ಚಿತ್ರರಂಗಕ್ಕೆ ಸ್ಟಾರ್ ಆಗಬೇಕೆಂದು ಬರುವವರ ಸಂಖ್ಯೆ ಕಡಿಮೆ ಏನಿಲ್ಲ. ಆದರೆ, ಇಲ್ಲೊಂದು ತಂಡ ತಮ್ಮ ಸಿನಿಮಾದ ಹೆಸರನ್ನೇ “ಸ್ಟಾರ್’ ಎಂದಿಟ್ಟಿದೆ. ಲಯನ್ ಕ್ರಿಯೇಶನ್ಸ್‌ನಡಿ ಶರತ್ ನಿರ್ಮಿಸಿ, ನಟಿಸುತ್ತಿರುವ ಸ್ಟಾರ್ ಚಿತ್ರವು ಸೋಮವಾರ ಬೆಂಗಳೂರಿನಲ್ಲಿ ಸೆಟ್ಟೇರಿದೆ. ಈ ಚಿತ್ರವನ್ನು ಅನು ವಿಜಯಸೂರ್ಯ ದಂಪತಿ ಬರೆದು ನಿರ್ದೇಶಿಸುತ್ತಿದೆ. ಈ ಚಿತ್ರದ ಮೂಲಕ ಶರತ್ ಪೂರ್ಣಪ್ರಮಾಣದ ನಾಯಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಶರತ್, “ನಾನು ಇದುವರೆಗೂ ಹಲವು ಸಿನಿಮಾಗಳಲ್ಲಿ, ಒಂದು ರಿಯಾಲಿಟಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದೆ. ಇದೇ ಮೊದಲ ಬಾರಿಗೆ ಹೀರೋ ಆಗಿ ಅಭಿನಯಿಸುತ್ತಿದ್ದೇನೆ. ಇದೊಂದು ನೈಜ ಘಟನೆಗಳನ್ನಾಧರಿಸಿದ ಚಿತ್ರ. 100 ಪರ್ಸೆಂಟ್ ಮನರಂಜನೆ ಇರುವ ಈ ಚಿತ್ರ ನೋಡಿ ಪ್ರೇಕ್ಷಕರು ಅಳುವುದು ಗ್ಯಾರಂಟಿ. ಚಿತ್ರದ ಟೈಟಲ್ ವಿಶೇಷವಾಗಿದ್ದು, ಎಲ್ಲರೂ ಉಪೇಂದ್ರ ಶೈಲಿಯಲ್ಲಿದೆ ಎನ್ನುತ್ತಿದ್ದಾರೆ. ನಮ್ಮ ತಂದೆ ಪ್ರಕಾಶ್ ಚಿತ್ರರಂಗದಲ್ಲಿ ಫೈಟರ್ ಆಗಿದ್ದವರು. ಈ ಚಿತ್ರದಲ್ಲೂ ಫೈಟ್‌ಗಳಿರುತ್ತವೆ. ಆದರೆ, ಅವೆಲ್ಲವೂ ಸಹಜವಾಗಿರುತ್ತದೆ. ನಾನು ಗಿರಿರಾಜ್ ಅವರಿಂದ ಅಭಿನಯ ಕಲಿತು ಬಂದಿದ್ದೇನೆ’ ಎಂದು ವಿವರಿಸಿದರು.
ನಿರ್ದೇಶಕ ವಿಜಯ ಸೂರ್ಯ, “ನಾನು ಕಳೆದ 16 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಲೈಟ್‌ಬಾಯ್ ಆಗಿ ಬಂದು, ಬರಹಗಾರನಾಗಿ, ಈ ಚಿತ್ರವನ್ನು ನನ್ನ ಹೆಂಡತಿ ಜೊತೆಗೆ ಸೇರಿ ನಿರ್ದೇಶನ ಮಾಡುತ್ತಿದ್ದೇನೆ. ಇದೊಂದು ಭೂಗತ ಲೋಕದ ಚಿತ್ರ. ಈ ಚಿತ್ರದಲ್ಲಿ ಲಾಂಗ್ ಮಹತ್ವದ ಪಾತ್ರ ವಹಿಸುತ್ತದೆ. ಇವತ್ತು ಏನು ನಡೆಯುತ್ತಿದೆ ಎನ್ನುವುದಕ್ಕಿಂತ, ಹಿಂದಿನ ಕಾಲದಲ್ಲಿ ಶುರುವಾಗಿ, ಈಗ ಹೇಗೆ ಮುಂದುವರೆಯುತ್ತಿದೆ ಎಂದು ಹೇಳುವುದನ್ನು ಹೊರಟಿದ್ದೇವೆ. ಬೆಂಗಳೂರಿನಲ್ಲೇ ಸಂಪೂರ್ಣ ಚಿತ್ರೀಕರಣ ನಡೆಯಲಿದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು.
ಈ ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತವಿದ್ದು, ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಪ್ರವೀಣ್ ಎಂ ಪ್ರಭು ಅವರ ಛಾಯಾಗ್ರಹಣ, ಶಶಿಧರ್ ಪುಟ್ಟೇಗೌಡ ಅವರ ಸಂಕಲನವಿದೆ. ಚಿತ್ರದಲ್ಲಿ ನಾಯಕಿಯಾಗಿ ರಜತ್ ಅಭಿನಯಿಸುತ್ತಿದ್ದು, ಕಡ್ಡಿ ವಿಶ್ವ, ಕೋಟೆ ಪ್ರಭಾಕರ್, ಮುರಳಿ ಮೋಹನ್, ಪ್ರದೀಪ್ ಪರಾಕ್ರಮ, ಪೂರ್ಣಿಮಾ ಮುಂತಾದವರು ಅಭಿನಯಿಸುತ್ತಿದ್ದಾರೆ.