕೊಳ್ಳಲು ಹೋಗುವಾಗ ಪ್ರತಿಯೊಬ್ಬ ಹೆಣ್ಣಿಗೂ ಆತಂಕವಾಗುವುದು ಸಹಜ. ತಾನು ಹುಟ್ಟಿ ಬೆಳೆದ ಪರಿಸರಕ್ಕೂ, ಮದುವೆಯಾಗಿ ಹೋಗುವ ಮತ್ತೂಂದು ಮನೆಯ ಪರಿಸರ, ಅಲ್ಲಿನ ಹೊಸ ಸದಸ್ಯರು, ಅವರ ಬೇಕು- ಬೇಡಗಳು ಖಂಡಿತ ಭಿನ್ನವಾಗಿರುತ್ತವೆ. ಅವಳು ಅಲ್ಲಿ ನೆಲೆಯೂರಿ, ಅವರಲ್ಲಿ ಒಬ್ಬಳಾಗುವ ಪ್ರಕ್ರಿಯೆಗೆ ಸಮಯ ಹಿಡಿಯುತ್ತದೆ. ಆ ನಿಟ್ಟಿನಲ್ಲಿ ಅವಳು ಯಶಸ್ವಿ ಯಾ ಗಲು ಪ್ರಯತ್ನಿಸಬೇಕಾಗುತ್ತದೆ. ವಿಭಕ್ತ ಕುಟುಂಬ ಒಂದರಲ್ಲಿ ಬೆಳೆದ ಹುಡುಗಿ, ಕೂಡು ಕುಟುಂಬವೊಂದಕ್ಕೆ ಮದುವೆಯಾಗಿ ಹೋದಾಗ ಅಲ್ಲಿ ಅವಳು ಅಕ್ಷರಶ: ದಿಗಿಲುಗೊಳ್ಳುತ್ತಾಳೆ. ಮಾನಸಿಕವಾಗಿ ತಾನು ಒಂಟಿಯೆಂಬ ಭಾವನೆಯಲ್ಲಿ ಬೇಯುತ್ತಾಳೆ.
ಬೆಳಗಿನಿಂದ ರಾತ್ರಿಯವರೆಗೂ ಆರದ ಒಲೆ, ಮರೀಚಿಕೆಯಾಗುವ ಏಕಾಂತದ ಬದುಕು, ಎಲ್ಲದಕ್ಕೂ ಕುಟುಂಬದ ಹಿರಿಯರ ಆಣತಿಗಾಗಿ ಕಾಯು ವುದು… ಹೀಗೆ ಅವಳು ಹೆಜ್ಜೆ ಹೆಜ್ಜೆಗೂ ತನ್ನನ್ನು ತಾನು ಸಾಬೀತುಗೊಳಿಸ ಬೇಕಾಗುತ್ತದೆ. ಅದೇ ರೀತಿ, ಅವಿಭಕ್ತ ಕುಟುಂಬವೊಂದರಲ್ಲಿ ಬೆಳೆದ ಹೆಣ್ಣು ಮಗಳೊಬ್ಬಳು ವಿಭಕ್ತ ಕುಟುಂಬವೊಂದಕ್ಕೆ ಬಂದು ಸೇರಿದಾಗ, ಒಂಟಿತನವೆಂಬುದು ಅವಳನ್ನು ಕಿತ್ತು ತಿನ್ನುತ್ತದೆ. ಈ ”ಹೊಂದಿಕೊಳ್ಳುವ ತಾಕಲಾಟಗಳು” ಮದುವೆಗೆ ಮುನ್ನ ಹೆಣ್ಣಿನಲ್ಲಿ ಆತಂಕವನ್ನು ಸೃಷ್ಟಿಸುವುದು ಸಹಜ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ, ಒಳ್ಳೆಯ ಕೆಲಸ, ಗಳಿಕೆ ಎಂಬ ಲೆಕ್ಕಾಚಾರದಲ್ಲಿ ಬ್ಯುಸಿ ಆಗಿ, ಮನೆಯ ಜವಾಬ್ದಾರಿಗಳಿಂದ ದೂರವೇ ಉಳಿದು ಬಿಡುತ್ತಾರೆ, ಹೆತ್ತವರೂ ಅವರ ಮೇಲೆ ಒತ್ತಡ ಹಾಕುವುದಿಲ್ಲ. ಇಂಥ ವಾತಾವರಣದಲ್ಲಿ ಬೆಳೆಯುವ ಹೆಣ್ಣುಮಕ್ಕಳು, ಮದುವೆಯ ನಂತರ ಒಮ್ಮೆಲೇ ಬೀಳುವ ಜವಾಬ್ದಾರಿಯನ್ನು ನೆನೆದು ಕಂಗೆಡುತ್ತಾರೆ, ಅದರಲ್ಲೂ ಹೊರಗೆ ದುಡಿದು ಮನೆಯನ್ನೂ ನಿಭಾಯಿಸುವ ಸಂದರ್ಭ ವಿದ್ದರಂತೂ, ಆತಂಕ ಇನ್ನೂ ಹೆಚ್ಚು. ಜೊತೆಗೆ, ಕೈ ಹಿಡಿಯುವ ಹುಡುಗ ಬದುಕಿನುದ್ದಕ್ಕೂ ತನ್ನನ್ನು ಹೇಗೆ ನಡೆಸಿಕೊಳ್ಳುವನೋ ಎಂಬ ಆತಂಕವೂ ಆಕೆಯನ್ನು ಕಾಡುತ್ತಿರುತ್ತದೆ.
ಸೊಸೆಯಾಗಿ ಬಂದವಳ ಕುರಿತು ಅತ್ತೆ ಮನೆಯವರು ತೋರಿಸುವ ಸ್ನೇಹ, ಪ್ರೀತಿಯು ಆಕೆ ಬೇಗ ಹೊಂದಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಹೊಸತರಲ್ಲಿ ಆಕೆಯಿಂದ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೇ ಆಕೆಗೆ ಸಮಯವನ್ನು ಕೊಟ್ಟಾಗ, ಕುಟುಂಬದಲ್ಲಿ ಸಂಘರ್ಷಗಳು ತಲೆ ಎತ್ತುವುದಿಲ್ಲ
-ಗೌರಿ ಚಂದ್ರಕೇಸರಿ