Advertisement

ಕದ್ರಿ ಪುಟಾಣಿ ರೈಲಿಗೆ ಸದ್ಯವೇ ಹೊಸ ಎಂಜಿನ್‌?

10:08 AM May 08, 2022 | Team Udayavani |

ಕದ್ರಿ: ಹಲವು ವರ್ಷಗಳಿಂದ ಕದ್ರಿ ಪಾರ್ಕ್‌ ನಲ್ಲಿ ಸಂಚರಿಸುತ್ತಿರುವ ಬಾಲಮಂಗಳ ಎಕ್ಸ್‌ ಪ್ರಸ್‌ ಪುಟಾಣಿ ರೈಲಿಗೆ ಸದ್ಯದಲ್ಲೇ ಹೊಸ ಎಂಜಿನ್‌ ಸೇರ್ಪಡೆಗೊಳ್ಳಲಿದೆ. ಮೈಸೂರಿನ ನೈಋತ್ಯ ರೈಲ್ವೇ ಅಧಿಕಾರಿಗಳು ಕದ್ರಿ ಪಾರ್ಕ್‌ಗೆ ಆಗಮಿಸಿ ಈಗಿರುವ ಎಂಜಿನ್‌ನ ಕಾರ್ಯದಕ್ಷತೆ ಪರಿಶೀಲನೆ ನಡೆಸಿದ್ದಾರೆ.

Advertisement

ಈ ಪುಟಾಣಿ ರೈಲಿಗೆ ಹೊಸ ಎಂಜಿನ್‌ ಸೇರ್ಪಡೆಗೊಳಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳದ್ದು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಇದರ ಪರಿಣಾಮವಾಗಿ ರೈಲ್ವೇ ಅಧಿಕಾರಿಗಳು ಈಗಿರುವ ಎಂಜಿನ್‌ ಸ್ಥಿತಿಗತಿ, ಬೋಗಿಗಳು, ರೈಲಿನ ಸ್ಪೀಡ್‌, ಬ್ರೇಕ್‌ ಮತ್ತಿತರ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಹೊಸ ಎಂಜಿನ್‌ ಅಳವಡಿಸುವ ಬಗ್ಗೆ ಅವರು ಸದ್ಯದಲ್ಲೇ ವರದಿ ನೀಡುವ ಸಾಧ್ಯತೆ ಇದೆ.

ಕೋವಿಡ್‌ ಕಡಿಮೆಯಾದ ಬಳಿಕ ಸುಮಾರು ಐದು ತಿಂಗಳ ಹಿಂದೆ ಕದ್ರಿ ಪಾರ್ಕ್‌ನಲ್ಲಿ ಪುಟಾಣಿ ರೈಲು ಸಂಚಾರ ಆರಂಭಗೊಂಡಿದೆ. ಸಾಮಾನ್ಯ ದಿನಗಳಲ್ಲಿ ಸಂಜೆ ಸುಮಾರು 1 ತಾಸು ಮತ್ತು ವಾರಾಂತ್ಯಗಳಲ್ಲಿ ಸಂಜೆ ಸುಮಾರು 2 ತಾಸು ಈ ರೈಲು ಸಂಚರಿಸುತ್ತಿದೆ. ಅದರ ಈಗಿರುವ ಎಂಜಿನ್‌ ತುಂಬಾ ಹಳೆಯದು. ಅದು ಗೇರ್‌ ವ್ಯವಸ್ಥೆ ಹೊಂದಿಲ್ಲ. ಬ್ರೇಕ್‌ ಕೂಡ ಸರಿಯಾಗಿಲ್ಲ. ಮಳೆ ಬಂದರೆ, ತುಸು ಎತ್ತರದ ಪ್ರದೇಶದಲ್ಲಿ ರೈಲು ಸಾಗಲು ಇಂಜಿನ್‌ ಸಾಮರ್ಥ್ಯ ಸಾಕಾಗುತ್ತಿಲ್ಲ. ಕೆಲವು ವರ್ಷಗಳಿಂದ ಎಂಜಿನ್‌ನಲ್ಲಿ ತಾಂತ್ರಿಕ ತೊಂದರೆಯೂ ಉಂಟಾಗುತ್ತಿದೆ. ಇದರಿಂದ ಕೆಲವು ದಿನ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ. ಕಳೆದ ವರ್ಷ ರೈಲಿನ ವಾಲ್ವ್ ಜತೆಗೆ ಹೈಡ್ರೋಲಿಂಕ್‌ ಎಂಜಿನ್‌ನಲ್ಲಿ ತೊಂದರೆ ಕಂಡು ಬಂದ ಕಾರಣ, ಈ ಬಿಡಿಭಾಗಗಳನ್ನು ಬೆಂಗಳೂರಿನಿಂದ ತರಲಾಗಿತ್ತು. ಹೀಗಾಗಿ ವಾರಗಟ್ಟಲೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ರೈಲಿಗೆ ಹೊಸ ಎಂಜಿನ್‌ ಅಳವಡಿಸಿದರೆ ರೈಲಿನ ವೇಗವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾಗಿದ್ದು, ಸಂಚಾರ ಆಕರ್ಷಕವಾಗಲಿದೆ.

ಸದ್ಯದಲ್ಲೇ ಹೊಸ ಎಂಜಿನ್‌

ಕದ್ರಿ ಪಾರ್ಕ್‌ನಲ್ಲಿ ಸಂಚರಿಸುವ ಪುಟಾಣಿ ರೈಲಿಗೆ ಹೊಸ ಎಂಜಿನ್‌ ಅಳವಡಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಈ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈಗ ದಕ್ಷಿಣ ರೈಲ್ವೇ ಅಧಿಕಾರಿಗಳ ತಂಡ ಪುಟಾಣಿ ರೈಲಿನ ಕಾರ್ಯದಕ್ಷತೆಯನ್ನು ಪರಿಶೀಲನೆ ನಡೆಸಿದೆ. ಸದ್ಯದಲ್ಲೇ ವರದಿ ನೀಡುವ ಸಾಧ್ಯತೆ ಇದೆ. -ಟಿ. ಪಾಪ ಬೋವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next