Advertisement
ಆಯಾ ಕಾಲಕ್ಕೆ, ಜನರಿಗೆ ಹತ್ತಿರ ಆಗುವ ವಸ್ತುಗಳು ಬೇಗ ಜನಪ್ರಿಯವಾಗುತ್ತವೆ ಎಂದು ಹೇಳಬಹುದು. ಬೇರೆಯವರು ಉಪಯೋಗಿಸುತ್ತಿದ್ದಾರ ಎಂಬ ಏಕೈಕ ಕಾರಣಕ್ಕೆ ನಾವು ಹೊಸ ವಸ್ತುಗಳನ್ನು ಬಳಸುವ ಬದಲು ಅವುಗಳ ಗುಣ- ಅವಗುಣಗಳನ್ನು ತಿಳಿದುಕೊಂಡು, ನಮಗೆ ಹೇಗೆ ಉಪಯುಕ್ತ ಎಂಬುದನ್ನು ನಿರ್ಧರಿಸಿ ಮುಂದುವರಿಯುವುದು ಸೂಕ್ತ. ಜೊತೆಗೆ, ನಮ್ಮ ಬಜೆಟ್‌ಗೆ ಸರಿಹೊಂದುತ್ತದೆಯೇ? ಎಂಬುದನ್ನೂ ಮುಖ್ಯವಾಗಿ ಗಮನಿಸಬೇಕಾಗುತ್ತದೆ.
Related Articles
Advertisement
ಮೇಂಟೆನೆನ್ಸ್ ಬಗ್ಗೆ ಗಮನ ವಹಿಸಿ : ಅನೇಕ ಬಾರಿ ದುಬಾರಿ ಹಾಗೂ ವೈವಿಧ್ಯಮಯ ಟೈಲ್ಸ್‌ಗಳನ್ನು ನೋಡಿಕೊಳ್ಳುವುದೇ ದೊಡ್ಡ ತಲೆನೋವಾಗಿ ಬಿಡುತ್ತದೆ. ಸ್ವಲ್ಪ ಗೀರುಗಳು ಬಂದರೂ, ಢಾಳಾಗಿ ಎದ್ದು ಕಾಣಿಸಿಬಿಡುತ್ತದೆ. ಆದುದರಿಂದ ನಾವು ಟೈಲ್ಸ್‌ಗಳನ್ನು ಆಯ್ದುಕೊಳ್ಳಬೇಕಾದರೆ, ಸುಲಭವಾಗಿ ಶುದ್ಧಗೊಳಿಸಿ ಕಾಪಾಡಿಕೊಳ್ಳಬಹುದಾದಂಥ ವಿನ್ಯಾಸ ಹಾಗೂ ಮಾದರಿಯನ್ನು
ಅಳವಡಿಸಿಕೊಳ್ಳಬೇಕು. ಟೈಲ್ಸ್‌ಗಳು ದೊಡ್ಡದಾದಷ್ಟೂ ಅವು ಬಿರುಕು ಬಿಡುವ ಸಾಧ್ಯತೆ ಹೆಚ್ಚು. ಜೊತೆಗೆ, ಒಂದು ಕಡೆ ಸ್ವಲ್ಪ ಮುರಿದರೂ ಇಡೀ ಬಿಲ್ಲೆಯನ್ನು ತೆಗೆದು ಹೊಸದನ್ನು ಹಾಕಬೇಕಾಗುತ್ತದೆ. ಜೊತೆಗೆ ಅದೇ ಮಾದರಿಯ ಟೈಲ್ಸ್ ಮತ್ತೆ ಸಿಗುತ್ತದೆ ಎಂಬ ಖಾತರಿ ಏನೂ ಇರುವುದಿಲ್ಲ. ಆದುದರಿಂದ ನಮ್ಮ ಮನೆಯಲ್ಲಿ ಎಲ್ಲೆಲ್ಲಿ ಹೆಚ್ಚು ಒಡೆಯುವ ಸ್ಥಳಗಳು ಇರುತ್ತವೋ ಅಲ್ಲೆಲ್ಲ, ಸಣ್ಣಗಾತ್ರದ ಟೈಲ್ಸ್‌ಗಳನ್ನು ಹಾಕುವುದು ಒಳ್ಳೆಯದು.
ಫರ್ನಿಚರ್- ಪೀಠೊಪಕರಣಗಳನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಆಗಿಂದಾಗ್ಗೆ ಬದಲಾಯಿಸುವ ಅಭ್ಯಾಸ ಇದ್ದರೆ, ಒಂದು ತೊಂದರೆ ಸಾಮಾನ್ಯವಾಗಿ ಆಗಿಯೇ ಆಗುತ್ತದೆ. ಅವುಗಳನ್ನು ಎಳೆದು ಹಾಕುವಾಗ, ನೂಕುವಾಗ ನೆಲಕ್ಕೆ ಘಾಸಿ ಆಗುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಹಾಗಾಗಿ ಅಲ್ಲೆಲ್ಲ ಸಣ್ಣಗಾತ್ರದ ಟೈಲ್ಸ್ ಹೆಚ್ಚು ಸೂಕ್ತ. ನಾವು ಮನೆಯನ್ನು ಪದೇಪದೇ ಕಟ್ಟುವುದಿಲ್ಲ. ಹಾಗಾಗಿ, ಕಟ್ಟುವ ಮನೆಯ ಅತಿ ಮುಖ್ಯ ಭಾಗವಾದ ನೆಲಹಾಸನ್ನು, ಎಲ್ಲ ಕೋನಗಳಿಂದಲೂ ಯೋಚಿಸಿ ಮುಂದುವರಿಯುವುದು ಉತ್ತಮ.
ಚೇತೋಹಾರಿಯಾದ ಬಣ್ಣಗಳು : ಕೆಲವೊಮ್ಮೆ ಹೊಸತು ಎಂದು ಚಿತ್ರವಿಚಿತ್ರ ಬಣ್ಣಗಳು ಮಾರುಕಟ್ಟೆಗೆ ಬರುತ್ತವೆ, ಅವುಗಳ ವಿಶೇಷತೆ ಏನೆಂದರೆ ಅವು ಹೊಸತು ಎಂಬುದೇ ಆಗಿರುತ್ತದೆ. ಹೀಗೆ ಹೊಸತರ ಹಿಂದೆ ಬೀಳದೆ, ನಮ್ಮ ಆಯ್ಕೆ ನಮಗಿಷ್ಟವಾದ ಬಣ್ಣ ವಿನ್ಯಾಸವೇ ಆಗಿದ್ದರೆ ಒಳ್ಳೆಯದು. ಹೊಸತು ಎಂಬುದು ಇವತ್ತು ಇದ್ದು, ನಾಳೆ ಹೋಗಿಬಿಡುತ್ತದೆ. ಆದರೆ, ನಮಗಿಷ್ಟ ಆದದ್ದು ಹತ್ತಾರು ವರ್ಷ ಹೊಸದಾಗೇ ಇರುತ್ತದೆ. ಕೆಲವು ಬಣ್ಣಗಳು ಮನಸ್ಸಿಗೆ ಮುದ ನೀಡುತ್ತವೆ. ನಮ್ಮನ್ನು ಉತ್ತೇಜಿಸುವಂತೆ ಇರುತ್ತವೆ. ಈ ಗುಂಪಿಗೆ ಕೆಂಪು ಹಾಗೂ ಹಳದಿಯ ಜೊತೆಗೆ ಅವುಗಳ ಮಿಶ್ರಣ ಆದಾಗ ಉಂಟಾಗುವ ಇತರೆ ಬಣ್ಣಗಳು- ಕೇಸರಿ ಇತ್ಯಾದಿ ಇರುತ್ತದೆ. ಬಣ್ಣ ಎಂದರೆ ಅದು ಗಾಢವಾಗಿ ಇರಲೇಬೇಕು ಎಂದೇನೂ ಇಲ್ಲ. ಆ ಗುಂಪಿನ ತೆಳು ಮಾದರಿ ಆದರೂ ಮನಸ್ಸಿಗೆ ಮುದ ನೀಡುತ್ತದೆ. ಅದೇ ರೀತಿಯಲ್ಲಿ ಕೆಲ ಬಣ್ಣಗಳು ನಮ್ಮನ್ನು ನಿರಾಳ ಆಗುವಂತೆ, ಶಾಂತ ಮನಸ್ಥಿತಿಗೆ ತಲುಪುವಂತೆ ಮಾಡಬಲ್ಲವು. ಹಸಿರು, ನೀಲಿ ಈ ಗುಂಪಿನ ಪ್ರಮುಖ ಬಣ್ಣಗಳು. ಇವು ಕೂಡ ಗಾಢವಾಗಿ ಇರಬೇಕು ಎಂದೇನೂ ಇಲ್ಲ.
ಅಳತೆ ನೋಡಿ ಟೈಲ್ಸ್ ಆಯ್ಕೆ : ನಮ್ಮ ಮನೆಯ ಗಾತ್ರ ನೋಡಿ ಟೈಲ್ಸ್ ಸೈಝ್ ನಿರ್ಧರಿಸುವುದು ಒಳ್ಳೆಯದು. ತೀರಾ ದೊಡ್ಡದಾದ ಟೈಲ್ಸ್‌ಗಳು ಸಣ್ಣ ನಿವೇಶನಗಳಿಗೆ ಸರಿಹೊಂದುವುದಿಲ್ಲ. ಸಾಮಾನ್ಯವಾಗಿ ಸಣ್ಣ ಗಾತ್ರದ ಟೈಲ್ಸ್ ಒಂದು ಕೋಣೆಯನ್ನು ದೊಡ್ಡದಾಗಿ ಕಾಣುವಂತೆ ಮಾಡಬಲ್ಲವು, ಹಾಗೆಯೇ ದೊಡ್ಡವು, ಕೆಲವೊಮ್ಮೆ ಇರುವ ಸ್ಥಳವನ್ನು ಕುಗ್ಗಿದಂತೆ= ತೋರಿಸಬಲ್ಲವು. ಅದೇ ರೀತಿಯಲ್ಲಿ, ಗಾಢಬಣ್ಣಗಳು ಕೋಣೆಯನ್ನು ಚಿಕ್ಕದಾಗಿಸುತ್ತವೆ. ತೆಳು ಬಣ್ಣಗಳು, ಇರುವ ಸಣ್ಣಸ್ಥಳವೂ ವಿಶಾಲವಾಗಿ ಇರುವಂತೆ ಮಾಡಬಲ್ಲವು! ಹಾಗೆಯೇ, ಗೆರೆಗಳ ವಿನ್ಯಾಸ ಉದ್ದುದ್ದಕ್ಕೆ ಇದ್ದರೆ, ಇರುವ ಸ್ಥಳ ಹಿಗ್ಗುತ್ತದೆ. ಅಡ್ಡಾದಿಡ್ಡಿ ಯಾಗಿದ್ದರೆ, ಕುಗ್ಗಿದಂತೆ ಕಾಣುತ್ತದೆ. ಸಣ್ಣ ಸಣ್ಣ ಅಳತೆಯ ಅನೇಕ ಚಿತ್ತಾರಗಳು ಟೈಲ್ಸ್ ಮೇಲಿದ್ದರೆ, ಕೋಣೆಗಳು ಸ್ವಲ್ಪ ದೊಡ್ಡದಾಗಿ ಕಾಣುತ್ತವೆ.
ಮಾಹಿತಿಗೆ : 9844132826,
ಆರ್ಕಿಟೆಕ್ಟ್ ಜಯರಾಮ್ ಕೆ.