Advertisement

ನವ ಶಾಸಕರ ಹ್ಯಾಟ್ರಿಕ್‌ ನಗೆ

11:14 AM May 16, 2018 | |

ನಗರದ 26 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಳೆದ ಬಾರಿ ಗೆಲುವು ಸಾಧಿಸಿದ್ದ 20 ಶಾಸಕರು ಪುನರಾಯ್ಕೆಯಾಗಿದ್ದಾರೆ. ಇದರೊಂದಿಗೆ 9 ಶಾಸಕರು ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದ್ದು, ಬಿಜೆಪಿಯ 6, ಕಾಂಗ್ರೆಸ್‌ನ 3 ಶಾಸಕರು ಸತತ ಮೂರು ಬಾರಿ ಗೆದ್ದು ಸಾಧನೆ ಮೆರೆದಿದ್ದಾರೆ. ಇನ್ನೊಂದೆಡೆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಒಂದು ಕ್ಷೇತ್ರದ ಲಾಭವಾದರೆ, ಜೆಡಿಎಸ್‌ ಹಾಗೂ ಬಿಜೆಪಿ ತಲಾ ಒಂದೊಂದು ಕ್ಷೇತ್ರಗಳನ್ನು ಕಳೆದುಕೊಂಡಿವೆ. ಇದೇ ವೇಳೆ ಕೆಲ ಹಾಲಿ ಶಾಸಕರು ಪ್ರಯಾಸದ ಗೆಲುವು ಸಾಧಿಸಿದ್ದಾರೆ.

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಡಳಿತಾರೂಢ ಕಾಂಗ್ರೆಸ್‌ ತನ್ನ ಸಂಖ್ಯಾಬಲ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ ಹಾಗೂ ಜೆಡಿಎಸ್‌ ತಲಾ ಒಂದೊಂದು ಸ್ಥಾನ ಕಳೆದುಕೊಂಡು ಹಿನ್ನಡೆ ಅನುಭವಿಸಿವೆ. ಬೆಂಗಳೂರಿನಲ್ಲಿ 12 ಶಾಸಕರನ್ನು ಹೊಂದಿದ್ದ ಬಿಜೆಪಿಯ ಸಂಖ್ಯಾಬಲ 11ಕ್ಕೆ ಕುಸಿದಿದೆ.

ಕಳೆದ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಜೆಡಿಎಸ್‌ ಈ ಬಾರಿ ಎರಡು ಕ್ಷೇತ್ರದಲ್ಲಷ್ಟೇ ಗೆಲುವು ಸಾಧಿಸಿದೆ. ಕಾಂಗ್ರೆಸ್‌ನಲ್ಲಿ 11 ಮಂದಿ ಪುನಃ ಆಯ್ಕೆಯಾಗಿದ್ದರೆ ಬಿಜೆಪಿಯಲ್ಲೂ 9 ಶಾಸಕರು ಮತ್ತೆ ಆಯ್ಕೆಯಾಗಿದ್ದಾರೆ. ಜೆಡಿಎಸ್‌ನಲ್ಲೂ ಶಾಸಕ ಕೆ.ಗೋಪಾಲಯ್ಯ ಜಯ ಗಳಿಸಿದ್ದಾರೆ. ಒಟ್ಟಾರೆ 26 ಕ್ಷೇತ್ರಗಳ ಪೈಕಿ 20 ಮಂದಿ ಪುನರಾಯ್ಕೆಯಾಗಿದ್ದಾರೆ. ಜಯನಗರ, ರಾಜರಾಜೇಶ್ವರಿನಗರ ಕ್ಷೇತ್ರದ ಮತದಾನ ಬಾಕಿ ಇದೆ.

ಹ್ಯಾಟ್ರಿಕ್‌ ಶಾಸಕರು
ಬಿಜೆಪಿಯ ಎಲ್‌.ಎ.ರವಿಸುಬ್ರಹ್ಮಣ್ಯ, ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಎಸ್‌.ಆರ್‌.ವಿಶ್ವನಾಥ್‌, ಎಂ.ಕೃಷ್ಣಪ್ಪ, ಎಸ್‌.ರಘು, ಅರವಿಂದ ಲಿಂಬಾವಳಿ ಅವರು ಸತತ ಮೂರು ಬಾರಿ ಶಾಸಕರಾಗುವ ಮೂಲಕ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಿಂದ ಎನ್‌.ಎ.ಹ್ಯಾರಿಸ್‌, ಎಂ.ಕೃಷ್ಣಪ್ಪ, ಕೃಷ್ಣಬೈರೇಗೌಡ ಹ್ಯಾಟ್ರಿಕ್‌ ಜಯಭೇರಿ ಬಾರಿಸಿದ್ದಾರೆ. ಪ್ರಸ್ತುತ ಯಾವ ಕ್ಷೇತ್ರದಲ್ಲಿ ಏನಾಗಿದೆ ಎಂಬ ಕಿರು ಸಮೀಕ್ಷೆ ಇಲ್ಲಿದೆ.

ಯಲಹಂಕ: ಬಿಜೆಪಿ ಭದ್ರಕೋಟೆ ಎನಿಸಿರುವ ಯಲಹಂಕದಲ್ಲಿ ಎರಡು ಬಾರಿ ಶಾಸಕರಾಗಿದ್ದ ಎಸ್‌.ಆರ್‌.ವಿಶ್ವನಾಥ್‌ ಅವರಿಗೆ ಈ ಬಾರಿಯೂ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ತೀವ್ರ ಪೈಪೋಟಿ ನಡುವೆಯೂ ಕ್ಷೇತ್ರದಲ್ಲಿ ಪಕ್ಷದ ಹಿಡಿತವನ್ನು ಬಿಗಿಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕೆ.ಆರ್‌.ಪುರ: ಕಾಂಗ್ರೆಸ್‌ ಭದ್ರಕೋಟೆ ಎನಿಸಿದ್ದ ಕ್ಷೇತ್ರದಲ್ಲಿ ಬಿಜೆಪಿ ಒಮ್ಮೆ ಜಯ ಗಳಿಸಿದ್ದರೂ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬೈರತಿ ಬಸವರಾಜು ತಮ್ಮ ಗೆಲುವಿನ ಓಟ ಮುಂದುವರಿಸಿದ್ದಾರೆ. ಅಹಿಂದ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಬಿಜೆಪಿಯ ಎನ್‌.ಎಸ್‌.ನಂದೀಶ್‌ರೆಡ್ಡಿ ಅವರನ್ನು ಎರಡನೇ ಬಾರಿ ಸೋಲಿಸಿದ್ದಾರೆ.

ಬ್ಯಾಟರಾಯನಪುರ: ಬ್ಯಾಟರಾಯನಪುರ ಕ್ಷೇತ್ರದಲ್ಲಿ ರಾಜಕೀಯ ಮುಂದುವರಿಸಿರುವ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಇದೇ ಕ್ಷೇತ್ರದಲ್ಲಿ ಸತತ ಮೂರನೇ ಜಯ ದಾಖಲಿಸಿದ್ದಾರೆ. ಕಳೆದ ಬಾರಿಯೂ ತಮ್ಮ ವಿರುದ್ಧ ಸ್ಪರ್ಧಿಸಿದ್ದ ಎ.ರವಿ ಅವರನ್ನು ಈ ಬಾರಿಯೂ ಸೋಲಿಸುವಲ್ಲಿ ಯಶ ಕಂಡಿದ್ದಾರೆ.

ಯಶವಂತಪುರ: ಕ್ಷೇತ್ರದಲ್ಲಿ ಕಾಂಗ್ರಸ್‌ನ ಎಸ್‌.ಟಿ.ಸೋಮಶೇಖರ್‌ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾದರೂ ಪ್ರಾಯಾಸದ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿಯೂ ಸೋಲುಂಡಿದ್ದ ಜವರಾಯಿಗೌಡ ಈ ಬಾರಿ ಗೆಲುವಿಗೆ ಸಾಕಷ್ಟು ಕಸರತ್ತು ನಡೆಸಿದ್ದರು. ವಿಸ್ತಾರವಾದ ಕ್ಷೇತ್ರದಲ್ಲಿ ಸೋಮಶೇಖರ್‌ ಅಂತಿಮವಾಗಿ 10,711 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ದಾಸರಹಳ್ಳಿ: ಬಿಜೆಪಿಯ ಎಸ್‌.ಮುನಿರಾಜು ಅವರು ಹ್ಯಾಟ್ರಿಕ್‌ ಗೆಲುವನ್ನು ಕಸಿದುಕೊಂಡಿರುವ ಜೆಡಿಎಸ್‌ನ ಆರ್‌.ಮಂಜುನಾಥ್‌ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಗನ್‌ಮ್ಯಾನ್‌ ಆಗಿದ್ದ ಮಂಜುನಾಥ್‌ 2015ರ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಬಿಜೆಪಿಯ ಕೇಡರ್‌ ಸಂಘಟನೆಯ ಹೊರತಾಗಿಯೂ ಮಂಜುನಾಥ್‌ ಗೆಲುವು ಸಾಧಿಸಿ ನಗರದಲ್ಲಿ ಜೆಡಿಎಸ್‌ ವ್ಯಾಪ್ತಿಯನ್ನು ವಿಸ್ತರಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್‌: ಮಹಾಲಕ್ಷ್ಮೀ ಲೇಔಟ್‌ನಲ್ಲಿ ಕೆ.ಗೋಪಾಲಯ್ಯ ಅವರು ಎರಡನೇ ಗೆಲುವು ಸಾಧಿಸುವ ಮೂಲಕ ನಗರದಲ್ಲಿ ಜೆಡಿಎಸ್‌ ಸ್ಥಾನ ಉಳಿಸಿಕೊಂಡ ಏಕೈಕ ಕ್ಷೇತ್ರ ಹೆಗ್ಗಳಿಕೆ ತಂದುಕೊಟ್ಟಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಸ್ಪರ್ಧಿಸಿದ್ದ ನೆ.ಲ.ನರೇಂದ್ರ ಬಾಬು ಅವರನ್ನು ಪರಾಭವಗೊಳಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್‌ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಉಪಮೇಯರ್‌ ಎಸ್‌.ಹರೀಶ್‌, ಮಾಜಿ ಪಾಲಿಕೆ ಸದಸ್ಯ ಎಂ.ನಾಗರಾಜ್‌ ಅಸಮಾಧಾನಗೊಂಡಿದ್ದರೂ ಬಳಿಕ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರೂ ಯಶಸ್ಸು ನೀಡಿಲ್ಲ. 

ಮಲ್ಲೇಶ್ವರ: ಕಾಂಗ್ರೆಸ್‌ನ ಪ್ರಬಲ ಕ್ಷೇತ್ರಗಳಲ್ಲಿ ಒಂದಾಗಿದ್ದ ಮಲ್ಲೇಶ್ವರವನ್ನು 10 ವರ್ಷಗಳ ಹಿಂದೆ ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಟಿಕೆಟ್‌ ಘೋಷಣೆಯಾಗಿದ್ದರೂ ಸ್ಪರ್ಧಿಸಲು ಹಿಂದೆ ಸರಿದ ಕಾರಣ ಕೊನೆಯ ಕ್ಷಣದಲ್ಲಿ ಸ್ಪರ್ಧಿಸಿದ್ದ ಕೆಂಗಲ್‌ ಶ್ರೀಪಾದ ರೇಣು ವಿರುದ್ಧ 54000 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.

ಹೆಬ್ಬಾಳ: ಬಿಜೆಪಿ ಭದ್ರಕೋಟೆ ಎನಿಸಿದ್ದ ಹೆಬ್ಬಾಳ ಕ್ಷೇತ್ರವನ್ನು ಭೇದಿಸಿ ಗೆಲುವು ಸಾಧಿಸುವಲ್ಲಿ ಕಾಂಗ್ರೆಸ್‌ನ ಬೈರತಿ ಸುರೇಶ್‌ ಯಶಸ್ಸು ಕಂಡಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಯ ವೈ.ಎ.ನಾರಾಯಣಸ್ವಾಮಿ ಅವರನ್ನು ಪರಾಭವಗೊಳಿಸಿದ್ದಾರೆ. ವಿಧಾನ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸ್ಪರ್ಧಿಸಿದ್ದ ಬೈರತಿ ಸುರೇಶ್‌ ತೀವ್ರ ಪೈಪೋಟಿಯ ನಡುವೆ ಜಯ ದಾಖಲಿಸಿದ್ದಾರೆ.

ಪುಲಿಕೇಶಿನಗರ: ರಾಜ್ಯದಲ್ಲೇ ದಾಖಲೆ ಪ್ರಮಾಣದ 81,626, ಅಂತರದಿಂದ ಜಯಗಳಿಸಿರುವ ಅಖಂಡ ಶ್ರೀನಿವಾಸಮೂರ್ತಿ ಭರ್ಜರಿ ಜಯ ದಾಖಲಿಸಿದ್ದಾರೆ. ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸ್ಪರ್ಧಿಸಿದ್ದ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದ ಬಿ.ಪ್ರಸನ್ನಕುಮಾರ್‌ ಸ್ಪರ್ಧಿಸಿದ್ದರಿಂದ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ಭಾರಿ ಅಂತರದಿಂದ ಗೆಲ್ಲುವ ಮೂಲಕ ಶ್ರೀನಿವಾಸಮೂರ್ತಿ ಎರಡನೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸರ್ವಜ್ಞನಗರ: ಸಾಕಷ್ಟು ವಿವಾದಗಳ ನಡುವೆಯೂ ಕೆ.ಜೆ.ಜಾರ್ಜ್‌ ಗೆಲುವು ಸಾಧಿಸಿದ್ದಾರೆ. ಹಿಂದುಳಿದವರು, ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಎನ್‌.ರೆಡ್ಡಿ ಅವರನ್ನು ಸುಮಾರು 53,304 ಮತಗಳ ಅಂತರದಿಂದ ಜಯ ದಾಖಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಆರೋಪಗಳ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಸಿ.ವಿ.ರಾಮನ್‌ನಗರ: ಮೇಯರ್‌ ಆರ್‌.ಸಂಪತ್‌ರಾಜ್‌ ಅವರನ್ನು ಪರಾಭವಗೊಳಿಸುವ ಮೂಲಕ ಬಿಜೆಪಿಯ ಎಸ್‌.ರಘು ಕ್ಷೇತ್ರದಲ್ಲಿ ಸತತ ಮೂರನೇ ಗೆಲುವು ದಾಖಲಿಸಿದ್ದಾರೆ. ಎಸ್‌.ರಘು 58887 ಮತ ಗಳಿಸಿ ಗೆದ್ದಿದ್ದರೆ ಸಂಪತ್‌ರಾಜ್‌ 46660 ಮತ ಗಳಿಸಿ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್‌ ವಂಚಿತ ಪಿ.ರಮೇಶ್‌ ಕೊನೆಯ ಕ್ಷಣದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ 20.478 ಮತ ಗಳಿಸುವ ಮೂಲಕ ಕಾಂಗ್ರೆಸ್‌ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಕಾಣುತ್ತದೆ.

ಶಿವಾಜಿನಗರ: ಹೊಂದಾಣಿಕೆ ರಾಜಕಾರಣಿಗಳೇ ಮುಖಾಮುಖೀಯಾಗಿದ್ದಾರೆ ಎಂದು ಬಿಂಬಿತವಾಗಿದ್ದ ಕ್ಷೇತ್ರದಲ್ಲಿ ಆರ್‌.ರೋಷನ್‌ ಬೇಗ್‌ 59742 ಮತ ಗಳಿಸಿ ಜಯಗಳಿಸಿದ್ದಾರೆ. ಬಿಜೆಪಿಯ ಕಟ್ಟಾ ಸುಬ್ರಹ್ಮಣ್ಯನಾಯ್ಡು 44702 ಮತ ಪಡೆಯಲಷ್ಟೇ ಯಶಸ್ಸು ಕಂಡಿದ್ದಾರೆ. ಬಿಜೆಪಿ ಕಾರ್ಯಕರ್ತ ರುದ್ರೇಶ್‌ ಹತ್ಯೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಎಲ್ಲದರ ಹೊರತಾಗಿಯೂ ರೋಷನ್‌ ಬೇಗ್‌ ಗೆಲುವಿನ ಓಟ ಮುಂದುವರಿಸಿದ್ದಾರೆ.

ಶಾಂತಿನಗರ: ಪುತ್ರ ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ಪ್ರಕರಣದಿಂದಾಗಿ ಕೊನೆಯ ಕ್ಷಣದಲ್ಲಿ ಟಿಕೆಟ್‌ ಪಡೆದಿದ್ದ ಎನ್‌.ಎ.ಹ್ಯಾರಿಸ್‌ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಉಪಮೇಯರ್‌ ಎಸ್‌.ವಾಸುದೇವಮೂರ್ತಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರೆ, ಬಿಜೆಪಿ ತೊರೆದು ಜೆಡಿಎಸ್‌ ಸೇರಿದ್ದ ಎನ್‌.ಆರ್‌. ಶ್ರೀಧರರೆಡ್ಡಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸಾಕಷ್ಟು ವಾಗ್ಧಾಳಿ ನಡೆಸಿದ್ದರಿಂದ ತೀವ್ರ ಕುತೂಹಲ ಕೆರಳಿಸಿದ್ದ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ.

ಗಾಂಧಿನಗರ: ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಾಂಧಿನಗರದಲ್ಲಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯಿಂದ ಮಾಜಿ ಸಚಿವ ರಾಮಚಂದ್ರಗೌಡರ ಪುತ್ರ ಎ.ಆರ್‌.ಸಪ್ತಗಿರಿಗೌಡ, ಜೆಡಿಎಸ್‌ನ ವಿ.ನಾರಾಯಣಸ್ವಾಮಿ ಸ್ಪರ್ಧೆಯೊಡ್ಡಿದರೂ ಗೆಲುವಿನ ಓಟ ತಡೆಯಲು ಸಾಧ್ಯವಾಗಿಲ್ಲ.

ರಾಜಾಜಿನಗರ: ಕಾಂಗ್ರೆಸ್‌ನ ತೀವ್ರ ಸ್ಪರ್ಧೆಯ ನಡುವೆ ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌ 56271 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಮೇಯರ್‌ ಜಿ.ಪದ್ಮಾವತಿ 46818 ಮತ ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಮಾಗಡಿಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಸಿಗದ ಕಾರಣ ಜೆಡಿಎಸ್‌ನಿಂದ ಕಣಕ್ಕಿಳಿದ ಎಚ್‌.ಎಂ.ಕೃಷ್ಣಮೂರ್ತಿ 13,637 ಮತ ಗಳಿಸಿ ಗಮನ ಸೆಳೆದಿದ್ದಾರೆ.

ಗೋವಿಂದರಾಜನಗರ: ಗೋವಿಂದರಾಜನಗರದ ಶಾಸಕ ಪ್ರಿಯಕೃಷ್ಣ ಅವರನ್ನು ಸೋಲಿಸುವ ಮೂಲಕ 2008ರ ಉಪಚುನಾವಣೆ ಸೋಲಿನ ಸೇಡನ್ನು ಬಿಜೆಪಿಯ ಮಾಜಿ ಸಚಿವ ವಿ.ಸೋಮಣ್ಣ ತೀರಿಸಿಕೊಂಡಿದ್ದಾರೆ. ಕಳೆದ ಬಾರಿ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ಸೋಮಣ್ಣ ಅವರು ಈ ಬಾರಿ ಮತ್ತೆ ಗೋವಿಂದರಾಜನಗರ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆಲುವು ದಾಖಲಿಸಿದ್ದಾರೆ.

ವಿಜಯನಗರ: ವಸತಿ ಸಚಿವರಾಗಿದ್ದ ಎಂ.ಕೃಷ್ಣಪ್ಪ ಅವರು ಪ್ರಾಯಾಸ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿಯೂ ಸ್ಪರ್ಧಿಸಿದ್ದ ಬಿಜೆಪಿಯ ಎಚ್‌.ರವೀಂದ್ರ ವಿರುದ್ಧ ಕೇವಲ 2,775 ಮತಗಳ ಅಂತರದಿಂದ ಕೃಷ್ಣಪ್ಪ ಹ್ಯಾಟ್ರಿಕ್‌ ಜಯ ಗಳಿಸಿದ್ದಾರೆ. ಮಾಜಿ ಪಾಲಿಕೆ ಸದಸ್ಯ ಎಚ್‌.ರವೀಂದ್ರ ಗೆಲುವಿನ ಸಮೀಪಕ್ಕೆ ಬಂದು ಅಲ್ಪ ಮತಗಳಿಂದ ಸೋಲು ಅನುಭವಿಸಿದ್ದಾರೆ.

ಬೆಂಗಳೂರು ದಕ್ಷಿಣ: ರಾಜ್ಯದಲ್ಲಿ ಅತಿ ಹೆಚ್ಚು ಮತದಾರರಿರುವ ಕ್ಷೇತ್ರವೆನಿಸಿದ ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಎಂ.ಕೃಷ್ಣಪ್ಪ ಹ್ಯಾಟ್ರಿಕ್‌ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಆರ್‌.ಕೆ.ರಮೇಶ್‌, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಭಾಕರರೆಡ್ಡಿ ತೀವ್ರ ಕಸರತ್ತು ನಡೆಸಿದರೂ ಬಿಜೆಪಿಯ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುವಲ್ಲಿ ಯಶಸ್ಸು ಕಂಡಿಲ್ಲ.

ಆನೇಕಲ್‌: ಚುನಾವಣೆಗೆ ಸ್ಪರ್ಧಿಸಿದ್ದ ಹೊತ್ತಿನಲ್ಲೇ ಐಟಿ ದಾಳಿಗೆ ಒಳಗಾಗಿದ್ದ ಎಂ.ಶಿವಣ್ಣ ಸತತ ಎರಡನೇ ಗೆಲುವು ದಾಖಲಿಸಿದ್ದಾರೆ. ಮಾಜಿ ಸಚಿವ ಬಿಜೆಪಿಯ ಎ.ನಾರಾಯಣಸ್ವಾಮಿ ತೀವ್ರ ಪೈಪೋಟಿ ಒಡ್ಡಿದರೂ 8627 ಮತಗಳ ಅಂತರದಿಂದ ಜಯ ಗಳಿಸುವಲ್ಲಿ ಶಿವಣ್ಣ ಯಶಸ್ವಿಯಾಗಿದ್ದಾರೆ. ರೆಡ್ಡಿ ಸಮುದಾಯ ಹಾಗೂ ಒಕ್ಕಲಿಗರನ್ನು ಸೆಳೆಯುವಲ್ಲಿ ಯಶಸ್ವಿಯಾದಂತಿದೆ.

ಚಾಮರಾಜಪೇಟೆ: ಜೆಡಿಎಸ್‌ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಜಮೀರ್‌ ಅಹಮದ್‌ ಖಾನ್‌ ಪಕ್ಷ ಬದಲಿಸಿದರೂ ಗೆಲುವಿನ ಓಟ ಮುಂದುವರಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿ ಟಿಕೆಟ್‌ ಪಡೆದ ಎಂ.ಲಕ್ಷ್ಮೀನಾರಾಯಣ್‌ 32,202 ಮತ ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರು ಕಣಕ್ಕಿಳಿಸಿದ್ದ “ಪೈಲ್ವಾನ್‌’ ಅಲ್ತಾಫ್ ಖಾನ್‌ 19393 ಮತಗಳನ್ನಷ್ಟೇ ಗಳಿಸಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಸೋತರೆ ಕತ್ತು ಕತ್ತರಿಸಿಕೊಳ್ಳುವುದಾಗಿ ಹೇಳಿಕೆ ನೀಡಿದ್ದ ಜಮೀರ್‌ ಕೊನೆಗೂ ಕ್ಷೇತ್ರ ಉಳಿಸಿಕೊಂಡಿದ್ದಾರೆ.
 
ಚಿಕ್ಕಪೇಟೆ: ಬಿಜೆಪಿಯಿಂದ ಸ್ಪರ್ಧಿಸಿದ್ದ ಉದ್ಯಮಿ ಉದಯ್‌ ಗರುಡಾಚಾರ್‌ ಅಚ್ಚರಿಯ ಗೆಲುವು ಸಾಧಿಸಿ ಕಾಂಗ್ರೆಸ್‌ನ ಆರ್‌.ವಿ.ದೇವರಾಜ್‌ಗೆ ಶಾಕ್‌ ನೀಡಿದ್ದಾರೆ. ಬಿಜೆಪಿ ಟಿಕೆಟ್‌ ವಿಚಾರ ಪಕ್ಷದ ಮುಖಂಡರ ವಿರುದ್ಧ ಎನ್‌.ಆರ್‌.ರಮೇಶ್‌ ಹರಿದಾಯ್ದಿದ್ದರಿಂದ ಗೊಂದಲ ಸೃಷ್ಟಿಯಾಗಿದ್ದರೂ ಅಂತಿಮವಾಗಿ ಉದಯ್‌ ಗರುಡಾಚಾರ್‌ ಜಯ ದಾಖಲಿಸಿದ್ದಾರೆ.

ಬಸವನಗುಡಿ: ಬಿಜೆಪಿಯ ಭದ್ರಕೋಟೆಗಳಲ್ಲಿ ಒಂದಾದ ಬಸವನಗುಡಿಯಲ್ಲಿ ಎಲ್‌.ಎ.ರವಿಸುಬ್ರಹ್ಮಣ್ಯ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದಾರೆ. ಎರಡನೇ ಬಾರಿ ಸ್ಪರ್ಧಿಸಿದ್ದ ಜೆಡಿಎಸ್‌ನ ಕೆ.ಬಾಗೇಗೌಡ ಸ್ಪರ್ಧೆಯೊಡ್ಡುವಂತೆ ಕಂಡುಬಂದಿದ್ದರೂ ಅಂತಿಮವಾಗಿ ರವಿಸುಬ್ರಹ್ಮಣ್ಯ ಭರ್ಜರಿಯಾಗಿ ಜಯಭೇರಿ ಬಾರಿಸಿದ್ದಾರೆ.

ಪದ್ಮನಾಭನಗರ: ಗುರು- ಶಿಷ್ಯರ ಕಾಳಗವೆಂದೇ ಬಿಂಬಿತವಾಗಿದ್ದ ಪದ್ಮನಾಭನಗರ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಬಿಜೆಪಿಯ ಆರ್‌. ಅಶೋಕ್‌ ಅವರು ತಮ್ಮ ಮಾಜಿ ಗುರು ಕಾಂಗ್ರೆಸ್‌ನ ಎಂ.ಶ್ರೀನಿವಾಸ್‌ ಅವರನ್ನು 44,468 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ವಿ.ಕೆ.ಗೋಪಾಲ್‌ 45702 ಮತ ಗಳಿಸಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಬಿಟಿಎಂ ಲೇಔಟ್‌: ಸತತ ಏಳನೇ ಬಾರಿಗೆ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಗೆಲುವು ಸಾಧಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಸ್ಪರ್ಧೆಗಿಳಿಸಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಸಂಬಂಧಿ ಲಲ್ಲೇಶ್‌ರೆಡ್ಡಿ ಸ್ಪರ್ಧೆ ನಡುವೆಯೂ ಗೆಲುವಿನ ನಗೆ ಬೀರಿದ್ದಾರೆ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ದೇವದಾಸ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಮಹದೇವಪುರ: ಬಿಜೆಪಿಯ ಅರವಿಂದ ಲಿಂಬಾವಳಿ ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಎ.ಸಿ.ಶ್ರೀನಿವಾಸ್‌ ಅವರನ್ನು 17784 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಲ್ಲೂರ ಹಳ್ಳಿ ನಾಗೇಶ್‌ ಸ್ಪರ್ಧೆಯಿಂದ  ಕ್ಷೇತ್ರ ಕುತೂಹಲ ಕೆರಳಿಸಿತ್ತಾದರೂ ಅಂತಿಮವಾಗಿ ಬಿಜೆಪಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಬೊಮ್ಮನಹಳ್ಳಿ: ಬಿಜೆಪಿಯ ಭದ್ರ ಕೋಟೆ ಎನಿಸಿರುವ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಎಂ.ಸತೀಶ್‌ ರೆಡ್ಡಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ನೇರ ಸ್ಪರ್ಧೆಯೊಡ್ಡಿದ್ದ ಕಾಂಗ್ರೆಸ್‌ನ ಸುಷ್ಮಾ ರಾಜಗೋಪಾಲರೆಡ್ಡಿ ಅವರನ್ನು 47,162 ಅಂತರದಿಂದ ಸತೀಶ್‌ರೆಡ್ಡಿ ಪರಾಭವಗೊಳಿಸಿದ್ದಾರೆ.

* ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next