Advertisement

ಕ್ರೈಸ್ತರು ಸಾಮಾಜಿಕ ಸಾಮರಸ್ಯಕ್ಕೆ ಹೆಸರು: ನಳಿನ್‌

02:35 AM Aug 28, 2018 | Team Udayavani |

ಮಂಗಳೂರು: ಕ್ರೈಸ್ತರು ಸಾಮಾಜಿಕ ಸಾಮರಸ್ಯಕ್ಕೆ ಹೆಸರಾಗಿದ್ದು, ಮಂಗಳೂರಿನ ಬಿಷಪರು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು. ಮಂಗಳೂರಿನ ನೂತನ ಬಿಷಪ್‌ ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರ ದೀಕ್ಷೆ ಮತ್ತು ಪದಗ್ರಹಣ ಸಮಾರಂಭದ ಸಿದ್ಧತೆಯ ಅಂಗವಾಗಿ ನಗರದ ರೊಜಾರಿಯೋ ಕೆಥೆಡ್ರಲ್‌ ಆವರಣದಲ್ಲಿ ಸೋಮವಾರ ಚಪ್ಪರ ಮುಹೂರ್ತವನ್ನು ಸಂಸದರು ನೆರವೇರಿಸಿದರು.

Advertisement

ಕೇಂದ್ರ ಸರಕಾರವು ಸ್ವಚ್ಛ ಭಾರತ್‌ ಅಭಿಯಾನವನ್ನು ಘೋಷಿಸಿದಾಗ ಮಂಗಳೂರಿನ ಬಿಷಪರು ಅದನ್ನು ಮೊದಲು ಅನುಷ್ಠಾನಿಸಿದರು. 2008 ಸೆಪ್ಟಂಬರ್‌ನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾದಾಗ ಬಿಷಪ್‌ ಮುತುವರ್ಜಿ ವಹಿಸಿ ಸಭೆ ಕರೆದು ಅಭಿಪ್ರಾಯ ಭೇದಗಳನ್ನು ನಿವಾರಿಸಿ ಸಮಸ್ಯೆ ಬಗೆಹರಿಸಲು ಸಹಕರಿಸಿದರು ಎಂದು ನಳಿನ್‌ ಹೇಳಿದರು. ಮಾಜಿ ಶಾಸಕ ಜೆ.ಆರ್‌. ಲೋಬೊ ಮತ್ತು ವಿಧಾನ ಪರಿಷತ್‌ ಸದಸ್ಯ ಐವನ್‌ಡಿ’ಸೋಜಾ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ನಳಿನ್‌ ಕುಮಾರ್‌ ಕಟೀಲು ಅವರನ್ನು ಅಭಿನಂದಿಸಿದರು.

ಸೆ. 15ರಂದು ಪದಗ್ರಹಣ
ಕಾರ್ಯಕ್ರಮದ ಸಂಯೋಜಕ ಹಾಗೂ ಧರ್ಮಪ್ರಾಂತದ ಪಾಲನಾ ಪರಿಷತ್ತಿನ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ ಅವರು ಸೆ. 15ರಂದು ನಡೆಯುವ ನೂತನ ಬಿಷಪ್‌ ಅವರ ಪದಗ್ರಹಣ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಜಗತ್ತು ಒಂದು ಗ್ರಾಮವಾಗಿದ್ದು, ಕ್ರೈಸ್ತರು ಬಹುಸಂಖ್ಯಾಕರಾಗಿದ್ದಾರೆ; ಆದರೆ ಭಾರತದಲ್ಲಿ ಅಲ್ಪಸಂಖ್ಯಾಕರು. ಬಿಷಪ್‌ ಅವರ ದೀಕ್ಷೆ ಮತು ಪದಗ್ರಹಣ ಸಮಾರಂಭವನ್ನು ಇಡೀ ಜಗತ್ತೇ ವೀಕ್ಷಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ಸಂಸದ ನಳಿನ್‌ ಕುಮಾರ್‌ ಅವರು ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ. ಸಾಮರಸ್ಯ ಮತ್ತು ಸೌಹಾರ್ದದ ವಾತಾವರಣ ಸೃಷ್ಟಿಸುವಲ್ಲಿ ಇದು ಪೂರಕವಾಗಲಿದೆ ಎಂದರು.

ಮುಖ್ಯ ಸಂಯೋಜಕ ರೊಜಾರಿಯೊ ಕೆಥೆಡ್ರಲ್‌ನ ರೆಕ್ಟರ್‌ ಫಾ| ಜೆ.ಬಿ. ಕ್ರಾಸ್ತಾ, ಕಾರ್ಪೊರೇಟರ್‌ ಅಬ್ದುಲ್‌ ಲತೀಫ್‌, ಸಂಚಾಲಕ ಫಾ| ಒನಿಲ್‌ ಡಿ’ಸೋಜಾ, ಫಾ| ವಿನ್ಸೆಂಟ್‌ ಮೊಂತೇರೊ, ಫಾ| ರಿಚಾರ್ಡ್‌ ಡಿ’ಸೋಜಾ, ಫಾ| ವಿಜಯ್‌ ವಿಕ್ಟರ್‌ ಲೋಬೊ, ಲುವಿ ಜೆ. ಪಿಂಟೊ, ಮಾರ್ಸೆಲ್‌ ಮೊಂತೇರೊ, ಸುಶಿಲ್‌ ನೊರೋನ್ಹಾ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next