ದಿನದಿಂದ ದಿನಕ್ಕೆ ಚಿತ್ರರಂಗಕ್ಕೆ ಬರುವ ಇಂಜಿನಿಯರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಸಿನಿಮಾ ಆಸಕ್ತಿಗಾಗಿ ಅನೇಕರು ಇಂಜಿನಿಯರಿಂಗ್ ಕೆಲಸವನ್ನು ತೊರೆದು ಸಂಪೂರ್ಣವಾಗಿ ತಮ್ಮನ್ನು ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಈಗ ಆ ಸಾಲಿಗೆ ಸೇರ್ಪಡೆ “ಹೊಂಬಣ್ಣ’ ತಂಡ. “ಹೊಂಬಣ್ಣ’ ಎಂಬ ಚಿತ್ರವೊಂದು ಬರುತ್ತಿರೋದು ನಿಮಗೆ ಗೊತ್ತಿರಬಹುದು. ಆ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಟರು ಸೇರಿದಂತೆ ಈ ತಂಡದ ಬಹುತೇಕ ಮಂದಿ ಇಂಜಿನಿಯರಿಂಗ್‌ಗೆ ಗುಡ್‌ಬೈ ಹೇಳಿ ಸಿನಿಮಾಕ್ಕೆ ಬಂದಿದ್ದಾರೆ.
ರಕ್ಷಿತ್ ತೀರ್ಥಹಳ್ಳಿ ಈ ಚಿತ್ರದ ನಿರ್ದೇಶಕರು. ಇವರಿಗಿದು ಚೊಚ್ಚಲ ಸಿನಿಮಾ. ಚೊಚ್ಚಲ ಸಿನಿಮಾದಲ್ಲೇ ಗಂಭೀರ ಸಮಸ್ಯೆಯೊಂದನ್ನು ಆರಿಸಿಕೊಂಡು ಸಿನಿಮಾ ಮಾಡಿದ್ದಾರೆ. ಅದು ಅರಣ್ಯ ಒತ್ತುವರಿ ಹಾಗೂ ಒಕ್ಕಲೆಬ್ಬಿಸುವ ಕುರಿತು. ಅರಣ್ಯ ಒತ್ತುವರಿಯ ಎಳೆಯನ್ನಿಟ್ಟುಕೊಂಡು ಮಲೆನಾಡಿನ ಸುಂದರ ಪರಿಸರ, ಸಂಸ್ಕೃತಿ, ಅಲ್ಲಿನ ಆಚರಣೆ, ಭಾಷೆಯ ಜೊತೆ ಜೊತೆಗೆ ಅಲ್ಲಿನ ರೈತರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಈ ಚಿತ್ರದಲ್ಲಿ ಹೇಳಲು ಹೊರಟಿದ್ದಾರಂತೆ.
ಚಿತ್ರದಲ್ಲಿ ಅರಣ್ಯ ಒತ್ತುವರಿಯ ಸಾಧಕ-ಬಾಧಕಗಳು ಚಿತ್ರದ ಪ್ರಮುಖ ಅಂಶವಾಗಿದ್ದು, ಕೆಲವು ಕಾನೂನುಗಳಿಂದ ಸಾಮಾನ್ಯ ಜನರಿಗೆ, ಅದರಲ್ಲೂ ರೈತರಿಗೆ ಆಗುವ ತೊಂದರೆಗಳನ್ನು ಇಲ್ಲಿ ಚಿತ್ರಿಸಲಾಗಿದೆಯಂತೆ. ಹಲವಾರು ಸಮಸ್ಯೆಗಳಿಗೆ ಉತ್ತರ ಸಿಗದೇ ಇರುವ ಜೊತೆಗೆ ಸಮಸ್ಯೆಗಳು ಹೋರಾಟಕ್ಕೆ ನಾಂದಿಯಾಗುವ ರೀತಿ, ಉಳುಮೆ ಮಾಡುವವನ ಮನಸ್ಥಿತಿ, ರಾಜಕೀಯ ನೀತಿಯನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರಂತೆ.
ಚಿತ್ರವನ್ನು ರಾಮಕೃಷ್ಣ ನಿರ್ಮಿಸಿದ್ದಾರೆ. ಈಗಾಗಲೇ ಕೆಲವು ಚಿತ್ರೋತ್ಸವಗಳಿಗೆ ಚಿತ್ರ ಆಯ್ಕೆಯಾಗಿದ್ದು, ಇದೊಂದು ಒಳ್ಳೆಯ ಚಿತ್ರವಾಗಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ವಿಶ್ವಾಸ ಅವರಿಗಿದೆ. ಚಿತ್ರದಲ್ಲಿ ಸುಬ್ಬು ತಲಾಬಿ, ಧನು ಗೌಡ, ವರ್ಷ ಆಚಾರ್ಯ, ಪವಿತ್ರಾ, ಶರ್ಮಿತಾ ಶೆಟ್ಟಿ, ದತ್ತಣ್ಣ, ಸುಚೇಂದ್ರ ಪ್ರಸಾದ್, ನೀನಾಸಂ ಅಶ್ವತ್ಥ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಧನು , ಸುಬ್ಬು, ವರ್ಷ ಹಾಗೂ ಶರ್ಮಿತಾ ಚಿತ್ರದಲ್ಲಿ ನಟಿಸಿದ ಖುಷಿ ಹಂಚಿಕೊಂಡರು. ಚಿತ್ರಕ್ಕೆ ವಿನು ಮನಸು ಸಂಗೀತ, ಪ್ರವೀಣ್ ಎಸ್ ಛಾಯಾಗ್ರಹಣ ಚಿತ್ರಕ್ಕಿದೆ.