Advertisement

ಹೊಸ ಜೀವನಕ್ಕೆ ಕಳ್ಳತನ!

11:20 AM Jul 23, 2017 | Team Udayavani |

ಬೆಂಗಳೂರು: “ಆ್ಯಪ್‌’ ಮೂಲಕ ಹೊಸ ಜೀವನ ಕಟ್ಟಿಕೊಳ್ಳುವ ಧಾವಂತದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಅದಕ್ಕಾಗಿ ಸರಣಿ ಸರಗಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾರೆ. ಎಚ್‌ಬಿಆರ್‌ ಲೇಔಟ್‌ ನಿವಾಸಿ ಜಬೀವುದ್ದೀನ್‌ ಅಲಿಯಾಸ್‌ ತಬ್ರೇಜ್‌(30) ಮತ್ತು ಅರುಣ್‌ಕುಮಾರ್‌ (36) ಬಂಧಿತರು.

Advertisement

ಶಾಲೆಗಳ ಮಾಹಿತಿ ನೀಡುವ “ಸ್ಕೂಲ್‌’ ಆ್ಯಪ್‌ವೊಂದನ್ನು ಸಿದ್ಧಪಡಿಸಿ ಅದರ ಮೂಲಕ ಹೊಸ ಜೀವನ ಕಂಡುಕೊಳ್ಳುವ ಇರಾದೆಯಲ್ಲಿದ್ದ ಆರೋಪಿಗಳು, ಅದನ್ನು ಅಭಿವೃದ್ಧಿಪಡಿಸುವ ಹಣಕ್ಕಾಗಿ ಕುಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾರೆ.  9ನೇ ತರಗತಿವರೆಗೆ ಓದಿಕೊಂಡಿರುವ  ಅರುಣ್‌ಕುಮಾರ್‌ ತನ್ನ ಚಿಕ್ಕಮ್ಮನ ಮಗಳನ್ನೆ ಕೊಲೆಗೈದು ಜೈಲು ಸೇರಿದ್ದ.

ಇನ್ನು 2014, 2015 ಹಾಗೂ 2016ರಲ್ಲಿ ನಗರದ ವಿವಿಧ ಠಾಣೆಗಳಲ್ಲಿ ನಡೆಯುತ್ತಿದ್ದ ಒಂಟಿ ಮಹಿಳೆಯರ ಚಿನ್ನದ ಸರ ಕಳವು ,ದರೋಡೆ, ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಿ.ಕಾಂ ಅನುತೀರ್ಣಗೊಂಡಿರುವ ತಬ್ರೇಜ್‌ ಕುಕೃತ್ಯಗಳಲ್ಲಿ ಭಾಗಿಯಾಗಿ ಹಲವು ಬಾರಿ ಜೈಲು ಸೇರಿ ಹೊರಬಂದಿದ್ದ.

ವಿಪರ್ಯಾಸವೆಂದರೆ ಪ್ರತಿ ಬಾರಿ ತಬ್ರೇಜ್‌ ಜೈಲಿಗೆ ಹೋದಾಗಲು ಅರುಣ್‌ ಕೊಠಡಿಯಲ್ಲೇ ಇರುತ್ತಿದ್ದ. ಆಗ ಇಬ್ಬರು ತಮ್ಮ ಕೃತ್ಯಗಳ ಬಗ್ಗೆ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಇದೇ ವೇಳೆ ಇಬ್ಬರು ಅಪರಾಧ ಜಗತ್ತಿನ ಸಹವಾಸ ಬಿಟ್ಟು ಹೊಸ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದರು ಎಂದು ಅವರು ತಿಳಿಸಿದರು.

ಸರ ಕಳವು ಆರಂಭ: ಅರುಣ್‌ಕುಮಾರ್‌ ಬಿಡುಗಡೆಗೂ ಮೊದಲು ಪತ್ರಿಕೆಯೊಂದರಲ್ಲಿ ಆನ್‌ಲೈನ್‌ ಬಸ್‌ ಬುಕ್ಕಿಂಗ್‌ ಆ್ಯಪ್‌ವೊಂದರ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡಿದ್ದ. ಅದೇ ಮಾದರಿಯ “ಸ್ಕೂಲ್‌’ ಆ್ಯಪ್‌ ಅನ್ನು ಸಿದ್ಧಪಡಿಸಲು ಚಿಂತಿಸಿದ್ದ. ಇದೇ ಮಾರ್ಚ್‌ನಲ್ಲಿ ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ಅದಕ್ಕಾಗಿ ಒಬ್ಬ ಸಾಫ್ಟ್ವೇರ್‌ ಎಂಜಿನಿಯರ್‌ವೊಂಬರನ್ನು ಸಹ ಸಂಪರ್ಕಿಸಿದ್ದ.

Advertisement

ಆದರೆ, ಆ್ಯಪ್‌ ಅಭಿವೃದ್ಧಿ ಪಡಿಸಲು 2 ಲಕ್ಷ ರೂ. ಹೊಂದಿಸಬೇಕಿತ್ತು. ಅದಕ್ಕೆ ಸಂಬಂಧಿಗಳಿಂದಲೂ ನೆರವು ಸಿಕ್ಕಿರಲಿಲ್ಲ. ಆಗ ಕೂಡಲೇ ತಬ್ರೇಜ್‌ನನ್ನು ಸಂಪರ್ಕಿಸಿದ್ದಾನೆ. ತಬ್ರೇಜ್‌ ಅಷ್ಟೊಂದು ಹಣ ಏಕಾಏಕಿ ಹೊಂದಿಸಲು ಸಾಧ್ಯವಿಲ್ಲ. ಆದರೆ, ನಾಲ್ಕೈದು ಚಿನ್ನದ ಸರ ಕದ್ದರೆ ಹಣ ಸಿಗುತ್ತದೆ ಎಂದಿದ್ದ. ಅದರಂತೆ ಆರೋಪಿಗಳು ಮೊದಲಿಗೆ ನಾಲ್ಕೈದು ಚಿನ್ನದ ಸರಗಳನ್ನು ಕಳವು ಮಾಡಿದ್ದಾರೆ.

ಅಗತ್ಯಕ್ಕೆ ಬೇಕಾದ ಹಣ ಸಿಕ್ಕರೂ ಆರೋಪಿಗಳು ಕೃತ್ಯ ನಿಲ್ಲಿಸದೆ ಮತ್ತೆ ಮುಂದುವರಿಸಿದ್ದರು. ಹೀಗೆ ಮಾರ್ಚ್‌ನಿಂದ ಇದುವರೆಗೂ ಸುಮಾರು 30ಕ್ಕೂ ಅಧಿಕ ಸರಗಳನ್ನು ಕಳವು ಮಾಡಿದ್ದಾರೆ. ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸಿದರೇ ಹೊರತು ಆ್ಯಪ್‌ ಮಾತ್ರ ಸಿದ್ಧಪಡಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕದ್ದ ಬೈಕ್‌ನಲ್ಲಿ ಕೃತ್ಯ: ಮಹಿಳೆಯೊಬ್ಬರು ಮಲ್ಲೇಶ್ವರಂನ ಮಾಲ್‌ವೊಂದರ ಮುಂದೆ ಕೀ ಸಮೇತ ಹೋಂಡಾ ಡಿಯೋ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಒಳಗೆ ಹೋಗಿದ್ದರು. ಇದೇ ವೇಳೆ ಅರುಣ್‌ ವಾಹನವನ್ನು ಕಳ್ಳತನ ಮಾಡಿದ್ದ. ಬಳಿಕ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿದ್ದ ಅದೇ ಬಣ್ಣದ ಡಿಯೋ ವಾಹನವೊಂದರ ಕೆಎ-25-ಇಟಿ 0018 ನಂಬರ್‌ ಅನ್ನು ಕದ್ದ ವಾಹನಕ್ಕೆ ಅಂಟಿಸಿಕೊಂಡಿದ್ದ. ಬಳಿಕ ತಬ್ರೇಜ್‌ ಮೂಲಕ ಅಲ್ಲಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಕೊಟ್ಟ ಸುಳಿವು: ದಕ್ಷಿಣ ವಿಭಾಗದ ಸರಗಳ್ಳತನ ಪ್ರಕರಣದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತಬ್ರೇಜ್‌ ಮತ್ತು ಅರುಣ್‌ ಕದ್ದ ಡಿಯೋ ವಾಹನದಲ್ಲಿ ಆರ್‌.ಆರ್‌.ನಗರ, ಜಯನಗರ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಎಸಿಪಿ ನೇತೃತ್ವದ ವಿಶೇಷ ಅಪರಾಧ ತಂಡ ತಬ್ರೇಜ್‌ನನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

ಈ ಮೂಲಕ ದಕ್ಷಿಣ ವಿಭಾಗ 12 ಪ್ರಕರಣಗಳು, ಪಶ್ಚಿಮ ವಿಭಾಗದ 9, ಉತ್ತರ ವಿಭಾಗ 6, ಆಗ್ನೇಯ ಹಾಗೂ ಈಶಾನ್ಯ. ವಿಭಾಗದ ತಲಾ ಒಂದು ಸೇರಿ ಒಟ್ಟು 29 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ, ಡಿಸಿಪಿ ಡಾ ಶರಣಪ್ಪ ಹಾಗೂ ಎಸಿಪಿ ಶ್ರೀನಿವಾಸ್‌ ಮತ್ತು ವಿಶೇಷ ತಂಡ, ಜಯನಗರ ಪಿಐ ಉಮಾಶಂಕರ್‌ ಉಪಸ್ಥಿತರಿದ್ದರು.

ವಿಶೇಷ ತಂಡಕ್ಕೆ ಬಹುಮಾನ: ಇದೇ ವೇಳೆ ಪ್ರಕರಣವನ್ನು ಬೇಧಿಸಿದ ವಿಶೇಷ ತಂಡಕ್ಕೆ ಪೊಲೀಸ್‌ ಆಯುಕ್ತರು 50 ಸಾವಿರ ನಗದು ಬಹುಮಾನ ವಿತರಿಸಿದರು.ಹಾಗೆಯೇ ವೃದ್ಧೆ  ಶಶಿಕಲಾ ಅವರ ಸರ ಅಪಹರಣ ಪ್ರಕರಣವನ್ನು ಶೀಘ್ರವೇ ಪತ್ತೆ ಹಚ್ಚಿ, ಘಟನೆ ನಡೆದ ದಿನ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ ಸಬ್‌ಇನ್‌ಸ್ಪೆಕ್ಟರ್‌ ಈಶ್ವರಿ ಅವರಿಗೆ 5 ಸಾವಿರ ನಗದು ಬಹುಮಾನ ವಿತರಿಸಿದರು.

ಏನಿದು ಸ್ಕೂಲ್‌ ಆ್ಯಪ್‌?: ಸ್ಕೂಲ್‌ ಆ್ಯಪ್‌ ಮೂಲಕ ನಗರದ ಎಲ್ಲ ಖಾಸಗಿ ಮತ್ತು ಸರ್ಕಾರಿ ಶಾಲೆ, ಕಾಲೇಜುಗಳ ಸಮಗ್ರ ಮಾಹಿತಿಯನ್ನು ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಲು ಮುಂದಾಗಿದ್ದರು. ಯಾವ ಶಾಲೆಗೆ ಎಷ್ಟು ಶುಲ್ಕ, ಡೊನೇಷನ್‌ ಎಷ್ಟು, ವಿಳಾಸ, ಸಮವಸ್ತ್ರ ಸೇರಿದಂತೆ ಎಲ್ಲ ಮಾಹಿತಿಯನ್ನೊಳಗೊಂಡ ಆ್ಯಪ್‌ ಸಿದ್ಧಪಡಿಸಲು ತೀರ್ಮಾನಿಸಿದ್ದರು. ಆ್ಯಪ್‌ ಅಭಿವೃದ್ಧಿ ಪಡಿಸಿದ ಬಳಿಕ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಬಗ್ಗೆ ಅರಿವು ಮೂಡಿಸಲು ಸಹ ಚಿಂತಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next