Advertisement

ಶಾಸ್ತ್ರ-ಸಂಪ್ರದಾಯದ ಸುತ್ತ ಹೊಸಬರ ಚಿತ್ರ

06:00 AM Dec 21, 2018 | Team Udayavani |

ಸುಮಾರು ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮದುವೆ ಹೇಗೆ ಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಅದರಲ್ಲಿ ಏನೇನು ವಿಶೇಷತೆಗಳಿದ್ದವು ಎಂಬುದು ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದರೆ ಹೇಗಿರುತ್ತದೆ? ಅಂದಿನ ಮದುವೆಗಳನ್ನು ಮಿಸ್‌ ಮಾಡಿಕೊಂಡವರಿಗೆ ಅದರ ಅನುಭವ ಸಿಗಬಹುದು. ಅದಕ್ಕಾಗಿಯೇ ಇಲ್ಲೊಂದು ಹೊಸಬರ ತಂಡ ಮೂವತ್ತೈದು-ನಲವತ್ತು ವರ್ಷಗಳ ಹಿಂದೆ ಮದುವೆ ಹೇಗೆ ನಡೆಯುತ್ತಿತ್ತು ಎಂಬುದನ್ನು “ಮದ್ವೆ’ ಎನ್ನುವ ಹೆಸರಿನಲ್ಲೇ ಚಿತ್ರರೂಪದಲ್ಲಿ ಪ್ರೇಕ್ಷಕರ ಮುಂದೆ ಹೇಳಲು ಹೊರಟಿದೆ.  

Advertisement

ಚಿತ್ರರಂಗದ ಯಾವುದೇ ಹಿನ್ನೆಲೆ, ಅನುಭವ ಇಲ್ಲದಿದ್ದರೂ, “ಮದ್ವೆ’ಯ ಮೂಲಕ ಗ್ರಾಮೀಣ ಸೊಗಡು, ಅದರ ವಿಶೇಷತೆಗಳನ್ನು ಈ ತಂಡ ಹೇಳುತ್ತಿದೆ. ನಟನೆಯ ಅನುಭವ ಇಲ್ಲದ ಗ್ರಾಮೀಣ ಕಲಾವಿದರನ್ನು ಬಳಸಿಕೊಂಡು “ಮದ್ವೆ’ ಚಿತ್ರವನ್ನು ನಿರ್ದೇಶಿಸಿದ್ದಾರೆ ಹಿಂದು ಕೃಷ್ಣ. ಈಗಾಗಲೇ ಮಂಡ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯ ಚಿತ್ರದ ಪ್ರಚಾರ ಕೆಲಸಕ್ಕೆ ಚಾಲನೆ ನೀಡಿದೆ. ಇದೇ ವೇಳೆ “ಮದ್ವೆ’ಯಲ್ಲಿರುವ ವಿಶೇಷತೆಗಳ ಬಗ್ಗೆ ಮಾಹಿತಿ ಕೊಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿತು. 

“ಗ್ರಾಮೀಣ ಭಾಗದಲ್ಲಿ ಹೆಣ್ಣು ನೋಡುವುದರಿಂದ ಶುರುವಾಗಿ, ಮದುವೆ ಮುಕ್ತಾಯವಾಗಿ ಹುಡುಗಿ ವರನ ಮನೆಗೆ ಹೋಗುವವರೆಗೆ ಏನೆಲ್ಲಾ ಘಟನೆಗಳು ನಡೆಯಲಿವೆ ಎಂಬುದನ್ನು ನವಿರಾದ ಹಾಸ್ಯ ಶೈಲಿಯಲ್ಲಿ ಕಟ್ಟಿಕೊಡುವ ಪ್ರಯತ್ನ  “ಮದ್ವೆ’ ಚಿತ್ರದಲ್ಲಿದೆ’ ಎನ್ನುತ್ತದೆ ಚಿತ್ರತಂಡ. ಯುವ ನಟಿ ಆರೋಹಿ ಗೌಡ ಹಾಗೂ ಮಂಜುನಾಥ ಆರ್ಯ “ಮದ್ವೆ’ ಚಿತ್ರದಲ್ಲಿ ತೆರೆಮೇಲೆ ಮದುವೆ ಆಗುತ್ತಿರುವ ಜೋಡಿ. ಉಳಿದಂತೆ ಗ್ರಾಮೀಣ ಪ್ರತಿಭೆಗಳಾದ ಮಂಜು ಮಾಧವ, ಯಶೋಧ, ನಾಗರತ್ನ, ಸಚಿನ್‌, ಪುಟ್ಟ ತಾಯಮ್ಮ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 

“ಮದ್ವೆ’ಗೆ ಕಥೆ ಬರೆದಿರುವ ಪರಮೇಶ್‌ ಸಿ.ಬಿ, “ಶ್ರೀಮಾತಾಪಿತೃ ಎಂಟರ್‌ಟೈನ್ಮೆಂಟ್‌’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಮದ್ವೆ’ಯ ಸುಂದರ ದೃಶ್ಯಗಳನ್ನು ಅಮರ ನಾಗ್‌ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಚಿತ್ರಕ್ಕೆ ವರುಣ್‌ ವಸಿಷ್ಠ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರಶಾಂತ್‌ ಆರಾಧ್ಯ ಸಂಗೀತ ನಿರ್ದೇಶನವಿದ್ದು, ಹಳ್ಳಿಯಲ್ಲಿ ಬಳಸುವ ಲಾವಣಿ ಮತ್ತು ಸೋಭಾನೆ ಪದಗಳನ್ನೇ ಚಿತ್ರದ ಹಾಡುಗಳಲ್ಲಿ ಬಳಸಿಕೊಳ್ಳಲಾಗಿದೆ. ಇನ್ನು ಚಿತ್ರದ ಹಿನ್ನೆಲೆಯಲ್ಲಿ ಸಿಂಕ್‌ ಸೌಂಡ್‌ ಬಳಕೆ ಮಾಡಲಾಗಿದ್ದು, ಚಿತ್ರದ ದೃಶ್ಯಗಳು ಕೂಡ ಸಹಜತೆಯಿಂದ ಕೂಡಿರಲಿದೆ. ಚಿತ್ರ ಪ್ರೇಕ್ಷಕರಿಗೆ, ಹಳ್ಳಿಗೆ ಹೋಗಿ ಮದುವೆ ನೋಡಿಕೊಂಡು ಬಂದ ಅನುಭವ ನೀಡಲಿದೆ. ಮುಂದಿನ ಜನವರಿ ವೇಳೆಗೆ ಪ್ರೇಕ್ಷಕರಿಗೆ “ಮದ್ವೆ’ ತೊರಿಸಲಿದ್ದೇವೆ ಎನ್ನುವುದು ಚಿತ್ರತಂಡದ ಮಾತು. ಸದ್ಯಕ್ಕೆ “ಮದ್ವೆ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಹಳ್ಳಿ ಸೊಗಡು ಎದ್ದು ಕಾಣುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next