Advertisement

ಸಗಟು ತರಕಾರಿ ವ್ಯಾಪಾರಕ್ಕೆ ನೂತನ ಮಾರುಕಟ್ಟೆ

11:58 AM Aug 02, 2019 | Team Udayavani |

ಹಾಸನ: ನಗರದ ಎಪಿಎಂಸಿ ಪ್ರಾಂಗಣದಲ್ಲಿ ವಿನೂತನ ಮಾದರಿಯ ಸಗಟು ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ತರಕಾರಿ ಹರಾಜು ಕಟ್ಟೆ ಹಾಗೂ 56 ಮಳಿಗೆಗಳು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿವೆ.

Advertisement

ಎಪಿಎಂಸಿ ಆವರಣದಲ್ಲಿ ಮುಂಜಾನೆ ತರಕಾರಿಯ ಸಗಟು ಮಾರಾಟ ನಡೆಯುತ್ತದೆ. ಗ್ರಾಮಾಂತರ ಪ್ರದೇಶದಿಂದ ರೈತರು ಮುಂಜಾನೆ 4 ಗಂಟೆಗೆ ತಂದಿರಿಸಿಕೊಂಡ ಸೊಪ್ಪು, ತರಕಾರಿಗಳನ್ನು ವರ್ತಕರು ಸಗಟಾಗಿ ಖರೀದಿಸಿ ಆನಂತರ ತಮ್ಮ ಅಂಗಡಿಗಳಿಗೆ ಚಿಲ್ಲರೆ ಮಾರಾಟಕ್ಕೆ ಕೊಂಡೊಯ್ಯುತ್ತಾರೆ. ಆದರೆ ಇದುವರೆಗೂ ಶಿಥಿಲವಾಗಿದ್ದ ಒಂದೆರೆಡು ಪ್ರಾಂಗಣದಲ್ಲಿ ರೈತರು ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಕಿರಿದಾದ ಪ್ರದೇಶವಾಗಿದ್ದರಿಂದ ಬಹುಪಾಲು ರೈತರು ಪ್ರಾಂಗಣದ ಮುಂದೆ ಬಯಲು ಪ್ರದೇಶದಲ್ಲಿಯೇ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಮಳೆಗಾಲದಂತೂ ಕೊಚ್ಚೆಯಲ್ಲಿಯೇ ವ್ಯಾಪಾರ ನಡೆಯುತ್ತಿತ್ತು. ಅಲ್ಲಿಂದ ವರ್ತಕರು ಖರೀದಿಸಿ ಪ್ರಾಂಗಣಕ್ಕೆ ಕೊಂಡೊಯ್ದು ದಾಸ್ತಾನು ಮಾಡಿಕೊಂಡು ಆನಂತರ ಕಟ್ಟಿನಕೆರೆ ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆಗೆ ಚಿಲ್ಲರೆ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದರು.

ಬಾಡಿಗೆಗೆ ಮಳಿಗೆಗಳು: ರೈತರ ಸಂಕಷ್ಟ ಅರಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಆಧುನಿಕ ಮಾದರಿಯ, ಸುಸಜ್ಜಿತ ತರಕಾರಿ ಸಗಟು ಮಾರುಕಟ್ಟೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದೆ. ಬೃಹತ್ತಾದ ಹರಾಜು ಮಾರುಕಟ್ಟೆ, ಅದರ ಸುತ್ತಲೂ 56 ಮಹಿಳೆಗಳನ್ನು ನಿರ್ಮಿಸಿದೆ. ಹರಾಜು ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ತರಕಾರಿಯನ್ನು ತಂದಿಟ್ಟುಕೊಂಡು ಮಾರಾಟ ಮಾಡಬಹುದು. ಹರಾಜು ಕಟ್ಟೆಯೊಳಗೇ ವಾಹನಗಳು ಹೋಗಿ ತರಕಾರಿ ಇಳಿಸಬಹುದು. ರೈತರಿಂದ ಖರೀದಿಸಿದ ನಂತರ ವರ್ತಕರು ಮಳಿಗೆಗಳಲ್ಲಿ ತರಕಾರಿಯನ್ನು ದಾಸ್ತಾನು ಮಾಡಿಕೊಳ್ಳಬಹುದು. ರೈತರು ಹರಾಜು ಕಟ್ಟೆಯಲ್ಲಿ ಉಚಿತವಾಗಿ ಮಾರಾಟ ಮಾಡಬಹುದು. ಮಳಿಗೆಗಳನ್ನು ಮಾತ್ರ ವರ್ತಕರಿಗೆ ಬಾಡಿಗೆಗೆ ಎಪಿಎಂಸಿ ನೀಡಲಿದೆ.

ಹಾಪ್‌ಕಾಮ್ಸ್‌ ಸ್ಥಗಿತ: ಈಗ ವಿನೂತನ ಮಾದರಿಯ ತರಕಾರಿ ಮಾರುಕಟ್ಟೆಯನ್ನು ನಿರ್ಮಿಸಿರುವ 2 ಎಕರೆ ಪ್ರದೇಶವನ್ನು ಎಪಿಎಂಸಿ 1994 ರಲ್ಲಿ ಹಾಪ್‌ಕಾಮ್ಸ್‌ಗೆ ನೀಡಿತ್ತು. ಒಂದೆರೆಡು ವರ್ಷ ತರಕಾರಿ ಖರೀದಿ ತನ್ನ ಮಳಿಗೆಗಳ ಮೂಲಕ ಮಾರಾಟ ಮಾಡುವ ಚಟುವಟಿಕೆ ನಡೆಸಿದ್ದ ಹಾಪ್‌ಕಾಮ್ಸ್‌ ಆನಂತರ ಸ್ಥಗಿತಗೊಳಿಸಿತ್ತು. ಹಾಗಾಗಿ ಖಾರಿ ಬಿದ್ದಿದ್ದ ಜಾಗದಲ್ಲಿ ಈಗ ತರಕಾರಿ ಮಾರುಕಟ್ಟೆ ಕೇಂದ್ರ ಹಾಗೂ 56 ಮಳಿಗೆಗಳನ್ನು ಎಪಿಎಂಸಿ ನಿರ್ಮಿಸಿದೆ.

ಗೊರೂರು ರಸ್ತೆ ಕಡೆಯಿಂದ ಪ್ರವೇಶದ್ವಾರ: ಈಗ ಎಪಿಎಂಸಿಗೆ ಬಿ.ಎಂ.ರಸ್ತೆ ಕಡೆಯಿಂದ ಮಾತ್ರ ನೇರ ಪ್ರವೇಶ ದ್ವಾರವಿದೆ. ಈಗ ಗೊರೂರು ರಸ್ತೆ ಕಡೆಯಿಂದಲೂ ಪ್ರವೇಶದ್ವಾರವನ್ನು ನಿರ್ಮಿಸಲಾಗುತ್ತಿದೆ. ಈ ಪ್ರವೇಶ ದ್ವಾರ ತೆರೆದರೆ ರೈತರು ಮತ್ತು ವರ್ತಕರಿಗೆ ತರಕಾರಿ ಮಾರುಕಟ್ಟೆಗೆ ನೇರ ಮಾರ್ಗ ಸಿಕಿದಂತಾಗುತ್ತದೆ.

ಶೀಘ್ರದಲ್ಲಿಯೇ ಉದ್ಘಾಟನೆ:

ಹೊಸದಾಗಿ ನಿರ್ಮಿಸಿರುವ ತರಕಾರಿ ಮಾರುಕಟ್ಟೆ ಆರಂಭವಾದ ನಂತರ ಈಗ ತರಕಾರಿ ಮಾರಾಟ ವಾಗುವ ಸ್ಥಳದಲ್ಲಿಯೂ ಸುಸಜ್ಜಿತ ತರಕಾರಿ ಮಾರಾಟ ಹರಾಜು ಕಟ್ಟೆ ಮತ್ತು ಮಳಿಗೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ನಿರ್ಮಿಸಿರುವ ಮಾರುಟ್ಟೆಯನ್ನು ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುವುದು ಎಂದು ಕೃಷಿ ಮಾರುಟ್ಟೆ ಉಪ ನಿರ್ದೇಶಕ ಶ್ರೀ ಹರಿ ತಿಳಿಸಿದರು.
ರೈತರ ಶೋಷಣೆ ನಿಲ್ಲಲಿ:

ಹಾಸನದ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಸಜ್ಜಿತ ಸಗಟು ಮಾರುಕಟ್ಟೆ ನಿರ್ಮಾಣವಾಗಿರುವುದು ಸ್ವಾಗತಾರ್ಹ. ಆದರೆ ಎಪಿಎಂಸಿಯಲ್ಲಿ ದಲ್ಲಾಳಿಗಳಿಂದ ರೈತರ ಶೋಷಣೆ ನಡೆಯುವುದು ತಪ್ಪಬೇಕು. ಎಪಿಎಂಸಿಯಲ್ಲಿ ರೈತರಿಂದ ಸುಂಕ ಅಥವಾ ಕಮೀಷನ್‌ ಅಥವಾ ಬಳಕೆದಾರರ ಶುಲ್ಕ ವಸೂಲಿ ಮಾಡುವಂತಿಲ್ಲ. ಆದರೆ ವರ್ತಕರ ಬದಲು ರೈತರಿಂದಲೇ ಈ ಶುಲ್ಕ ವಸೂಲಿ ಮಾಡುತ್ತಿರುವ ದೂರುಗಳಿವೆ. ಇದು ತಪ್ಪಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌ ದೂರಿದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next