Advertisement

ನೂತನ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣ ಆಂಶಿಕ ಕಾರ್ಯಾರಂಭ

12:24 PM Apr 28, 2022 | Team Udayavani |

ಉಡುಪಿ: ಬನ್ನಂಜೆಯಲ್ಲಿ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಉದ್ಘಾಟಿಸಿದ ಡಾ| ವಿ.ಎಸ್. ಆಚಾರ್ಯ ಬಸ್‌ ತಂಗುದಾಣ ಆಂಶಿಕ ಕಾರ್ಯಾಚರಣೆ ಮಾಡುತ್ತಿದೆ.

Advertisement

ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು, ಕಾರ್ಕಳ, ಶಿವಮೊಗ್ಗ, ಕುಂದಾಪುರ, ಹಾಲಾಡಿ, ಹೊಸಂಗಡಿ ಭಾಗಗಳಿಗೆ ತೆರಳುವ ಬಸ್‌ಗಳು ಈ ನಿಲ್ದಾಣದ ಮೂಲಕವೇ ಹಾದು ಹೋಗುತ್ತಿವೆ. ಶೇ. 90ರಷ್ಟು ಬಸ್‌ಗಳು ಕಾರ್ಯಾಚರಣೆ ಆರಂಭಿಸಿವೆ.

ಸುಮಾರು 2.5 ಎಕರೆ ಜಾಗದಲ್ಲಿ ನಿರ್ಮಾಣ ಗೊಂಡಿರುವ ಬಸ್‌ ನಿಲ್ದಾಣದಲ್ಲಿ ಕೆಳ ಅಂತಸ್ತಿನಲ್ಲಿ ಪ್ರವೇಶ ದ್ವಾರ ಹೊಂದಿದ್ದು, 2 ಎಸ್ಕಾಲೇಟರ್‌ ಹಾಗೂ ಲಿಫ್ಟ್ ವ್ಯವಸ್ಥೆ ಹೊಂದಿದೆ. ನೆಲ ಅಂತಸ್ತಿನಲ್ಲಿ ಏಕಕಾಲದಲ್ಲಿ 18 ಬಸ್‌ಗಳು ಬಂದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಸುಮಾರು 100 ಬಸ್‌ಗಳು ತಂಗಲು ಸ್ಥಳಾವಕಾಶವಿದೆ. ಉಳಿದ ಕೆಎಸ್ಸಾರ್ಟಿಸಿ ಕಚೇರಿ ಸೇರಿದಂತೆ ವಾಣಿಜ್ಯ ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ.

ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿ

ಈ ಕಟ್ಟಡದಲ್ಲಿರುವ ವಾಣಿಜ್ಯ ಸಂಕೀರ್ಣಗಳು ಖಾಲಿ ಬಿದ್ದಿವೆ. ಅಂಗಡಿ-ಮುಂಗಟ್ಟುಗಳಿಗೆ ಟೆಂಡರ್‌ ಕರೆಯಲಾಗಿದ್ದು, ಕೆಲವು ತಿಂಗಳುಗಳ ಒಳಗೆ ಕಾರ್ಯಾ ರಂಭ ಮಾಡುವ ಸಾಧ್ಯತೆಗಳಿವೆ. ಕೌಂಟರ್‌ ಹಾಗೂ ಸಿಬಂದಿಗಳ ನೇಮಕಾತಿಯೂ ಇನ್ನಷ್ಟೇ ಆಗಬೇಕಿದೆ. ಪ್ರಸ್ತುತ ಇಬ್ಬರು ಟ್ರಾಫಿಕ್‌ ಕಂಟ್ರೋಲರ್‌ಗಳು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ಟಾಂಡಿಂಗ್‌ ಇನ್‌ಚಾರ್ಜ್‌, ಭದ್ರತಾ ಸಿಬಂದಿ, ಟಿಸಿ, ಶುಚಿತ್ವಕ್ಕೆ ಸಿಬಂದಿಯ ಅಗತ್ಯವಿದೆ.

Advertisement

2ನೇ ಅತೀದೊಡ್ಡ ಬಸ್‌ ತಂಗುದಾಣ

ಹಾಸನಕ್ಕೆ ಹೋಲಿಸಿದರೆ ಇದು ಎರಡನೇ ಅತೀ ದೊಡ್ಡ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣವಾಗಿದೆ. ಬಹುತೇಕ ಹೆಚ್ಚಿನ ಕಾಮಗಾರಿಗಳು ಪೂರ್ಣಗೊಂಡಿವೆ. ಮೂಲಸೌಕರ್ಯ ಸಹಿತ ಆಂತರಿಕ ಕೆಲಸ ಕಾರ್ಯಗಳು ಪೂರ್ಣಗೊಂಡರೆ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಶುಚಿತ್ವಕ್ಕೆ ಬೇಕಿದೆ ಆದ್ಯತೆ

ಬಸ್‌ ತಂಗುದಾಣದ ಶುಚಿತ್ವ ನಿರ್ವಹಣೆಗೆ ಯಾವುದೇ ಸಿಬಂದಿಯಿಲ್ಲ.ಈ ತಂಗುದಾಣದ ಉದ್ಘಾಟನ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ| ವಿ.ಎಸ್. ಆಚಾರ್ಯರ ಹೆಸರಿಗೆ ತಕ್ಕಂತಹ ಸೇವೆ ಇಲ್ಲಿ ಸಿಗಬೇಕು ಎಂದಿದ್ದರು. ಈ ಕಾರ್ಯ ಇಲ್ಲಿ ಅಚ್ಚುಕಟ್ಟಾಗಿ ನೆರವೇರಿದರಷ್ಟೇ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣಕ್ಕೆ ಮತ್ತಷ್ಟು ಪ್ರಾಮುಖ್ಯತೆ ಸಿಗಲು ಸಾಧ್ಯವಿದೆ.

ಸದ್ಯದಲ್ಲೇ ನೇಮಕಾತಿ

ಬನ್ನಂಜೆಯ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದ ಬಳಕೆ ಹಂತ-ಹಂತಗಳಲ್ಲಿ ಆರಂಭಗೊಳ್ಳಲಿದೆ. ವಾಣಿಜ್ಯ ಮಳಿಗೆಗಳಿಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಸಿಬಂದಿ ನೇಮಕಾತಿಯೂ ಸದ್ಯದಲ್ಲಿಯೇ ನಡೆಯಲಿದೆ. -ಅರುಣ್‌ ಕುಮಾರ್‌, ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ

Advertisement

Udayavani is now on Telegram. Click here to join our channel and stay updated with the latest news.

Next