Advertisement

ದೃಷ್ಟಿಹೀನರಿಗೆ ನೆರವಾಗಬಲ್ಲ ಸಾಧನ ಆವಿಷ್ಕಾರ

02:50 AM Jul 06, 2018 | Karthik A |

ನಗರ: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ದೃಷ್ಟಿಹೀನರಿಗೆ ನೆರವಾಗಬಲ್ಲ ಕಡಿಮೆ ವೆಚ್ಚದ ಸಾಧನವೊಂದನ್ನು ಆವಿಷ್ಕರಿಸಿದ್ದಾರೆ. ಸ್ವತಂತ್ರವಾಗಿ ಯಾವುದೇ ಕೆಲಸಗಳನ್ನು ಮಾಡುವುದು ಅಸಾಧ್ಯವಾದ ಅವರ ಸಂದಿಗ್ಧ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು, ಸುತ್ತಲಿನ ಪರಿಸರದ ಸ್ಥಿರ ಮತ್ತು ಕ್ರಿಯಾತ್ಮಕ ವಸ್ತುಗಳ ಕುರಿತು ಮಾಹಿತಿಯನ್ನು ನೀಡುವ ಜತೆಯಲ್ಲಿ ಅಂಧರಿಗೆ ದಾರಿದೀಪವಾಗುವ ಸಾಧನವನ್ನು ವಿದ್ಯಾರ್ಥಿಗಳು ಆವಿಷ್ಕರಿಸಿದ್ದಾರೆ.

Advertisement

ಹೀಗಿದೆ ಉಪಕರಣ
ಈ ಉಪಕರಣದಲ್ಲಿ ಎರಡು ವಿಧಾನಗಳಲ್ಲಿ ಸ್ಥಳವನ್ನು ಗುರುತಿಸಲಾಗುತ್ತದೆ. ಮನೆಯ ಸುತ್ತಲಿನ ಪ್ರದೇಶವನ್ನು ಖಾಸಗಿ ಸ್ಥಳವೆಂದು, ಹೊರಗಿನ ಪ್ರದೇಶವನ್ನು ಸಾರ್ವಜನಿಕ ಸ್ಥಳವೆಂದು ಗುರುತಿಸಲಾಗುತ್ತದೆ. ಸಾಧನವು ಅಲ್ಟ್ರಾಸಾನಿಕ್‌ ಸಂವೇದನೆಗಳನ್ನು ಒಳಗೊಂಡಿರುವ ಸರಳ ವಾಕಿಂಗ್‌ ಸ್ಟಿಕ್‌ ಮಾದರಿಯಂತೆ ಇರುತ್ತದೆ. ವ್ಯಕ್ತಿಯ ಸುತ್ತಲಿನ ಪರಿಸರದ ಕುರಿತು ಸೂಕ್ತ ಮಾಹಿತಿಯನ್ನು ನೀಡುತ್ತದೆ.

ವಸ್ತುಗಳ ಇರುವಿಕೆ, ಗುಂಡಿಗಳ ಗುರುತಿಸುವಿಕೆ, ನೀರಿನ ಇರವು ಇತ್ಯಾದಿಗಳನ್ನು ಇದು ಸ್ಪಷ್ಟವಾಗಿ ಗುರುತಿಸಿ ಮಾಹಿತಿ ನೀಡುತ್ತದೆ. ಈ ಸಾಧನಕ್ಕೆ GPS/GSM ಸಾಧನವನ್ನು ಅಳವಡಿಸಲಾಗಿದೆ. ವೈಬ್ರೇಟರ್‌ ಹಾಗೂ ರಿಮೋಟ್‌ ಕಂಟ್ರೋಲನ್ನೂ ಒಳ ಗೊಂಡಿದ್ದು, ವ್ಯಕ್ತಿಯು ಪ್ರಸ್ತುತ ಇರುವ ಪ್ರದೇಶ ಅಥವಾ ಸ್ಥಳದ ಕುರಿತು ಮನೆಯ ವರಿಗೆ ಮಾಹಿತಿ ನೀಡುವುದಕ್ಕಾಗಿ ಜಿಪಿಎಸ್‌ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದು ದೃಷ್ಟಿ ಹೀನರ ನಿರ್ಭೀತ ಚಲನವಲನಕ್ಕೆ ಸಹಕಾರಿಯಾಗುತ್ತದೆ.

ಧ್ವನಿ ಎಚ್ಚರಿಕೆಯೂ ಇದೆ
ಇದರ ಜತೆಗೆ ಪ್ರಸಕ್ತ ಜಾಗದ ಕುರಿತು ಬಳಕೆದಾರನಿಗೆ ಧ್ವನಿಯ ಮೂಲಕ ಘೋಷಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಬಳಕೆದಾರನಿಗೆ ಕಿವಿ ಕೇಳಿಸದೇ ಇರುವ ಸಂದರ್ಭದಲ್ಲಿ ನಿರ್ದಿಷ್ಟ ಕಂಪನಗಳ ಮೂಲಕ ವ್ಯಕ್ತಿಯನ್ನು ಎಚ್ಚರಿಸುತ್ತದೆ. ಸ್ಟಿಕ್‌ ನ ಇರುವಿಕೆಯನ್ನು ತಿಳಿದುಕೊಳ್ಳುವುದಕ್ಕಾಗಿ ರಿಮೋಟ್‌ ಕಂಟ್ರೋಲನ್ನು ಬಳಸಲಾಗುತ್ತದೆ.

ವಿಭಾಗ ಮುಖ್ಯಸ್ಥ ಪ್ರೊ| ಶ್ರೀಕಾಂತ್‌ ರಾವ್‌ ಅವರ ಸಲಹೆ ಹಾಗೂ ಸೂಚನೆಗಳನ್ನು ಬಳಸಿಕೊಂಡು ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ವಿಭಾಗದ ವಿದ್ಯಾರ್ಥಿಗಳಾದ ಅಹನಾ ರೈ, ಅಭಿಷೇಕ್‌ ಕೆ., ಅನಂತೇಶ್‌ ವಿ. ಮತ್ತು ಮಧುಸೂದನ ಎನ್‌. ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕ ಪ್ರೊ| ರಾಮಚಂದ್ರ ಬಳ್ಳಾರಿ ಅವರು ಮಾರ್ಗದರ್ಶನ ನೀಡಿದ್ದಾರೆ.

Advertisement

ಅವಲಂಬನೆ ತಪ್ಪಿಸುತ್ತದೆ
ಕಣ್ಣು ಕಾಣದ ವ್ಯಕ್ತಿ ಅವನ ದೈನಂದಿನ ಚಟುವಟಿಕೆಗಳಿಗೆ ಮತ್ತು ಚಲನವಲನಗಳಿಗೆ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುವುದು ಅನಿವಾರ್ಯ. ಈ ಹೊಸ ವಿನ್ಯಾಸವು ದೃಷ್ಟಿ ಇಲ್ಲದವರ ಬಾಳಿನ ಬೆಳಕಾಗುತ್ತದೆ ಎನ್ನುವ ಆಶಯ ನಮ್ಮದು. 
– ಅಹನಾ ರೈ, E&C ವಿಭಾಗದ ವಿದ್ಯಾರ್ಥಿನಿ

ಅನುದಾನ ಸಿಕ್ಕಿದೆ
ದೃಷ್ಟಿಹೀನರಿಗೆ ನೆರವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಸಾಧನದ ಅಭಿವೃದ್ಧಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಅನುದಾನ ದೊರಕಿದೆ. ರಾಜ್ಯ ಮಟ್ಟದ ಪ್ರದರ್ಶನ ಸ್ಪರ್ಧೆಗೂ ಆಯ್ಕೆಯಾಗಿದೆ. ವಿದ್ಯಾರ್ಥಿಗಳ ಆವಿಷ್ಕಾರ ಗುಣಕ್ಕೆ ಕಾಲೇಜು ಎಲ್ಲಾ ರೀತಿಯ ಸಹಕಾರ ನೀಡುತ್ತದೆ. 
– ಡಾ| ಎಂ.ಎಸ್‌. ಗೋವಿಂದೇ ಗೌಡ, ಪ್ರಾಂಶುಪಾಲರು

Advertisement

Udayavani is now on Telegram. Click here to join our channel and stay updated with the latest news.

Next