ಬಂಟ್ವಾಳ: ಕಳೆದ 10 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಕೊನೆಗೂ ಪಾಣೆಮಂಗಳೂರಿನಲ್ಲಿ ಸೂರು ನಿರ್ಮಾಣಗೊಂಡಿದ್ದು, ಸುಮಾರು 3.18 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಠಾಣಾ ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡು ಆವರಣ ಗೋಡೆ-ಇಂಟರ್‌ಲಾಕ್ ಕಾಮಗಾರಿ ಬಾಕಿ ಇದೆ. ಬಂಟ್ವಾಳಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರಾದ ವರ್ಷದಿಂದಲೂ ಕಟ್ಟಡ ನಿರ್ಮಾಣಕ್ಕೆ ನಿವೇಶನ ಹುಡುಕಲು ಆರಂಭಿಸಲಾಗಿದ್ದು, ಆದರೆ ಸೂಕ್ತ ನಿವೇಶನ ಸಿಗದೆ ಠಾಣೆಯು ಬಾಡಿಗೆ ಕಟ್ಟಡಕ್ಕೆ ಸೀಮಿತವಾಗಿತ್ತು. ಗೂಡಿನಬಳಿಯ ಹಳೆ ಪಶು ಸಂಗೋಪನ ಇಲಾಖಾ ಕಟ್ಟಡದ ಜಾಗ ಠಾಣೆಗೆ ಮಂಜೂರಾದರೂ, ಅಲ್ಲಿ ಸೂಕ್ತ ಜಾಗವಿಲ್ಲದೆ ಕಟ್ಟಡ ನಿರ್ಮಾಣ ಸಾಧ್ಯವಾಗಿರಲಿಲ್ಲ.
ಬಳಿಕ 2023ರಲ್ಲಿ ಪಾಣೆಮಂಗಳೂರು ಗೂಡಿನಬಳಿ ಹಳೆ ಸೇತುವೆಯು ಸಮೀಪ ಸುಮಾರು 78 ಸೆಂಟ್ಸ್ ನಿವೇಶನವೊಂದನ್ನು ಠಾಣೆಗೆ ಅಂತಿಮಗೊಳಿಸಲಾಗಿತ್ತು.ಈ ನಡುವೆ ಮೆಲ್ಕಾರ್ ಸಮೀಪದ ಬೋಳಂಗಡಿ ಹೆದ್ದಾರಿ ಬದಿಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸಂಚಾರ ಠಾಣೆಯು ಹೆದ್ದಾರಿ ಕಾಮಗಾರಿಯ ಕಾರಣಕ್ಕೆ ಮಾರ್ನಬೈಲಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತಗೊಂಡಿತ್ತು.
ಪ್ರಸ್ತುತ ನಿರ್ಮಾಣಗೊಂಡಿರುವ ಸಂಚಾರ ಠಾಣೆಯ ನೂತನ ಕಟ್ಟಡವು ತಾಲೂಕು ಕೇಂದ್ರ ಬಿ.ಸಿ.ರೋಡ್ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಅತೀ ಸಮೀಪದಲ್ಲಿದ್ದು, ಹೆದ್ದಾರಿಯ ಜತೆಗೆ ಹಳೆ ಸೇತುವೆಯ ಮೂಲಕ ಸಾಗಿದ ರಸ್ತೆಯಲ್ಲೂ ಠಾಣಾ ಕಟ್ಟಡವನ್ನು ಸಂಪರ್ಕಿಸಬಹುದಾಗಿದೆ. ಠಾಣೆಗೆ ಮಂಜೂರಾಗಿದ್ದ ನಿವೇಶನ ರಸ್ತೆಯಿಂದ ತಳ ಭಾಗದಲ್ಲಿದ್ದು, ಹೀಗಾಗಿ ಮೇಲಕ್ಕೆ ಪಿಲ್ಲರ್‌ಗಳನ್ನು ಎಬ್ಬಿಸಿ ರಸ್ತೆಗೆ ಸಮವಾಗಿ ಠಾಣಾ ಕಟ್ಟಡವನ್ನು ನಿರ್ಮಿಸಲಾಗಿದೆ. ಜತೆಗೆ ತಳ ಭಾಗವು ಪ್ರವಾಹದ ಸಂದರ್ಭ ನೀರು ನಿಲ್ಲುವ ಜಾಗವಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಕಟ್ಟಡ ಕಾಮಗಾರಿಯನ್ನು ನಿರ್ವಹಿಸಿದ್ದು, ಕಳೆದ ಎಪ್ರಿಲ್ 17ಕ್ಕೆ ಕಾಮಗಾರಿ ಆರಂಭಗೊಂಡಿತ್ತು. ಕಾಮಗಾರಿ ಮುಗಿಸಲು 11 ತಿಂಗಳ ಕಾಲಾವಕಾಶ ನೀಡಲಾಗಿತ್ತಾದರೂ, ಕೊಂಚ ವಿಳಂಬವಾದರೂ ಠಾಣಾ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ.
ಒಟ್ಟು ಸುಮಾರು 4,035 ಚ.ಅಡಿ ವಿಸ್ತೀರ್ಣದಲ್ಲಿ ಠಾಣಾ ಕಟ್ಟಡ ನಿರ್ಮಾವಾಗಿದ್ದು, ತಳ ಭಾಗದಲ್ಲಿ ಪ್ರತ್ಯೇಕ ಶೌಚಾಲಯಗಳು, ನೆಲ ಅಂತಸ್ತಿನಲ್ಲಿ ಇನ್ಸ್ ಪೆಕ್ಟರ್ ಕೊಠಡಿ, 4 ಪಿಎಸ್‌ಐಗಳ ಕೊಠಡಿ, 1 ವಯರ್‌ಲೆಸ್ ಕೊಠಡಿ, 1 ವರ್ಕ್ ಸ್ಟೇಷನ್ ನಿರ್ಮಾಣವಾಗಿದೆ. ಪ್ರಥಮ ಮಹಡಿಯಲ್ಲಿ ಮಹಿಳಾ ಹಾಗೂ ಪುರುಷರ ಪ್ರತ್ಯೇಕ ರೆಸ್ಟ್ ರೂಮ್‌ಗಳು, ಸ್ಟೋರ್, ರೆಕಾರ್ಡ್ ರೂಮ್, ಪ್ರತ್ಯೇಕ ಶೌಚಾಲಯಗಳು ನಿರ್ಮಾಣವಾಗಿದೆ.
ಪ್ರಸ್ತುತ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಆವರಣ ಗೋಡೆ, ಇಂಟರ್‌ಲಾಕ್ ಅಳವಡಿಕೆಯ ಕಾಮಗಾರಿನಡೆಯಬೇಕಿದೆ. ಇಂಟರ್‌ಲಾಕ್ ಅಳವಡಿಕೆಗೆ ಮಳೆಕೊಂಚ ಅಡ್ಡಿಯಾಗಿದ್ದು, ಮಣ್ಣು ಸಿಂಕ್ ಆಗುವ ಆತಂಕ ಕಾಡುತ್ತಿದೆ. ಹೀಗಾಗಿ ಮಳೆ ಕೊಂಚ ಕಡಿಮೆಯಾಗಲು ಕಾಯಲಾಗುತ್ತಿದೆ ಎನ್ನಲಾಗಿದೆ.
ಆ. 15ರೊಳಗೆ ಉದ್ಘಾಟನೆ?
ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಯ ದಿನಾಂಕ ಮುಂದೆ ಹೋಗುತ್ತಿದೆ ಎನ್ನಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಆ. 15ರೊಳಗೆ ಕಟ್ಟಡಉದ್ಘಾಟನೆಗೊಳ್ಳುತ್ತದೆ ಎನ್ನಲಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಸಚಿವರು – ಶಾಸಕರಗಳ ಅನುಮತಿ ಸಿಗಬೇಕಿದ್ದು, ಜತೆಗೆ ಹಿರಿಯ ಅಧಿಕಾರಿಗಳ ಸಮಯವನ್ನೂ ಹೊಂದಿಕೆ ಮಾಡಬೇಕಿದೆ ಎನ್ನಲಾಗಿದೆ.