Advertisement

ಬಣ್ಣ-ಬಣ್ಣದ ಕಲಾಕೃತಿಗಳಿಂದ ಕಂಗೊಳಿಸುತ್ತಿರುವ ಶಾಲೆಗಳು

02:18 PM May 08, 2023 | Team Udayavani |

ಕುಂದಾಪುರ: ಚುನಾವಣೆಯಿಂದಾಗಿ ಹಳ್ಳಿಗಾಡಿನ ಶಾಲೆಗಳಿಗೆ ಹೊಸರೂಪ ಸಿಗುವಂತಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಒಟ್ಟು 246 ಮತಗಟ್ಟೆಗಳ ಪೈಕಿ 25 ಮತಗಟ್ಟೆಗಳಲ್ಲಿ ಕಲಾಕಾರರು ಬಣ್ಣ- ಬಣ್ಣದ ಕಲಾಕೃತಿಗಳನ್ನು ಬಿಡಿಸುವ ಮೂಲಕ ಗ್ರಾಮೀಣ ಭಾಗದ ಶಾಲೆಗಳೀಗ ನವವಧುವಿನಂತೆ ಕಂಗೊಳಿಸುತ್ತಿದೆ.

Advertisement

ಬೈಂದೂರು ವಲಯದ ಚಿತ್ರಕಲಾ ಶಿಕ್ಷಕರಾದ ಆಲೂರು ಪ್ರೌಢಶಾಲೆಯ ರಾಜಶೇಖರ್‌ ತಾಳಿಕೋಟೆ ಅವರ ನೇತೃತ್ವದಲ್ಲಿ ನೆಂಪು ಪಬ್ಲಿಕ್‌ ಶಾಲೆಯ ಪ್ರತಿಭಾ, ಬೇಲೂರು ಪ್ರೌಢಶಾಲೆಯ ಮಲ್ಲಪ್ಪ ಕುಂಬಾರ, ಬೈಂದೂರು ಇಒ ಭಾರತಿ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅನಿತಾ, ವಿದ್ಯಾರ್ಥಿಗಳು ಮತ್ತಿತರರ ಸಹಕಾರದೊಂದಿಗೆ ವಿವಿಧ ಶಾಲೆಗಳ ಗೋಡೆಗಳ ಮೇಲೆ ಚಿತ್ತಾರ, ಕಲಾಕೃತಿಗಳನ್ನು ಬಿಡಿಸುವ ಕಾರ್ಯವನ್ನು ಜಿಲ್ಲಾ ಸ್ವೀಪ್‌ ಸಮಿತಿ, ಬೈಂದೂರು ತಾಲೂಕು ಆಡಳಿತವು ಕೈಗೊಂಡಿದೆ.

ಯಾವೆಲ್ಲ ಮತಗಟ್ಟೆಗಳು?
ಬೈಂದೂರು ಕ್ಷೇತ್ರದ ನೆಂಪು ಪಬ್ಲಿಕ್‌ ಶಾಲೆ-1 ಮತಗಟ್ಟೆ, ಉಪ್ಪುಂದ ಶಾಲೆ – 5 ಮತಗಟ್ಟೆ, ಕೆರ್ಗಾಲು ಶಾಲೆ – 4 ಮತಗಟ್ಟೆ, ಆಲೂರು ಶಾಲೆ – 1 ಮತಗಟ್ಟೆ, ನಾವುಂದ ಶಾಲೆ – 4 ಮತಗಟ್ಟೆ, ಬಾಡ ಶಾಲೆ – 4 ಮತಗಟ್ಟೆ, ಶಿರೂರು ಶಾಲೆ – 3 ಮತಗಟ್ಟೆ, ಕೊಲ್ಲೂರು ಶಾಲೆ – 2 ಹಾಗೂ ಕನ್ಯಾನ ಶಾಲೆಯಲ್ಲಿ 1 ಮತಗಟ್ಟೆಗಳಲ್ಲಿ ಈ ರೀತಿಯ ಕಲಾಕೃತಿಗಳ ಚಿತ್ತಾರ ಬಿಡಿಸಲಾಗಿದೆ.

ಏನೆಲ್ಲ ಕಲಾಕೃತಿ?
ಶಾಲೆಗಳ ಗೋಡೆಗಳ ಮೇಲೆ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಕಂಬಳ, ಯಕ್ಷಗಾನ, ನೇಮ, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಲಾಕೃತಿಗಳನ್ನು ಬಿಡಿಸಲಾಗಿದೆ. ಅದರಲ್ಲೂ ಆಯಾಯ ಪ್ರದೇಶಗಳ ವೈವಿಧ್ಯಮಯ ಹಾಗೂ ಸಾಂಸ್ಕೃತಿಕ ಪರಂಪರೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ ಎನ್ನುವುದಾಗಿ ಇದರ ನೇತೃತ್ವವನ್ನು ವಹಿಸಿರುವ ಆಲೂರು ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ರಾಜಶೇಖರ್‌ ತಾಳಿಕೋಟೆ “ಉದಯವಾಣಿ’ಗೆ ತಿಳಿಸಿದ್ದಾರೆ.

8 ವಿಶೇಷ ಮತಗಟ್ಟೆಗಳು
ಬೈಂದೂರಲ್ಲಿ ಮಹಿಳಾ ಮತದಾರರು ಹೆಚ್ಚಿರುವ ಶಿರೂರು, ಶಿರೂರು ದಕ್ಷಿಣ ಭಾಗ, ಶಿರೂರು ದಾಸನಾಡಿ, ನಾವುಂದ, ನಾವುಂದ ಉತ್ತರ ಭಾಗಗಳ ಮತಗಟ್ಟೆಗಳು 5 ಸಖೀ ಮತಗಟ್ಟೆಯಾಗಿದ್ದರೆ, ಉಪ್ಪುಂದಲ್ಲಿ 1 ವಿಶೇಷ ಚೇತನರ ಮತಗಟ್ಟೆ, ಶಿರೂರು ಮೇಲ್ಪಂಕ್ತಿಯ ಉತ್ತರ ಭಾಗ ಯುವ ಮತಗಟ್ಟೆ ಹಾಗೂ ದಕ್ಷಿಣ ಭಾಗ ಕಡೆ ಥೀಮ್‌ ಬೇಸ್ಡ್ ಮತಗಟ್ಟೆಗಳು ಸೇರಿದಂತೆ ಒಟ್ಟು 8 ವಿಶೇಷ ಮತಗಟ್ಟೆಗಳಾಗಿ ಗುರುತಿಸಲಾಗಿದೆ.

Advertisement

ಮತದಾರರ ಸೆಳೆಯುವ ಪ್ರಯತ್ನ
ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ವಿಶೇಷವಾಗಿ ಜಿ.ಪಂ. ಸಿಇಒ ಪ್ರಸನ್ನ ಅವರ ಮುತುವರ್ಜಿಯಂತೆ ಕಂಬಳ, ಯಕ್ಷಗಾನ ಚಿತ್ರಗಳು, ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರಗಳನ್ನು ಬಿಡಿಸಲಾಗಿದೆ. ಇದರ ಮುಖ್ಯ ಉದ್ದೇಶ ಮತದಾರರು ಮತದಾನದಲ್ಲಿ ಸಕ್ರೀಯವಾಗಿ ಭಾಗವಹಿಸುವ ಜತೆಗೆ ಮತಗಟ್ಟೆಗಳಿಗೆ ಸೆಳೆಯುವುದಾಗಿದೆ. ಇದರೊಂದಿಗೆ ನಮ್ಮ ಜಾನಪದ ಕಲೆಗಳ ಬಗ್ಗೆ ಜಾಗೃತಿಮೂಡಿಸುವ ಉದ್ದೇಶವೂ ಇದೆ.
-ಭಾರತಿ,ಬೈಂದೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ

-ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next