ಕನ್ನಡದಲ್ಲಿ ದಿನ ಕಳೆದಂತೆ ಹೊಸ ಹೀರೋಗಳ ಎಂಟ್ರಿಯಾಗುತ್ತಿದೆ. ಅಷ್ಟೇ ಅಲ್ಲ, ಹೊಸ ಬಗೆಯ ಕಥೆ ಇರುವ ಚಿತ್ರಗಳು ಬರುತ್ತಿರುವುದು ವಿಶೇಷ. ಆ ಸಾಲಿಗೆ ಈಗ “ಕಂಟ್ರಿಮೇಡ್ ಚಾರಿ’ ಎಂಬ ಹೊಸ ಚಿತ್ರವೊಂದು ಸೇರ್ಪಡೆಯಾಗುತ್ತಿದೆ. ಅಂದಹಾಗೆ, ಈ ಚಿತ್ರವನ್ನು ಎಸ್.ರವೀಂದ್ರನಾಥ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ರಮೇಶ್ ಅರವಿಂದ್ ಹಾಗು ರಚಿತಾರಾಮ್ ಅಭಿನಯಿಸಿದ್ದ “ಪುಷ್ಪಕ ವಿಮಾನ’ ಚಿತ್ರವನ್ನು ನಿರ್ದೇಶಿಸಿದ್ದರು.
ಈಗ “ಕಂಟ್ರಿಮೇಡ್ ಚಾರಿ’ ಚಿತ್ರದ ಹಿಂದೆ ನಿಂತಿದ್ದಾರೆ. “ಕಂಟ್ರಿಮೇಡ್’ ಅಂದಾಕ್ಷಣ, ಕಂಟ್ರಿಮೇಡ್ ಪಿಸ್ತೂಲ್ ಪದ ನೆನಪಾಗದೇ ಇರದು. ಹಾಗಂತ, ಇದೊಂದು ಅಂಡರ್‌ವರ್ಲ್ಡ್ ಸಿನಿಮಾ ಇರಬಹುದಾ ಎಂಬ ಪ್ರಶ್ನೆಯೂ ಎದುರಾಗಬಹುದು. ಆದರೆ, ಇದು ಆ ಬಗೆಯ ಚಿತ್ರವಲ್ಲ ಎಂದು ಸ್ಪಷ್ಟಪಡಿಸುವ ನಿರ್ದೇಶಕ ರವೀಂದ್ರನಾಥ್, ಇದೊಂದು ಪಕ್ಕಾ ಆ್ಯಕ್ಷನ್ ಡ್ರಾಮ ಇರುವ ಚಿತ್ರ. 1995 ಆಸುಪಾಸಿನಲ್ಲಿ ನಡೆಯುವ ಕಥೆ.
ಚಿತ್ರದಲ್ಲಿ ಶಿವಾಂಕ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರು ನಾಯಕರಾಗಿ ನಟಿಸುತ್ತಿರುವ ಮೊದಲ ಚಿತ್ರ. ಈ ಹಿಂದೆ “ಪುಷ್ಪಕ ವಿಮಾನ’ ಮತ್ತು ” ರಣವಿಕ್ರಮ’ ಚಿತ್ರದಲ್ಲಿ ಚಿಕ್ಕ ಪಾತ್ರ ನಿರ್ವಹಿಸಿದ್ದರು. ಕಥೆಯ ಪಾತ್ರಕ್ಕೆ ಸರಿಹೊಂದುತ್ತಾರೆಂಬ ಕಾರಣಕ್ಕೆ ಶಿವಾಂಕ್ ಅವರನ್ನಿಲ್ಲಿ ಆಯ್ಕೆ ಮಾಡಲಾಗಿದೆ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಹೀರೋ ಹೆಸರು ರಾಘವ ಚಾರಿ. ಆದರೆ, ಅವನು ತನ್ನ ಏರಿಯಾದಲ್ಲಿ ಒಂಥರಾ ರೆಬೆಲ್ ಆಗಿರುವ ಹುಡುಗ.
ಅವನು ಏನೇ ಮಾಡಿದರೂ, ಪಕ್ಕಾ ಪ್ಲಾನಿಂಗ್ ಮಾಡಿ, ಸದಾ ಎನರ್ಜಿಯಲ್ಲೇ ಕೆಲಸ ಮಾಡುವ ವ್ಯಕ್ತಿ. ಹೇಗೆಂದರೆ, ಒಂದು ರೀತಿ ಕಂಟ್ರಿಮೇಡ್ ಪಿಸ್ತೂಲ್‌ನಂತೆ ಕೆಲಸ ಮಾಡುತ್ತಿರುತ್ತಾನೆ. ಹಾಗಾಗಿ ಎಲ್ಲರೂ ಅವನನ್ನು “ಕಂಟ್ರಿಮೇಡ್ ಚಾರಿ’ ಎಂದೇ ಕರೆಯುತ್ತಾರೆ. ಇಲ್ಲಿ ಕೆಲವು ನೈಜ ಘಟನೆ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಎಲ್ಲವೂ ನೈಜವಾಗಿ ಕಾಣಬೇಕು ಎಂಬ ಉದ್ದೇಶದಿಂದ, ಪಕ್ಕಾ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸುವ ನಿರ್ದೇಶಕರು,
ಆಗಸ್ಟ್ ಮೊದಲ ವಾರದಿಂದ ಚಿತ್ರೀಕರಣಕ್ಕೆ ಹೊರಡುವ ಸಿದ್ಧತೆಯಲ್ಲಿದ್ದಾರೆ. ಸದ್ಯಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದರೆ, ಎಸ್.ಕೆ.ರಾವ್ ಛಾಯಾಗ್ರಹಣವಿದೆ. ಹರೀಶ್ ಕೊಮ್ಮೆ ಸಂಕಲನ ಮಾಡುತ್ತಿದ್ದಾರೆ. ನೊಬಿನ್ ಪಾಲ್ ಸಂಗೀತವಿದೆ. ಬೆಂಗಳೂರು, ರಾಮನಗರ, ಬಂಗಾರಪೇಟೆ ಸೇರಿದಂತೆ ಇತರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕರು.