Advertisement

ಹಳೆ ಮಾರುಕಟ್ಟೆಗೆ ಹೊಸ ಲುಕ್‌

05:05 AM Jan 04, 2019 | Team Udayavani |

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಹಳ ಹಳೆಯದಾದ ನಾದುರಸ್ತಿಯಲ್ಲಿರುವ ಹಳೆ ಮಾರು ಕಟ್ಟೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಪಾಲಿಕೆ ಮುಂದಾಗಿದೆ. ಈ ಮೂಲಕ ಜಪ್ಪುವಿನ ಮೆಟರ್ನಿಟಿ ಬಳಿ ಇರುವ ಖಾಲಿ ಸ್ಥಳದಲ್ಲಿ ಬಸ್‌ ಟರ್ಮಿನಲ್‌, ಕರಂಗಲ್ಪಾಡಿ ಮಾರುಕಟ್ಟೆ ಹಾಗೂ ಕಾರ್‌ಸ್ಟ್ರೀಟ್‌ ಹೂವಿನ ಮಾರುಕಟ್ಟೆ ಮೇಲ್ದರ್ಜೆಗೇರುವ ನಿರೀಕ್ಷೆ ಇದೆ.

Advertisement

ನಗರದ ಮೂರು ಪ್ರಮುಖ ಭಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡುವ ಸಂಬಂಧ ತಾಂತ್ರಿಕ ಸಾಧ್ಯತಾ ವರದಿ, ಆರ್ಥಿಕ ಸಾಧ್ಯತಾ ವರದಿ, ಸರಕಾರದ ನಿಯಮಾವಳಿ, ಅನುಮತಿ, ಡಿಸೈನ್‌ ಹಾಗೂ ನೀಲನಕ್ಷೆ, ಸರ್ವೆ ಮಾಹಿತಿ ಸೇರಿದಂತೆ ಡಿಪಿಆರ್‌ (ವಿಸ್ತೃತ ಯೋಜನವರದಿ) ಸಿದ್ಧಪಡಿಸಲು ಯೋಜನ ಸಮಾ ಲೋಚಕರ ನೇಮಕಕ್ಕೆ ಪಾಲಿಕೆ ಮುಂದಾಗಿದೆ. ಖಾಸಗಿ ಸಹಭಾಗಿತ್ವ ದಲ್ಲಿಯೇ ಯೋಜನೆ ನಡೆಸುವುದು ಪಾಲಿಕೆಯ ಉದ್ದೇಶ.

ಮನಪಾ ವತಿಯಿಂದ ಪ್ರಸ್ತಾವಿತ ಮೂರು ಮಾರುಕಟ್ಟೆ/ ವಾಣಿಜ್ಯ ಸಂಕೀರ್ಣಗಳ ಸ್ಥಳಗಳನ್ನು ‘ಡಿಬಿಎಫ್‌ ಓಟಿ’ (ಡಿಸೈನ್‌, ಬಿಲ್ಡ್‌, ಫಂಡ್‌, ಆಪರೇಟ್‌ ಆ್ಯಂಡ್‌ ಟ್ರಾನ್ಸ್‌ಫರ್‌) ಯೋಜನೆಯಡಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವುದರಿಂದ ಈ ಕಾಮಗಾರಿಗಳಿಗೆ ಪಾಲಿಕೆ ವತಿಯಿಂದ ಯಾವುದೇ ಪಾವತಿ, ಪರಿಹಾರ ನೀಡಲಾ ಗುವುದಿಲ್ಲ. ಬದಲಾಗಿ ಈ ಯೋಜನೆಗಳ ಎಲ್ಲ ವೆಚ್ಚವನ್ನು ಆಯ್ಕೆಗೊಂಡ ಬಿಡ್ಡುದಾರರೇ ಭರಿಸಬೇಕಾಗಿದೆ.

ಪರ್ಯಾಯ ವ್ಯವಸ್ಥೆಯೇ ಸವಾಲು
ಕರಂಗಲ್ಪಾಡಿ, ಕಾರ್‌ಸ್ಟ್ರೀಟ್‌ ಮಾರುಕಟ್ಟೆ ಮೇಲ್ದರ್ಜೆಗೇರುವ ಕಾಲದಲ್ಲಿ ಇಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳಿಗೆ ಪರ್ಯಾಯವಾದ ವ್ಯವಸ್ಥೆಗಳನ್ನು ಕಲ್ಪಿಸುವುದು ಸವಾಲು. ಎರಡು ಮಾರುಕಟ್ಟೆ ಕೇಂದ್ರದಲ್ಲಿ ನಿತ್ಯ ವ್ಯಾಪಾರಿಗಳು ಗ್ರಾಹಕರು ಇರುವ ಕಾರಣದಿಂದ ಇಲ್ಲಿ ನೂತನ ಮಾರುಕಟ್ಟೆ ನಿರ್ಮಾಣ ಸವಾಲಿನ ಕಾರ್ಯ. 

ಎರಡೂ ಕೂಡ ನಗರದ ಅತ್ಯಂತ ಹಳೆಯ, ನಾದುರಸ್ತಿಯಲ್ಲಿರುವ ಮಾರುಕಟ್ಟೆಯಾದ ಕಾರಣದಿಂದ ಅಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಿಸುವ ಬಗ್ಗೆ ಪಾಲಿಕೆ ಚಿಂತಿಸಿದೆ. ಜಪ್ಪು ಮಾರುಕಟ್ಟೆ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ಪಾಲಿಕೆಯ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ಸಹಿತ ಬಸ್‌ ಟರ್ಮಿನಲ್‌ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಮಂಗಳಾದೇವಿ ವ್ಯಾಪ್ತಿಯಲ್ಲಿ ಸುಸಜ್ಜಿತ ಬಸ್‌ ತಂಗುದಾಣ ನಿರ್ಮಾಣ ಮಾಡುವುದು ಪಾಲಿಕೆ ಉದ್ದೇಶ.

Advertisement

ಎಲ್ಲ ಮಾರುಕಟ್ಟೆ ಅಭಿವೃದ್ಧಿ
ಮನಪಾ ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ ‘ಸುದಿನ’ ಜತೆಗೆ ಮಾತನಾಡಿ, ನಗರದಲ್ಲಿರುವ ಹಲವು ಮಾರು ಕಟ್ಟೆಗಳನ್ನು ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದ ಸೆಂಟ್ರಲ್‌ ಮಾರುಕಟ್ಟೆ ಸ್ಮಾರ್ಟ್‌ ರೂಪದಲ್ಲಿ ಬದಲಾವಣೆಯಾಗಲಿದೆ. ಉರ್ವ ದಲ್ಲಿ ನಿರ್ಮಿಸಲಾದ ಮಾರುಕಟ್ಟೆ ಈಗಾಗಲೇ ಕಾರ್ಯಾರಂಭಗೊಂಡಿದೆ. ಅಳಕೆಯಲ್ಲಿ ಮಾರುಕಟ್ಟೆ ಕಾಮಗಾರಿ ಪ್ರಗತಿ ಯಲ್ಲಿದೆ.

ಹೊಸ ಮಾರುಕಟ್ಟೆ ನಿರ್ಮಾಣ
ಮಲ್ಲಿಕಟ್ಟೆಯಲ್ಲಿ ಮಾರು ಕಟ್ಟೆ ನಿರ್ಮಾಣಕ್ಕಾಗಿ ಸ್ಥಳೀಯ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ಕಂಕನಾಡಿ ಮಾರುಕಟ್ಟೆ ನಿರ್ಮಾಣಕ್ಕೆ ಸರಕಾರದಿಂದ ಅನುಮೋದನೆ ದೊರೆತಿದ್ದು, ಪ್ರಕ್ರಿಯೆ ಆರಂಭಗೊಂಡಿದೆ. ಸುರತ್ಕಲ್‌ ಮಾರುಕಟ್ಟೆ ಕಾಮಗಾರಿ ನಡೆಯುತ್ತಿದ್ದು, ಉರ್ವಸ್ಟೋರ್‌ನಲ್ಲಿ ಹೊಸ ಮಾರುಕಟ್ಟೆ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಪರಿಕಲ್ಪನ ಯೋಜನೆಗಳು
„ ಜಪ್ಪು ಮಾರುಕಟ್ಟೆ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವ ಪಾಲಿಕೆಯ ಜಾಗದಲ್ಲಿ ಬಸ್‌ ಟರ್ಮಿನಲ್‌ ಸಹಿತ ವಾಣಿಜ್ಯ ಮತ್ತು ಆರೋಗ್ಯ ಕೇಂದ್ರಗಳ ಸಂಕೀರ್ಣ
„ ಕರಂಗಲ್ಪಾಡಿ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ ಅಭಿವೃದ್ಧಿ
„ ಕಾರ್‌ಸ್ಟ್ರೀಟ್‌ನಲ್ಲಿನ ಹೂವಿನ ಮಾರುಕಟ್ಟೆ ಸಂಕೀರ್ಣ ಅಭಿವೃದ್ಧಿ.

ಡಿಪಿಆರ್‌ ರಚನೆಗೆ ಸಿದ್ಧತೆ
ಪಾಲಿಕೆ ವ್ಯಾಪ್ತಿಯ ಮೂರು ಪ್ರಮುಖ ಪ್ರದೇಶಗಳಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣಗಳನ್ನು ಡಿಬಿಎಫ್‌ ಒಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಡಿಪಿಆರ್‌ ಸಿದ್ಧಗೊಳಿಸುವ ನೆಲೆಯಲ್ಲಿ ಯೋಜನ ಸಲಹೆಗಾರರ ನೇಮಕಾತಿ ನಡೆಯುತ್ತಿದೆ.
 - ಮಹಮ್ಮದ್‌ ನಝೀರ್‌,
    ಮನಪಾ ಆಯುಕ್ತರು

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.