Advertisement

ಬೆಂಗಳೂರು- ಚೆನ್ನೈ ಸಾರಿಗೆಯ ಹೊಸ ಭಾಷ್ಯ ಎಕ್ಸ್‌ಪ್ರೆಸ್‌ ವೇ!

01:17 AM May 26, 2022 | Team Udayavani |

ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಒಂದು ದಿನದ ಭೇಟಿಗಾಗಿ ತಮಿಳುನಾಡು ರಾಜಧಾನಿ ಚೆನ್ನೈ ಪ್ರವಾಸ ಕೈಗೊಳ್ಳಲಿದ್ದು, ಆ ಸಂದರ್ಭದಲ್ಲಿ ನಾನಾ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳಲ್ಲಿ ಚೆನ್ನೈ- ಬೆಂಗಳೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಯೋಜನೆಯ ಶಿಲಾನ್ಯಾಸವೂ ಒಂದು. ಈ ಯೋಜನೆಗಳಲ್ಲಿ ಕರ್ನಾಟಕಕ್ಕೆ ಉಪಯೋಗವಾಗುವ ಮತ್ತೊಂದು ಯೋಜನೆಯೆಂದರೆ ಅದು 271 ಕಿ.ಮೀ. ಉದ್ದದ ತಿರುವಳ್ಳೂರ್‌- ಬೆಂಗಳೂರು ಇಟಿಬಿಪಿಎನ್‌ಎಂಟಿ ಅನಿಲ ಪೈಪ್‌ಲೈನ್‌ ನಿರ್ಮಾಣ ಯೋಜನೆ.

Advertisement

ಎಕ್ಸ್‌ಪ್ರೆಸ್‌ ಯೋಜನೆಯ ಹೈಲೈಟ್ಸ್‌
ಇದು 262 ಕಿ.ಮೀ. ಉದ್ದದ ರಸ್ತೆ ನಿರ್ಮಾಣ ಯೋಜನೆ. ಒಟ್ಟು 14,870 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಲಿದೆ. ಈ ಎಕ್ಸ್‌ಪ್ರೆಸ್‌ ವೇಯು ಮೂರು ರಾಜ್ಯಗಳಲ್ಲಿ – ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಮೂಲಕ ಹಾದು ಹೋಗುತ್ತದೆ. ಕರ್ನಾಟಕದಲ್ಲಿ ಕೋಲಾರ, ಆಂಧ್ರದಲ್ಲಿ ಪಾಲಾಮರ್‌, ತಮಿಳುನಾಡಿನಲ್ಲಿ ಶ್ರೀಪೆರಂಬದೂರಿನ ಮೂಲಕ ಇದು ಹಾದು ಹೋಗುತ್ತದೆ.

ವಿನ್ಯಾಸ ಹೇಗೆ?
ಇದು ಚತುಷ್ಪಥ ಹೆದ್ದಾರಿಯಾಗಿದ್ದು ವ್ಯಾಪಕ ಪ್ರವೇಶ- ನಿಯಂತ್ರಿತ ಹೆದ್ದಾರಿ. ಭವಿಷ್ಯದಲ್ಲಿ ಅಗತ್ಯಕ್ಕೆ ತಕ್ಕಂತೆ ಇದರ ಅಗಲವನ್ನು ವಿಸ್ತರಿಸಬಹುದಾಗಿದ್ದು, ಎಂಟು ಲೇನ್‌ಗಳ (ಅಷ್ಟ ಪಥ) ಹೆದ್ದಾರಿಯನ್ನಾಗಿಯೂ ಪರಿವರ್ತಿಸಬಹುದಾಗಿದೆ.

ಉಪಯೋಗವೇನು?
ಇದರ ಬಹುಮುಖ್ಯ ಉಪಯೋಗ, ಬೆಂಗಳೂರು- ಚೆನ್ನೈ ನಡುವಿನ ಪ್ರಮಾಣದ ಅವಧಿ ಗಣನೀಯವಾಗಿ ತಗ್ಗುವುದು. ಸದ್ಯಕ್ಕೆ ಬೆಂಗಳೂರಿನಿಂದ ಚೆನ್ನೈಗೆ ಹೋಗಲು 7 ಗಂಟೆ‌ ಅವಧಿ ಬೇಕಾಗುತ್ತದೆ. ಆದರೆ ಈ ಎಕ್ಸ್‌ಪ್ರೆಸ್‌ ವೇ ಸಿದ್ಧವಾದ ಅನಂತರ ಈ ಪ್ರಯಾಣದ ಅವಧಿ ಅರ್ಧಕ್ಕೆ ಅಂದರೆ ಸುಮಾರು ಮೂರೂವರೆ ಗಂಟೆಗೆ ಇಳಿಯಲಿದೆ.

ಇತರ ವಿಶೇಷತೆಗಳು
ಈ ಎಕ್ಸ್‌ಪ್ರೆಸ್‌ ವೇಯಲ್ಲಿ ಇಂಟರ್‌ ಚೇಂಜಿಂಗ್‌ಗಾಗಿ (ಯು ಟರ್ನ್ ಗಾಗಿ) ಮೂರು ಕಡೆ ಮಾತ್ರ ಅವಕಾಶ ಕೊಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಅನುಗುಣವಾಗಿ ಈ ಎಕ್ಸ್‌ಪ್ರೆಸ್‌ ವೇನಲ್ಲಿ ಟ್ರಾಫಿಕ್‌ ಸೇಫ್ಟಿ ಡಿವೈಸಸ್‌ ಅಳವಡಿಸಲಾಗಿದೆ.

Advertisement

ಮಹತ್ವದ ಅನಿಲ
ಪೈಪ್‌ಲೈನ್‌ ಯೋಜನೆ
ತಿರುವಳ್ಳೂರ್‌- ಬೆಂಗಳೂರು ನಡುವಿನ 217 ಕಿ.ಮೀ. ದೂರದ ಎಟಿಬಿಪಿಎನ್‌ಎಂಪಿಟಿ ಅನಿಲ ಪೈಪ್‌ಲೈನ್‌ ಯೋಜನೆಯು ಪ್ರಧಾನಿ ಅವರಿಂದ ಉದ್ಘಾಟನೆಗೊಳ್ಳಲಿದೆ. 910 ಕೋಟಿ ರೂ. ವೆಚ್ಚ. ಎರಡೂ ಯೋಜನೆಗಳಿಂದ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶ ನಡುವೆ ನೈಸರ್ಗಿಕ ಅನಿಲ ಯೋಜನೆ ಪೂರೈಕೆ ಸುಗಮವಾಗಲಿದೆ. ತಮಿಳುನಾಡಿನ ಆನೆಗಳ ಸಂರಕ್ಷಿತಾರಣ್ಯವಾದ ಕೌಂಡಿನ್ಯ ವನ್ಯಜೀವಿ ಸಂರಕ್ಷಣಾರಣ್ಯದ ಪಾಲಮಾರ್‌ ಅರಣ್ಯದ 4.6 ಹೆಕ್ಟೇರ್‌ ವ್ಯಾಪ್ತಿ ಕಾಡಿನಲ್ಲಿ ಈ ಪೈಪ್‌ಲೈನ್‌ ಹಾದು ಹೋಗಿದೆ.

Advertisement

Udayavani is now on Telegram. Click here to join our channel and stay updated with the latest news.

Next