Advertisement

ಹೊಸ ಬಿಪಿಎಲ್‌ ಕಾರ್ಡ್‌; ಜಿಲ್ಲೆಯ 2,237 ಅರ್ಜಿ ತಿರಸ್ಕೃತ

10:20 AM Jul 30, 2022 | Team Udayavani |

ಪುತ್ತೂರು: ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಬೇಕಾದ ಮಾನದಂಡ ಹೊಂದಿರದ ಕಾರಣಕ್ಕಾಗಿ ದ.ಕ. ಜಿಲ್ಲೆಯಲ್ಲಿ 2,237 ಅರ್ಜಿಗಳು ತಿರಸ್ಕೃತಗೊಂಡಿವೆ.

Advertisement

ಪಡಿತರ ಚೀಟಿ ಹೊಂದಿಲ್ಲದ ಫಲಾನು ಭವಿ ಗಳು ಸೂಕ್ತ ದಾಖಲೆಗಳೊಂದಿಗೆ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆಹಾರ. ನಾಗರಿಕ ಇಲಾಖೆ ಅವಕಾಶ ನೀಡಿತ್ತು. ಅರ್ಜಿ ಸಲ್ಲಿಕೆಗೆ ಈಗಲೂ ಅವಕಾಶ ಇದೆ.

ಬಿಪಿಎಲ್‌ ಕಾರ್ಡ್‌ ವಿವರ

ದ.ಕ.ದಲ್ಲಿ ಬಿಪಿಎಲ್‌ ಕಾರ್ಡ್‌ಗೆ 13,642 ಅರ್ಜಿಗಳು ಸಲ್ಲಿಕೆ ಆಗಿದ್ದು 783 ಅರ್ಜಿ ಹಿಂಪಡೆಯಲಾಗಿದೆ. ಇದರಲ್ಲಿ 12,431 ಅರ್ಜಿಗಳು ಪರಿಶೀಲನೆಗೆ ಒಳಪಟ್ಟಿವೆ. 9,659 ಮಂದಿಗೆ ಕಾರ್ಡ್‌ ನೀಡಲಾಗಿದೆ. 2,237 ತಿರಸ್ಕೃತಗೊಂಡಿವೆ. 3,983 ವಿತರಣೆಗೆ ಬಾಕಿ ಇವೆ ಎನ್ನುತ್ತಿದೆ ಅಂಕಿ – ಅಂಶ. ಗರಿಷ್ಠ ಅರ್ಜಿ ಸಲ್ಲಿಕೆ ಆಗಿರುವ ಮಂಗಳೂರಿನಲ್ಲಿ 4,841 ಕಾರ್ಡ್‌ ವಿತರಿಸಲಾಗಿದೆ. ಕನಿಷ್ಠ ಅರ್ಜಿ ಸಲ್ಲಿಕೆ ಆಗಿರುವ ಸುಳ್ಯದಲ್ಲಿ 539 ಕಾರ್ಡ್‌ ಗಳನ್ನು ನೀಡಲಾಗಿದೆ.

ಇನ್ನೆರಡು ತಿಂಗಳು ಸ್ಥಗಿತ

Advertisement

ವಿಳಂಬ ಪ್ರಕ್ರಿಯೆ, ಸ್ಥಳ ಪರಿಶೀಲನೆ ನಡೆಸಬೇಕು ಎಂಬ ಹೊಸ ನಿಯಮ ಗಳಿಂದಾಗಿ ಅರ್ಜಿ ಸಲ್ಲಿಕೆ ಪ್ರಾರಂಭವಾಗಿ ಭರ್ತಿ ಒಂದು ವರ್ಷ ಕಳೆದರೂ ಅರ್ಜಿ ಸಲ್ಲಿಸಿದವರಿಗೆ ಬಿಪಿಎಲ್‌ ಪಡಿತರ ಚೀಟಿ ಸಿಕ್ಕಿರಲಿಲ್ಲ. ಅದಾದ ಕೆಲವು ದಿನಗಳಲ್ಲಿ ವಿತರಣೆ ಪ್ರಾರಂಭಗೊಂಡಿತು. ಪ್ರಸ್ತುತ 3,983 ಕಾರ್ಡ್‌ಗಳು ವಿತರಿಸಲು ಬಾಕಿ ಇವೆ. ಜುಲೈಯಿಂದ ವಿತರಣೆಯನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ಇನ್ನೆರಡು ತಿಂಗಳು ಹೊಸ ಕಾರ್ಡ್‌ ವಿತರಿಸಲಾಗುವುದಿಲ್ಲ ಎಂಬ ಮಾಹಿತಿ ಲಭಿಸಿದೆ.

2,680 ಪಡಿತರ ಚೀಟಿ ರದ್ದು

ನಿಯಮಕ್ಕೆ ವಿರುದ್ಧವಾಗಿ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿ ಪಡೆದವರನ್ನು ಪತ್ತೆ ಮಾಡಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದ.ಕ.ದಲ್ಲಿ ಒಂದು ವರ್ಷದಲ್ಲಿ (2021ರ ಎಪ್ರಿಲ್‌ 1ರಿಂದ 30 ಮಾರ್ಚ್‌ 2022ರ ವರೆಗೆ) 2,680 ಪಡಿತರ ಚೀಟಿಗಳನ್ನು ರದ್ದುಪಡಿಸಿದೆ. ಅನರ್ಹರು ಸುಳ್ಳು ದಾಖಲೆ ನೀಡಿ ಪಡೆದಿರುವ ಪಡಿತರ ಚೀಟಿಗಳನ್ನು ಹಿಂದಿರುಗಿಸಲು ಸರಕಾರ ಸಾಕಷ್ಟು ಸಮಯಾವಕಾಶ ನೀಡಿತ್ತು. ಕಂದಾಯ ಇಲಾಖೆ, ತೆರಿಗೆ ಇಲಾಖೆಗಳಿಂದ ದತ್ತಾಂಶ ಪಡೆದು ಅನರ್ಹ ಕಾರ್ಡುಗಳನ್ನು ರದ್ದುಪಡಿಸಲು ಆಹಾರ ಇಲಾಖೆ ಕ್ರಮ ಕೈಗೊಂಡಿತ್ತು. ಈ ತನಕ ಜಿಲ್ಲೆಯಲ್ಲಿ ಒಟ್ಟು 19,463 ಹೆಸರನ್ನು ಪಡಿತರ ಚೀಟಿಯಿಂದ ಕೈ ಬಿಡಲಾಗಿದೆ.

ಶೀಘ್ರ ಪುನರಾರಂಭ: ಕಾರ್ಡ್‌ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು ಕೆಲವು ದಿನಗಳಲ್ಲಿ ಪುನರಾರಂಭ ಗೊಳ್ಳಲಿದೆ. ಸಾಫ್ಟ್ವೇರ್‌ ಅಪ್‌ಡೇಟ್‌ ಆಗುವ ಕಾರಣ ಸ್ಥಗಿತ ಆಗಿದೆ. ಹೊಸ ಕಾರ್ಡ್‌ಗೆ ಗ್ರಾಮ ವನ್‌ ಕೇಂದ್ರ, ಸೈಬರ್‌ ಸಹಿತ ವಿವಿಧೆಡೆ ಅರ್ಜಿ ಸಲ್ಲಿಸಲು ಅವಕಾಶ ಇದೆ. –ಎನ್‌. ಮಾಣಿಕ್ಯ, ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಇಲಾಖೆ, ದ.ಕ. ಜಿಲ್ಲೆ

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next